ಅಯೋಧ್ಯೆ ಶಿಲಾನ್ಯಾಸ : ಅಡ್ವಾಣಿ , ಜೋಶಿ ಹಾಜರಾತಿ ಸಂಶಯ!

0
158
Tap to know MORE!

ಲಕ್ನೋ: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಸಮಾರಂಭಕ್ಕೆ ಕೇಂದ್ರ ಸಚಿವೆ ಉಮಾ ಭಾರತಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ಆಹ್ವಾನಿಸಲಾಗಿದೆ. ಆದರೆ ಬಿಜೆಪಿಯ ಹಿರಿತಲೆಗಳಾಗಿರುವ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಗೆ ಆಹ್ವಾನ ನೀಡದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಪಕ್ಷದ ಹಿರಿಯರು ಮತ್ತು ಅನುಭವಿಗಳಾದ ಅಡ್ವಾಣಿ ಮತ್ತು ಜೋಶಿ ಅವರು ಅಯೋಧ್ಯೆಯ ರಾಮ ಮಂದಿರ ‘ಭೂಮಿ ಪೂಜನ್’ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆಯೂ ಕಡಿಮೆ ಎನ್ನಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಈ ಕಾರ್ಯಕ್ರಮಕ್ಕೆ ಆಹ್ವಾನಿತರ ಪಟ್ಟಿಯಲ್ಲಿ, ಕೆಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದಂತೆ, ಇದುವರೆಗೆ ಯಾವುದೇ ಕೈಗಾರಿಕೋದ್ಯಮಿಗಳನ್ನಾಗಲಿ ಅಥವಾ ಅನಿವಾಸಿ ಭಾರತೀಯರನ್ನಾಗಲಿ, ಆಹ್ವಾನಿಸಲಾಗಿಲ್ಲ.

ಕೊರೋನಾ ಭೀತಿಯ ನಡುವೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳ ಪಟ್ಟಿ ತುಂಬಾ ಸೀಮಿತವಾಗಿದೆ. ಅದಲ್ಲದೆ, ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅಥವಾ ಮಾಜಿ ಮಾನವ ಸಂಪನ್ಮೂಲ ಸಚಿವ ಎಂ.ಎಂ.ಜೋಶಿಯವರ ಕಾರ್ಯಕ್ರಮವಿಲ್ಲ. ಹಾಗಾಗಿ ಅವರ ಹಾಜರಾತಿಯೂ ಇರುವುದು ಬಹುತೇಕ ಸಂಶಯವೇ ಸರಿ!

ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲದೆ, ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್, ವಿಹಿಂಪ ಉಪಾಧ್ಯಕ್ಷ ಮತ್ತು ರಾಮ ಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಭಾಗವಹಿಸಲಿದ್ದಾರೆ.

ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿರುವ ಭೂಮಿ ಪೂಜನ್ ಕಾರ್ಯಕ್ರಮವು, ಪ್ರಧಾನಮಂತ್ರಿಯವರ ಭಾಷಣದೊಂದಿಗೆ ಮುಕ್ತಾಯಗೊಳ್ಳಲಿದೆ. ಪ್ರಧಾನಿ ತಮ್ಮ ಐಎಎಫ್ ವಿಶೇಷ ವಿಮಾನದ ಮೂಲಕ ಲಕ್ನೋಗೆ ಬಂದು ಇಳಿಯಲಿದ್ದಾರೆ ಮತ್ತು ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಿಂದ ಅಯೋಧ್ಯೆಗಾಗಿ ಐಎಎಫ್ ಎಂಐ 7 ಚಾಪರ್ ಮೂಲಕ ಹೊರಡಲಿದ್ದಾರೆ.

LEAVE A REPLY

Please enter your comment!
Please enter your name here