ಬೆಂಗಳೂರು (ಸೆ.17): ಕೊರೋನಾ ಸೋಂಕಿಗೆ ಗುರಿಯಾಗಿದ್ದ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಸೋಂಕಿಗೆ ಗುರಿಯಾಗಿದ್ದ ಅವರು, ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಅವರು ಸಾವನ್ನಪ್ಪಿದ್ದಾರೆ.
ಕಳೆದ ಜೂನ್ನಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಈರಣ್ಣ ಕಡಾಡಿ ಜೊತೆ ಅಶೋಕ್ ಗಸ್ತಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ರಾಯಚೂರಿನ ಲಿಂಗಸಗೂರಿನ ಅವರು ಸವಿತಾ ಸಮಾಜಕ್ಕೆ ಸೇರಿದವರು. ಕಾಲೇಜಿನಲ್ಲಿದ್ದಾಗಲೇ ಹೋರಾಟಕ್ಕೆ ಧುಮಿಕಿದ್ದರು. 1990ರಿಂದ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿದ್ದರು. ಬಳ್ಳಾರಿ ಹಾಗು ರಾಯಚೂರು ಪಕ್ಷದ ಸಂಘಟನಾ ಮುಖಂಡರಾಗಿ ಕೆಲಸ ಮಾಡುತ್ತಿದ್ದಾರೆ. 2001ರಲ್ಲಿ ರಾಯಚೂರು ನಗರಸಭೆಯ ಸದಸ್ಯರಾಗಿ ಆಯ್ಕೆಯಾದರು. 2012ರಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಯುವ ಮೋರ್ಚ, ವಕೀಲರ ಘಟಕ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ