ಅರಳಿ ಉಸಿರು ತರಲಿ ಮರಳಿ

0
223
Tap to know MORE!

ಭಾರತದ ಬಹುತೇಕ ಗ್ರಾಮಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಕಂಡುಬರುವ ಹಾಗೂ ಎಲ್ಲಾ ವೃಕ್ಷಗಳಿಗೆ ರಾಜನಾಗಿರುವ ಈ ವೃಕ್ಷರಾಜನೇ “ಅರಳಿ ಮರ”.ಇದಕ್ಕೆ ಸಂಸ್ಕೃತದಲ್ಲಿ “ಅಶ್ವತ್ಥ ಮರ, ಬೋಧಿ ವೃಕ್ಷ ” ಎಂದು ಕರೆಯುತ್ತಾರೆ.

ಹಿಂದೆ ಕೆಲವು ಹಳ್ಳಿಗಳಲ್ಲಿ ವಿದ್ಯುತ್, ಶಾಲೆ, ವಾಹನ ಸೌಕರ್ಯ ಇಲ್ಲದಿದ್ದರೂ , ಅರಳಿ ಮರ ಇಲ್ಲದ‌ ಗ್ರಾಮವೇ ಇಲ್ಲ ಎನ್ನಬಹುದು.ಹಳ್ಳಿ ಜನರಿಗೆ ಮೊದಲೆಲ್ಲಾ ನ್ಯಾಯ ಒದಗಿಸುವ ಪಂಚಾಯತ್ ಹಾಗೂ ಹರಟೆ ಕಟ್ಟೆ ಈ ಅರಳಿ ಮರವೆಂದರೆ ಪ್ರಾಯಶಃ ತಪ್ಪಾಗಲಾರದು.

ಹಿಂದಿನಿಂದಲೂ ಅಶ್ವತ್ಥ ಕಟ್ಟೆಗೆ ಬೆಳಗಿನ ಜಾವದಲ್ಲಿ ಸುತ್ತು ಬರಬೇಕು ಎನ್ನುವ ಪದ್ಧತಿಯಿತ್ತು. ಅದೂ ಕಟ್ಟೆ ಕಟ್ಟಿರುವ ಮರಕ್ಕೆ ಸುತ್ತು ಬರಬೇಕೆಂಬ ಪ್ರತೀತಿ. ಸಾಂಪ್ರದಾಯಿಕವಾಗಿ ಕಟ್ಟೆ ಕಟ್ಟಿರುವುದೆಂದರೆ ಅರಳಿ ಮರದ ವಿವಾಹ ಕಹಿಬೇವಿನ ಗಿಡದೊಂದಿಗೆ ಆಗಿರುತ್ತೆ.ಇಲ್ಲಿ ಅರಳಿ ಮರ “ವಿಷ್ಣು”ವಾದರೆ ಕಹಿಬೇವು ಜಗನ್ಮಾತೆಯಾದ “ಶ್ರೀಶಕ್ತಿ”ಯ ಪ್ರತೀಕವಾಗಿದೆ. ವೈಜ್ಞಾನಿಕವಾಗಿ ಅರಳಿ ಮರವು ಆಮ್ಲಜನಕ (oxygen)ವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ ಅದರಲ್ಲೂ ಕಹಿಬೇವು ಹಾಗೂ ತುಳಸಿ ಗಿಡದೊಂದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಪೂರೈಸುತ್ತದೆ.
ಅನಾದಿ ಕಾಲದಿಂದಲೂ ಹಿರಿಯರು ಅರಳಿ ಮರದ ಕೆಳಗೆ ಮಧ್ಯಾಹ್ನ ಹಾಗೂ ರಾತ್ರಿ ಮಲಗಬಾರದು ಭೂತ ಪಿಶಾಚಿಗಳ ಕಾಟವೆಂದು ಕಥೆ ಹೇಳುತ್ತಿದ್ದರು, ಅದೂ ಈಗಲೂ ಪ್ರಚಲಿತದಲ್ಲಿದೆ. ಇದಕ್ಕೆ ವೈಜ್ಞಾನಿಕ ಹಿನ್ನೆಲೆ ಹೀಗಿದೆ.ಸಾಮಾನ್ಯವಾಗಿ ಎಲ್ಲ ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆ (photosynthesis) ಕ್ರಿಯೆ ನಡೆಯುತ್ತದೆ.ಆದರೆ ಇದರಲ್ಲಿ ವಿಶೇಷವಾಗಿ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುತ್ತೆ ಇದನ್ನು Crassulacean Acid Metabolism (CAM) ಎನ್ನುತ್ತಾರೆ.ಮಧ್ಯಾಹ್ನ ಹಾಗೂ ರಾತ್ರಿಯಲ್ಲಿ ಅತಿ ಹೆಚ್ಚಿನ ಇಂಗಾಲದ ಡೈ ಆಕ್ಸೈಡ್ (carbon dioxide) ಬಿಡುಗಡೆ ಮಾಡುವುದರಿಂದ ಉಸಿರಾಟದಲ್ಲಿ ಏರು ಪೇರು ಕಂಡು ಬರುತ್ತದೆ.ಇದನ್ನೇ ಎಲ್ಲರೂ ಅಯ್ಯೋ!! ದೆವ್ವದ ಕಾಟ ಎಂದಿದ್ದುಂಟು.

ಪುರಾಣದಲ್ಲಿ ಈ ವೃಕ್ಷವನ್ನು “ಮೂಲತೋ ಬ್ರಹ್ಮ ರೂಪಾಯ‌| ಮಧ್ಯತೋ ವಿಷ್ಣು ರೂಪಿಣೇ| ಅಗ್ರತಃ ಶಿವರೂಪಾಯ ವೃಕ್ಷರಾಜಯ ತೇ ನಮಃ ” ಎಂದು ಸ್ತುತಿಸಲಾಗುತ್ತಿತ್ತು. ಇನ್ನು ಗೌತಮ ಬುದ್ಧನಿಗೆ ಇದೇ ಬೋಧಿ ವೃಕ್ಷದ‌ ಕೆಳಗೆ‌ ಜ್ಞಾನೋದಯವಾಯಿತೆಂದು ಜಗತ್ತಿಗೆ ತಿಳದಿರುವ ವಿಷಯ.ವಿದೇಶಿಗರು ಇದಕ್ಕೆ “Magic tree” ಎಂದು ಕರೆಯುತ್ತಾರಂತೆ. ಜಗತ್ತಿನ ಶಕ್ತಿ ಅಂದರೆ cosmic ray ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯ ಈ ಮರಕ್ಕಿದೆ.ಅದಕ್ಕೆ ಸಿದ್ಧಾರ್ಥ ಮಹಾರಾಜ, ಬುದ್ಧನಾಗಿ ಪ್ರಪಂಚಕ್ಕೆ ಶಾಂತಿ ಮಂತ್ರವನ್ನು ಸಾರಿದ.

ನಮ್ಮ ದೇಶದ ಋಷಿ ಮುನಿಗಳು ಆರ್ಯುವೇದಕ್ಕೆ ಸಂಬಂಧಿಸಿದಂತೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.ಸುಮಾರು ಐವತ್ತಕ್ಕೂ ಹೆಚ್ಚು ಕಾಯಿಲೆಗಳಿಗೆ ಈ ಅರಳಿ ಮರದಲ್ಲೇ ಔಷಧಿಯಿದೆ.ಇದರ ಎಲೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಈ ಮರದ ತೊಗಟೆಯ ರಸದಿಂದ ಕಣ್ಣಿನ ನೋವು ನಿವಾರಣೆ‌ಯಾಗುತ್ತದೆ.ಇನ್ನು ಇದರ ಉಪಯೋಗ ಹತ್ತು ಹಲವಾರು.

ಆದರೆ ಇತ್ತೀಚಿನ ದಿನಗಳಲ್ಲಿ ಈ ವೃಕ್ಷದ ಪ್ರಮಾಣ‌ ಕಡಿಮೆಯಾಗುತ್ತಿದೆ.ಇಷ್ಟೆಲ್ಲಾ ಪ್ರಾಮುಖ್ಯತೆಯಿರುವ ಈ ವೃಕ್ಷವನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ.”ಇರಲಿ ಊರಿಗೊಂದು ಅರಳಿ, ಉಸಿರು ತರಲಿ ಮರಳಿ”.
ಜಪ
ಕುಂದಾಪುರ

LEAVE A REPLY

Please enter your comment!
Please enter your name here