ಅಂಟಿಗೆ – ಪಿಂಟಿಗೆ

0
313
Tap to know MORE!

ಕರ್ನಾಟಕದಲ್ಲಿ ಹಲವು ಪ್ರಕಾರದ ಜಾನಪದ ಕಲೆಗಳಿವೆ. ಕರಾವಳಿಯ‌ “ಯಕ್ಷಗಾನ”, ಉತ್ತರ ಕರ್ನಾಟಕದ “ವೀರಗಾಸೆ”, “ಡೊಳ್ಳು ಕುಣಿತ”, “ಕೋಲಾಟ”, ಮಲೆನಾಡಿನ “ಅಂಟಿಗೆ-ಪಿಂಟಿಗೆ” ಹೀಗೇ ಹತ್ತು ಹಲವು ಕಲೆಗಳು.
ಈ ಕಲೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳ ಹುಟ್ಟನ್ನು ನೀವೇ ಲೆಕ್ಕ ಹಾಕಬಹುದು. ಉದಾಹರಣೆಗೆ ಯಕ್ಷಗಾನದ ಭಾಗವತಿಕೆಯನ್ನು ಗಮನಿಸಿದರೆ ಆ ಹಾಡಿನ
ಆ….ಆ….ಆಹಾ…!!ಎನ್ನುವ ಆಲಾಪವೇ ಕಡಲಿನ ಅಲೆಯಂತಿರುವುದು. ಹಾಗೆಯೇ ವೀರಗಾಸೆ , ಡೊಳ್ಳು ಕುಣಿತ ಬಯಲು ಸೀಮೆಯ ಪ್ರದೇಶದಿಂದ ಹುಟ್ಟಿರುವುದರಿಂದ ಅವುಗಳು ರುದ್ರ….ದೇವ….ಎಂಬ ಆರ್ಭಟದಿಂದ ಕೂಡಿರುತ್ತದೆ, ಏಕೆಂದರೆ ಬಯಲು ಪ್ರದೇಶ ವಿಶಾಲವಾಗಿದ್ದು ಅನತಿ ದೂರದಲ್ಲಿ ಕೇಳಿಸುವ ಹಾಗೆ.
ಇಂದಿನ ವಿಷಯ ವಸ್ತುವೇ ನಮ್ಮ ಮಲೆನಾಡಿನಲ್ಲಿ, ಹಾಗೂ ಉತ್ತರ ಭಾಗದಲ್ಲಿ ಪ್ರಸಿದ್ಧಿಯಾಗಿರುವ ಈ‌ ಜನಪದ ಕಲೆ “ಅಂಟಿಗೆ-ಪಿಂಟಿಗೆ”. ದೀಪಾವಳಿಯ ಬಲಿಪಾಡ್ಯಮಿ ದಿನದಂದು ಊರಿನ ಮುಖ್ಯ ದೇವಸ್ಥಾನದಲ್ಲಿ ದೀಪವನ್ನು, ದೀಪಧಾರಿಗಳು ಹಚ್ಚಿಕೊಂಡು, ತಂಡದ ಮುಖ್ಯಸ್ಥನನ್ನು ಹಿಂಬಾಲಿಸುತ್ತಾರೆ. ಊರಿನ ಹಿರಿಯ ವ್ಯಕ್ತಿ ಮುಖ್ಯಸ್ಥರಾಗಿದ್ದು ,ಅವರ ಹಿಂದೆ ಮುಮ್ಮೇಳಧಾರಿಗಳು, ದೀವಟಿಗೆಯರು, ಹಾಡುವವರು, ಸಂಭಾವನೆ ಹೊರುವವರು ಹಾಗೂ ಹಿಮ್ಮೇಳಧಾರಿಗಳು ಇರುತ್ತಾರೆ. ಬಲಿಪಾಡ್ಯಮಿಯಿಂದ ಹಿಡಿದು ಮೂರು ದಿನಗಳವರೆಗೆ ಮನೆ ಮನೆಗೆ,‌ ಈ ಗುಂಪುಗಳು ದೀಪವನ್ನು ಹಿಡಿದುಕೊಂಡು ಜಾನಪದ ಗೀತೆಯನ್ನು ಒಕ್ಕೊರಲಿನಿಂದ ಹಾಡುವುದು. ಹೆಸರೇ ಸೂಚಿಸುವಂತೆ ದೀಪವನ್ನು ಮನೆಯ ಯಜಮಾನಿಗೆ ಈ ಹಾಡಿನ ಮೂಲಕ “ಬಾಗಿಲ ತೆರೆಯಮ್ಮ, ಭಾಗ್ಯದ ಲಕ್ಷ್ಮಮ್ಮ, ಜ್ಯೋತ್ಸಮ್ಮನ್ನೊಳಗೆ ಕರಕೊಳ್ಳಿ”. ಹಾಗೆಯೇ “ಜ್ಯೋತಿದ್ದ ಮನೆಯಲ್ಲಿ ರೀತ್ಯುಂಟು, ನೀತ್ಯುಂಟು, ಒಳ್ಳೆ ಮಾತುಗಳುಂಟು ಮನದಲ್ಲಿ” ಎಂದು ದೀಪವನ್ನು ಅಂಟಿಸಲು ಸೂಚಿಸುತ್ತಾರೆ ಮತ್ತು ಪಂಟಿಗೆ ಎಂದರೆ “ದೀಪಾವಳಿ” ಯಾ “ಹಬ್ಬ” ಎಂದರ್ಥ. ಮನೆಯೊಡತಿ ಹಣತೆಗೆ ಎಣ್ಣೆಯೆರೆದು, ತನ್ನ ಮನೆಯ ಹಣತೆಯನ್ನು ಹಚ್ಚಿ, ಅದರ ಮುಂದೆ ಅಕ್ಕಿ,ಕಾಯಿ, ಹಬ್ಬದ ತಿಂಡಿ-ತಿನಿಸು, ಚಿಲ್ಲರೆ ಹಣವಿಟ್ಟು ಕೈ ಮುಗಿಯುತ್ತಾಳೆ. “ರನ್ನಾದಟ್ಟಾಕೆ ಬಣ್ಣದೇಣಿಯಾ ಚಾಚಿ, ಸಾಲೆಣ್ಣೆ ಕೊಡುವ ಬಾಯಿಬಿಚ್ಚಿ…… ಸಾವಿರ ಕಾಲ ಸುಖಿಬಾಳಿ” ಎಂದು ಹಾಡುತ್ತಾರೆ.ಹೀಗೆ ಈ ಕಲಾಪ್ರಕಾರ ಆಚರಣೆಗೆ ಬಂತು.


ಈ ಕಲೆಯಲ್ಲಿ ಹಲವು ವಿಧಗಳಿವೆ. ಅವುಗಳೆಂದರೆ “ಶಿವಯೋಗಿ ಪದ, ದೀಪ ಹಚ್ಚುವ ಪದ, ಬಲೀಂದ್ರ ಪದ,ಗೋವಿನ ಪದ, ಕವಲೆ ಹಾಡು, ಎಣ್ಣೆ ಎರೆಯುವ ಪದ, ದ್ರೌಪದಿ ಪದ, ಗಂಗೆ ಗೌರಿ ಪದ, ಜೋಗುಳ ಪದ, ಕೌಟುಂಬಿಕ ‌ಪದ…” ಹೀಗೆ ಹತ್ತು ಹಲವಾರು ಹಾಡುಗಳು.
ಮನೆಯ ಹೆಬ್ಬಾಗಿಲನ್ನು ಪ್ರವೇಶಿಸುವಾಗ ಆ ಮನೆಯ ಬಾಗಿಲು ಯಾವ ಮರದಿಂದ ಮಾಡಲ್ಪಟ್ಟಿದೆ ಎಂದು “ಬಾಗಿಲು ಬಾಗಿಲು ಚಂದ ಈ ಮನೆಯ ಬಾಗಿಲು ಚಂದ, ಬಾಗಿಲ ಮ್ಯಾಲೇನು ಬರೆದಾರೆ, ಬಾಗಿಲ ಮ್ಯಾಲೇನು ಬರೆದಾರೆ ಸಿರಿಕೈಲಿ, ಅಂದುಳ್ಳ ಮನೆಗೆ ಚಂದುಳ್ಳ ಕದವು,……ಈ ಹಾಡನ್ನು ಅವರು ಪ್ರಕೃತಿ ಜ್ಞಾನದಿಂದ ತಿಳಿಸುತ್ತಿದ್ದರಂತೆ.
ಒಟ್ಟಾರೆಯಾಗಿ ಈ ಅಂಟಿಗೆ-ಪಿಂಟಿಗೆಯಲ್ಲಿ ದೀಪಾವಳಿಯ ಜೊತೆಗೆ, ‌ಹಣತೆ ಹಚ್ಚುವುದರ ಮೂಲಕ ತನ್ನ ಅಂತರಂಗ(ಹೃದಯ)ದ ಬಾಗಿಲನ್ನು ತೆರೆದು ತನ್ನಲ್ಲಿರುವ ಧನಾತ್ಮಕ ಚಿಂತನೆಗಳನ್ನು ಇನ್ನೊಬ್ಬರಿಗೆ ಹಂಚಿ, ಬದುಕಿನ ಸಾರ್ಥಕತೆಯನ್ನು ತನ್ನ ಆಧ್ಯಾತ್ಮಿಕ ಒಲವನ್ನು ಸಾಕ್ಷೀಕರಿಸುತ್ತಾ, ಅದ್ಭುತವಾದ ಮಾಧುರ್ಯದ ಪಯಣವನ್ನು ಸಾರುತ್ತದೆ. ನಾನು ಬಾಲ್ಯದಲ್ಲಿದ್ದಾಗ ಕನ್ನಡ ಪಠ್ಯ ಪುಸ್ತಕದಲ್ಲಿ ಇದರ ಉಲ್ಲೇಖವಿತ್ತು. ಆದರೆ ಈಗಿನ ಪಠ್ಯದಲ್ಲಿ ಇದು ಹೇಳ ಹೆಸರಿಲ್ಲದೆ ನಿಡುಸುಯ್ದಿದೆ. ಮುಖ್ಯವಾಹಿನಿಯಲ್ಲಿ ಇದು ಬರುವಂತಾಗಲಿ, ಮುಂದಿನ ಪೀಳಿಗೆಯು ಈ ಜನಪದ ಕಲೆಯ ಸೊಗಡು ಕಾಣುವಂತಾಗಲಿ ಎನ್ನುವುದೇ ನನ್ನ ಆಶಯ. ಈ ಹಣತೆಯನ್ನು ನಿಮ್ಮ ಕೈಗಿತ್ತಿದ್ದೇನೆ. ಇನ್ನೂ “ಭಾಗ್ಯದ ಜ್ಯೋತಿ ಬಂದಾಳ…ಕರಕೊಳ್ಳಿ ಮನೆಯೊಳಗಾ…” ಏನಂತೀರಾ..!!!??

ಜಪ
ಕುಂದಾಪುರ

LEAVE A REPLY

Please enter your comment!
Please enter your name here