ಅಂಗಳದಲ್ಲಾಡುವ ನವಿಲು

0
211
Tap to know MORE!

ಬೆಳಗ್ಗೆ ತೀರಾ ಬೇಗನೆ ಏಳಬೇಕಾದ ಒತ್ತಡವಿಲ್ಲದ್ದರಿಂದ ,ಮತ್ತು ಎದ್ದು ಮಾಡಬೇಕಾದ ಕೆಲಸವೇನೂ ಇಲ್ಲದ್ದರಿಂದ ಇನ್ನೂ ಹಾಸಿಗೆಯಲ್ಲಿಯೇ ಹೊರಳಾಡುತ್ತಿದ್ದೆ. ಅದಕ್ಕೆ ಸರಿಯಾಗಿ ರಾತ್ರಿಯಿಂದ ಒಂದೇಸಮನೆ ಸುರಿಯುತ್ತಿದ್ದ ಮಳೆ ಬೇರೆ ಕಿವಿಯಲ್ಲಿ ಬಂದು ನನ್ನನ್ನು ಮಲಗು‌,ಮಲಗೂ ಯೆನ್ನುತ್ತಿತ್ತು.‌

ಆರು ,ಆರೂವರೆಯಿರಬಹುದು ಹೆಂಡತಿ ಬಂದು ಮೈಮುಟ್ಟಿ ಅಲುಗಾಡಿಸಿ ಎದ್ದೇಳುವಂತೆ ಸೂಚಿಸಿದಳು. ನಾನು ಏಕೆ ಎನ್ನುವಷ್ಟರಲ್ಲಿ ಮಾತನಾಡದಂತೆ ಸನ್ನೆ ಮಾಡಿ ಹಿಂಬಾಲಿಸಲು ಸೂಚಿಸಿ ,ಮೆಲ್ಲಗೆ ನಡೆದಳು.
ಏನೋಯಿದೆಯೆಂದು ಹೊರಬಂದು ಆಕೆ ತೋರಿಸಿದ ಕಡೆಗೆ ನೋಡಿದೆ!!!

ಓಹ್! ಚೆಲುವನೋಟ!!ಮನೆಯಂಗಳದ ತುಳಸಿ ಕಟ್ಟೆಯ ಬಳಿ ನವಿಲೊಂದು ತನ್ನ ಗರಿಗಳನ್ನ ಚಾಮರದಂತೆ ಹರಡಿ ನರ್ತನ‌ಮಾಡುತ್ತಿದೆ!!!
ನವಿಲಿನ‌ ತನ್ಮಯ ಭಾವಕ್ಕೆ ಭಂಗ ತರಲಾರೆವೆಂಬ ನಿಶ್ಚಯದಿಂದ ಗೂಡಿನಲ್ಲಿರುವ ನಾಯಿಗಳೆರಡೂ ,ಮುಂದಿನ ಕಾಲುಗಳನ್ನು ಚಾಚಿ ತಲೆಯನ್ನು ಕಾಲುಗಳ ನಡುವೆ ಹುದುಗಿಸಿ ಕಂಗಳನ್ನ ನವಿಲಿನ ಹೆಜ್ಜೆಯ ಮೇಲೇ ಕೇಂದ್ರಿಕರಿಸಿ ರಸಸ್ವಾಧ ಮಾಡುವಂತೆ ಕೂತಿವೆ!!.
ಕೆಲವು ಹೊತ್ತು ನಾವು ಮತ್ತು ನವಿಲುತನ್ಮಯರಾಗಿದ್ದೆವು. ಕಡೆಗೆ ನವಿಲು ತನ್ನ ನಾಟ್ಯ ಮುಗಿಸಿ ಘನಗಾಂಭೀರ್ಯದಲಿ ಮನೆಯ ಕಾಂಪೌಂಡನ್ನು ಹತ್ತಿ ಏನೂ ಗಡಿಬಿಡಿಯಿಲ್ಲದೆ ಅಲ್ಲಿಂದಿಳಿದು ಮುನ್ನಡೆಯಿತು.
ಆನಂತರವೇ ನಾವಿಬ್ಬರೂ ಉಸಿರಾಟವನ್ನು ಆರಂಭಿಸಿದೆವು ಅನ್ನಿಸುತ್ತದೆ.

ಪರಸ್ಪರ ಮುಖನೋಡಿ ಕಂಗಳಲ್ಲೇ ಆನಂದವನ್ನು ವ್ಯಕ್ತಪಡಿಸುತ್ತ ಯಾಕೋ ಪಕ್ಕದಲ್ಲಿ ನೋಡಿದರೆ ಸೊಫಾದ ‌ಮೇಲೆ ಹತ್ತಿ ಕಿಟಕಿಯ ಕಂಡಿಯಲ್ಲಿ ನೋಡುತ್ತಾ ಮಗಳೂ ನವಿಲಿನತ್ತಲೇ ಕಣ್ಣ ಕೀಲಿಸಿದ್ದಾಳೆ.
ಈಗ ನಮಗೆ ಇನ್ನಷ್ಟು ಖುಷಿಯಾಯಿತು. ಅರೆರೆ!!ಇವಳನ್ಯಾರು ಕರೆದರು?ನಮ್ಮನೆಯ ಮುದ್ದು ನವಿಲು ಮರಿಯನ್ನ?
ಎಚ್ಚರವಾಯಿತು, ಅಮ್ಮ ಕೈಗೆ ಸಿಗಲಿಲ್ಲ, ಬಂದೆ .ನೀವಿಬ್ಬರೂ ಏನೋ ನೊಡುತ್ತಿದ್ದಿರಿ, ನಾನೂ ನೋಡಿದೆ.
ಅಪ್ಪ,ಅಪ್ಪ ನನಗೂ ಒಂದು ನವಿಲು ಬೇಕು ಪ್ಲೀಸ್.ನನಗೆ ಆಡಲಿಕ್ಕೆ.!!

ನನಗೆ ಮಗಳ‌ ಈ ಮಾತಿನಿಂದಾಗಿ ಅವಳ ಮೇಲೇ ಪ್ರೀತಿ ಉಕ್ಕಿತು.
ನಾವು ಮಕ್ಕಳನ್ನ ಎಷ್ಟು ಪ್ರೀತಿಸುತ್ತೇವೆಂಬುದನ್ನ ಒಮ್ಮೆ ಮೆಲಕು ಹಾಕೋಣ, ಆ‌ ಮಕ್ಕಳ ಅಳು,ನಗು,ಅಂಬೆಗಾಲು,ತಪ್ಪುತಪ್ಪು ಹೆಜ್ಜೆ.ಬಿಜಿಲುಬಿಜಿಲು ಮಾತು,ಚೇಷ್ಠೆ,ಕೀಟಲೆ…ಇವೆಲ್ಲವೂ ಚಂದ.ಹಾಗಾಗಿ ನಾವು ಮಕ್ಕಳಿಗೆ ಚಂದ ಚಂದದ ಮೊಲ,ನವಿಲು.ಗುಬ್ಬಿಮರಿ.ಜಿಂಕೆಯೆಂದು ಕರೆವ ಮೂಲಕ ಸಂಭ್ರಮ ಪಡುತ್ತೇವೆ. ಮೂರು,ನಾಕು ತಿಂಗಳಾಗುತ್ತಿದ್ದ ಹಾಗೇ ಬಾಲಕೃಷ್ಣನ ವೇಷ‌ಹಾಕಿ ಸಂಭ್ರಮಿಸುತ್ತೇವೆ.
ಭಾರತೀಯರಿಗೆ ಮಕ್ಕಳು ಭಾವನಾತ್ಮಕವಾದ ಸಂಗತಿ.ನಮ್ಮ ತಲೆಮಾರಿನ ಮುಂದುವರಿಕೆಯ ಕೊಂಡಿಯಾದ ಈ ಮಕ್ಕಳು ಬರಿಯ ಅಷ್ಟೇ ಅಲ್ಲ ,ಇವು ಮನುಜಕುಲದ ಮುಂದುವರಿಕೆಯ ಕೊಂಡಿಗಳು, ಹಾಗಾಗಿಯೇ “ಮನುಜನಿಗೆ ಮಗುತಂದೆ”
ಇಂತಹ ಮಕ್ಕಳು ನಮಗಿರಲಿ ನೂರುಕಷ್ಟ ಬಂದರೂ ಎದರಿಸಿಯೇವು , ಮಕ್ಕಳಿಲ್ಲದ ಕಷ್ಟ ,ಕಡು ಕಷ್ಟ.
ಹಾಗಾಗಿಯೇ ಜನಪದರು ಮಕ್ಕಳ‌ಕೊಡು ಶಿವನೇ ಯೆಂದು ಹೇಳುತ್ತಾರೆ “ಅತ್ತಾರೆ ಅಳಲವ್ವ ಈ ಕೂಸು ನನಗಿರಲಿ ಕೆಟ್ಟಾರೆ ಕೆಡಲಿ‌ ಮನೆಗೆಲಸ”

ಯಾಕೆಂದರೆ ಮಕ್ಕಳ‌ನಗು, ನೋಟ, ಓಡಾಟ ,ತಂದೆ ತಾಯಿಯರಿಗೆ ಅಭಿಮಾನದ ಸಂಗತಿ “ಕೂಸುಯಿದ್ದಾ ಮನೆಗೆ ಬೀಸಣಿಗೆ ಯಾತಾಕ ಕೂಸು ಕಂದಮ್ಮ ಒಳಹೊರಗ. ಆಡಿದರ ಬೀಸಣಿಕೆ ಗಾಳಿ ಸುಳಿದಾಂಗ” ತಮ್ಮ ಮಕ್ಕಳ ಪ್ರತೀ ಹಂತದಲ್ಲಿ ಇವರು ಚಲುವನ್ನೇ ಕಾಣುತ್ತಾರೆ “ಅಳುವ ಕಂದನ ತುಟಿಯು ಹವಳಾದ ಕುಡಿಹಾಂಗ ಕುಡಿಹುಬ್ಬು ಬೇವಿನೆಸಳಾಂಗ ಕಣ್ಣೋಟ ಶಿವನ‌ಕೈಯಲುಗು ಹೊಳೆದಾಂಗ”
ಇಂತಹ ಚಲುವ ಕಂದನನ್ನು ಹೇಗೆ ನೋಡುತ್ತಾರೆ?”ಆಡಿಬಾ ನನಕಂದ ಅಂಗಾಲ‌ತೊಳೆದೇನು ತೆಂಗೀನಕಾಯಿ ತಿಳಿನೀರ ತಕ್ಕೊಂಡು ಬಂಗಾರದ ಮೋರೆ ತೊಳೆದೇನು”
ಇಂತಹ ಕಂದ ನಮಗೆ ಬರಿಯ ಮಗುವಲ್ಲ, ದಾಂಪತ್ಯದ ಸಫಲತೆಯ ಈ ಕಂದ ನಮಗೆ ನಮ್ಮ ಗತಿಸಿದ ತಂದೆತಾಯಿಗಳ ಸ್ವರೂಪ.ಅದಕ್ಕಾಗಿಯೇ ನಾವು ನಮ್ಮ ತಂದೆತಾಯಿಗಳ ಹೆಸರನ್ನೇ ಮಕ್ಕಳಿಗಿಟ್ಟು ಸಂಭ್ರಮಿಸುತ್ತೇವೆ. ಇದಕ್ಕೆ ಸರಿಯಾಗಿ ಮಕ್ಕಳೂ ಕೂಡಾ ನಮ್ಮ ತಂದೆ ತಾಯಿ ಗಳನ್ನು ಹೋಲುವುದೂ,ನಡೆನುಡಿಗಳಲ್ಲಿ ಅವರನ್ನು ಅನುಕರಿಸುವುದೂ ಮಾಡಿ ನಮ್ಮ ಸಂತೋಷವನ್ನು ಹೆಚ್ಚಿಸುತ್ತವೆ.
ಪುರಾಣವಾಗಲಿ,ಇತಿಹಾಸ ವಾಗಲಿ ನಮ್ಮ ಜನ ಮಕ್ಕಳನ್ನು ಪಡೆಯಲು ಎಷ್ಟು ದಾನಧರ್ಮ ,ವೃತಕತೆ ಯಜ್ಞಯಾಗಗಳನ್ನು ಮಾಡುತ್ತಿದ್ದರು ಎಂಬುದನ್ನ ನೆನೆದರೆ ನಮಗೆ ಸಂತಾನದ ಅಭೀಪ್ಸೆ ಮತ್ತು ಮಹತ್ವ ಅರಿವಾಗುತ್ತದೆ.

ಮಕ್ಕಳೇ ನಮ್ಮ ಆಸ್ತಿ,ಅವರಿಗೆ ಮಾನವ ಪ್ರೀತಿ, ದಯೆ ಸದ್ಗುಣಗಳನ್ನು ಕಲಿಸಿ ಬೆಳೆಸುವುದೇ ನಮ್ಮ ಜವಬ್ದಾರಿ.
ಹಾಗಾಗಿ ನಮ್ಮ‌ಮಕ್ಕಳಿಗಾಗಿ ಅಂಗಳಕ್ಕೆ ನವಿಲು ಬರುವಂತಹ, ಹೂದೋಟಕ್ಕೆ ಮೊಲ,ಅಳಿಲು ಬರುವಂತಹ ,ಹೂಗಿಡಕ್ಕೆ ಹೂಹಕ್ಕಿ,ಗಿಣಿ, ಬರುವಂತಹ, ಮನೆಯೊಳಗೆ ನಮ್ಮ ಹಿರಿಯರ ಫೋಟೋಗಳ ಹಿಂದೆ ಗುಬ್ಬಿ ಗೂಡುಕಟ್ಟುವಂತಹ, ಕೊಟ್ಟಿಗೆಯಲ್ಲಿ ಹಸು ಕರು ಇರುವಂತಹ,ಹಸುವಿನ ಕೆಚ್ಚಲಿನಿಂದಲೇ ಹಾಲುಬರುವ ಸತ್ಯಗೋಚರಿಸುವಂತಹ,ಸಂಗತಿಗಳನ್ನ ನಮ್ಮ ಮಕ್ಕಳಿಗೆ ಪರಿಚಯಿಸಬೇಕು,
ಇದೇನೂ ಕಷ್ಟದಾಯಕವಲ್ಲ ಪ್ರಕೃತಿ ಯಲ್ಲಿ ನಾವು ಹಸ್ತಕ್ಷೇಪ ಮಾಡದಿದ್ದರಾಯಿತು,ಒಮ್ಮೆ ನಮ್ಮ‌ಮೇಲೆ ಪ್ರಾಣಿ,ಪಕ್ಷಿಗಳಿಗೆ ವಿಶ್ವಾಸ ಬಂದರಾಯಿತು ,ನೇರವಾಗಿ ನಮ್ಮ ಮನೆಯ ಅಂಗಳಕ್ಕೇ ಬರುತ್ತವೆ,ಆಗ ನಾವುನಿದ್ದೆಯಲ್ಲಿರದೇ ಎಚ್ಚರವಿದ್ದರಾಯಿತು.‌ಒಮ್ಮೆ ಸ್ನೇಹ ಕುದುರಿದರೆ!!!
ಮತ್ತೆ ಬದುಕೇ ಚಂದ.

https://suddivani.com/tag/ಹರೀಶ್-ಟಿ-ಜಿ/ಹರೀಶ್.ಟಿ.ಜಿ

LEAVE A REPLY

Please enter your comment!
Please enter your name here