ಕಿತ್ತೂರು ಚೆನ್ನಮ್ಮಳ ರಕ್ಷಣೆಗೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವೀರ ಅಮಟೂರು ಬಾಳಪ್ಪ

0
305
Tap to know MORE!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದೆಷ್ಟೋ ರಾಜ ಸಂಸ್ಥಾನಗಳು ಬ್ರಿಟಿಷರ ವಿರುದ್ಧ ಹೋರಾಡಿವೆ. ಇಂತಹ ಸಂಸ್ಥಾನಗಳಲ್ಲಿ ಕಿತ್ತೂರಿನ ಸಂಸ್ಥಾನವು ಒಂದು. ಕಿತ್ತೂರು ರಾಣಿ ಚೆನ್ನಮ್ಮನಿಗೆ ಬೆಂಗಾವಲಾಗಿದ್ದುಕೊಂಡು, ಬ್ರಿಟಿಷ್ ಅಧಿಕಾರಿಯನ್ನು ಕೊಂದು ಕಿತ್ತೂರಿನಲ್ಲಿ ವಿಜಯ ಪತಾಕೆ ಹಾರಿಸಿದ ವೀರ ಅಮಟೂರು ಬಾಳಪ್ಪ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅಮಟೂರೆಂಬ ಹಳ್ಳಿಯಲ್ಲಿ ಬಾಳಪ್ಪ ಜನಿಸಿದರು. ಮುಂದೆ ಪ್ರಖ್ಯಾತಿಯಾದದ್ದು ಮಾತ್ರ ವೀರಕೇಸರಿ ಅಮಟೂರು ಬಾಳಪ್ಪ ಎಂಬ ಹೆಸರಿನಿಂದ. 1824 ರಲ್ಲಿ ಕಿತ್ತೂರು ಸಂಸ್ಥಾನದ ಮೇಲೆ ಬ್ರಿಟಿಷರ ಕಣ್ಣು ಬಿದ್ದಿತ್ತು. ರಾಣಿ ಚೆನ್ನಮ್ಮಳ ಈ ಸಂಸ್ಥಾನವನ್ನು ಹೇಗಾದರೂ ಮಾಡಿ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂದು ಹೊಂಚುಹಾಕಿ ಕುಳಿತಿದ್ದರು. ತಮ್ಮ ಸಂಸ್ಥಾನವನ್ನು ಕಾಪಾಡಬೇಕೆಂಬ ಸಾವಿರಾರು ಶೂರರು ಅಲ್ಲಿದ್ದರು. ಈ ಶೂರರಲ್ಲಿ ಪ್ರಮುಖವಾಗಿ ಕೇಳಿಬರುವುದು ಎರಡು ಹೆಸರುಗಳು. ಒಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಇನ್ನೊಬ್ಬ ಅಮಟೂರು ಬಾಳಪ್ಪ.

ಇದನ್ನೂ ಓದಿ: ಈ ಸ್ವಾರ್ಥರಹಿತ ಹೋರಾಟಗಾರ್ತಿಯನ್ನು ಮರೆತೇ ಬಿಟ್ಟೆವೆ?!

ಅಕ್ಟೋಬರ್ 21,1824 ರಲ್ಲಿ ಬ್ರಿಟಿಷ್ ಅಧಿಕಾರಿಗಳಾದ ಥ್ಯಾಕರೆ,ಮಾನ್ರೋ ಮತ್ತು ಚಾಪ್ಲಿನ್ ಕಿತ್ತೂರಿನ ಮೇಲೆ ಆಕ್ರಮಣ ಮಾಡಲು ಸನ್ನದ್ಧರಾಗಿರುತ್ತಾರೆ. ಅಕ್ಟೋಬರ್ 23 ರಂದು ಇನ್ನೇನು ಕಿತ್ತೂರು ಕೈತಪ್ಪಿ ಹೋಗುತ್ತದೆ ಅಂದುಕೊಂಡಾಗ, ಸರದಾರ ಗುರುಸಿದ್ದಪ್ಪನವರ ಮುಂದಾಳತ್ವದಲ್ಲಿ ಕಿತ್ತೂರಿನ ಸೈನ್ಯ ಬ್ರಿಟಿಷರ ಮೇಲೆ ಮುಗಿಬಿದ್ದಿತು. ಆಗ ವೀರಯೋಧ, ರಾಣಿ ಚೆನ್ನಮ್ಮಳ ಅಂಗರಕ್ಷಕನಾದ ಅಮಟೂರು ಬಾಳಪ್ಪ ಬ್ರಿಟಿಷ್ ಅಧಿಕಾರಿ ಥ್ಯಾಕರೆಯ ಎದೆಗೆ ಗುರಿಯಿಟ್ಟು ಬಂದೂಕು ಪ್ರಯೋಗ ಮಾಡುತ್ತಾನೆ. ಆ ಗುರಿಕಾರನ ಗುರಿ ತಪ್ಪಲಿಲ್ಲ. ಕಿತ್ತೂರು ಬ್ರಿಟಿಷರ ವಶವಾಗಲಿಲ್ಲ. ನೋಡು ನೋಡುತ್ತಿದ್ದಂತೆ ಕೆಂಪು ಮುಖದ ಅಧಿಕಾರಿ ರಕ್ತದ ಮಡುವಿನಲ್ಲಿ ಬಿದ್ದು ಅಸುನೀಗುತ್ತಾನೆ.

ಕಿತ್ತೂರಿನಲ್ಲಿ ಆದ ಅವಮಾನದ ಸೇಡು ಬ್ರಿಟಿಷರ ಎದೆಯಲ್ಲಿ ಕುದಿಯುತ್ತಿತ್ತು. ಅವಕಾಶಕ್ಕಾಗಿ ಹೊಂಚುಹಾಕಿ ಕಾಯುತ್ತಿದ್ದವರಿಗೆ ನಮ್ಮ ನೆಲದ ಕೆಲವು ನರಿ ಬುದ್ಧಿಯುಳ್ಳ ವಿಶ್ವಾಸಘಾತುಕರು ಸಹಾಯ ಮಾಡಿದ ಪರಿಣಾಮ ಬ್ರಿಟಿಷರು ಎರಡನೇ ಬಾರಿಗೆ ಕಿತ್ತೂರಿನ ಮೇಲೆ ಯುದ್ಧ ಸಾರಿದರು. ಡಿಸೆಂಬರ್ 3,1824 ರಂದು ಅಪಾರ ಸೈನ್ಯದೊಂದಿಗೆ ಆಗಮಿಸಿದ ಬ್ರಿಟಿಷರು ಕಿತ್ತೂರು ಎಂಬ ಪುಟ್ಟ ಸಂಸ್ಥಾನದ ಮೇಲೆ ಆಕ್ರಮಣ ಮಾಡಿಯೇ ಬಿಟ್ಟರು. ಡಿಸೆಂಬರ್ 4 ರ ಯುದ್ಧದ ಸಮಯದಲ್ಲಿ ಚೆನ್ನಮ್ಮನಿಗೆ ಬಂದೂಕಿನಿಂದ ಗುರಿಯಿಟ್ಟ ಬ್ರಿಟಿಷರಿಗೆ ಅಣೆಕಟ್ಟಿನಂತೆ ನಿಂತದ್ದು ಇದೇ ಬಾಳಪ್ಪ. ಆದರೆ ಆ ಕುತಂತ್ರದ ಪ್ರವಾಹದಲ್ಲಿ ಬ್ರಿಟಿಷರ ಗುಂಡಿಗೆ ಎದೆಕೊಟ್ಟು ನಿಂತ ವೀರಕೇಸರಿ ಅಮಟೂರು ಬಾಳಪ್ಪ ಯುದ್ಧದಲ್ಲಿ ಹುತಾತ್ಮನಾದ. ತನ್ನ ತಾಯಿ ಸಮಾನಳಾದ ರಾಣಿ ಚೆನ್ನಮ್ಮನ ಕಾಪಾಡಲು ಹೋಗಿ, ತನ್ನ ಪ್ರಾಣವನ್ನೇ ಬಲಿ ನೀಡಿದ ಮಹಾನ್ ತ್ಯಾಗಿ ಈ ಬಾಳಪ್ಪ.

ಸುರೇಶ್ ರಾಜ್,ಪಕ್ಷಿಕೆರೆ
ವಿವಿ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here