ಕೋಮುವಾದಕ್ಕೆ ಸಿಲುಕದೆ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿಕಾರಿ ಅಶ್ಫಾಕ್ ಉಲ್ಲಾ ಖಾನ್

0
5541
Tap to know MORE!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾತಿ, ಧರ್ಮಗಳನ್ನು ಮೀರಿ ಅದೆಷ್ಟೋ ಯುವಕರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅಂತಹವರಲ್ಲಿ ಅಶ್ಫಾಕ್ ಉಲ್ಲಾ ಖಾನ್ ಒಬ್ಬರು.

ಆಶ್ಫಾಕ್ ಉಲ್ಲಾ ಖಾನ್ ಉತ್ತರಪ್ರದೇಶದ ಶಹಜನಾಪುರದ ಶ್ರೀಮಂತ, ಸುಶಿಕ್ಷಿತ ಕುಟುಂಬದ ತರುಣ. ಅವನ ಪರಿವಾರದ ಹಲವರು ಬ್ರಿಟಿಷ್ ಸರಕಾರದ ಉಚ್ಚ ಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೂ ದೇಶದೆಡೆಗೆ ಆಶ್ಫಾಕನಿಗಿದ್ದ ಅದಮ್ಯ ಭಕ್ತಿ, ಪ್ರೇಮ ಅವನನ್ನು ದೇಶಭಕ್ತ ಕ್ರಾಂತಿಕಾರಿ ರಾಮಪ್ರಸಾದ್ ಬಿಸ್ಮಿಲ್ಲನೆಡೆಗೆ ಕರೆತಂದಿತು. ಈ ದೇಶದ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ, ಸಾಮರಸ್ಯಕ್ಕೆ ಆದರ್ಶಪ್ರಾಯ ಮಾದರಿ ಇದ್ದರೆ ಅದು ರಾಮ್‌ಪ್ರಸಾದ್ ಮತ್ತು ಆಶ್ಫಾಕ್‌ರದ್ದೇ.

ಇದನ್ನೂ ಓದಿ: ಬ್ರಿಟಿಷರ ವಿರುದ್ಧ ತಮ್ಮ ಬರವಣಿಗೆಗಳ ಮೂಲಕ ಹೋರಾಡಿದ ಕ್ರಾಂತಿಕಾರಿ ಪತ್ರಕರ್ತ ಬರೀಂದ್ರ ಕುಮಾರ್ ಘೋಷ್

1920 ರಲ್ಲಿ, ಮಹಾತ್ಮ ಗಾಂಧಿ ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ತಮ್ಮ ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದರು. ಆದರೆ 1922 ರಲ್ಲಿ ನಡೆದ ಚೌರಿ ಚೌರಾ ಘಟನೆಯ ನಂತರ ಮಹಾತ್ಮ ಗಾಂಧಿ ಈ ಚಳವಳಿಯ ಕರೆಯನ್ನು ಹಿಂಪಡೆಯಲು ನಿರ್ಧರಿಸಿದರು. ಆ ಸಮಯದಲ್ಲಿ, ಅಶ್ಫಾಕುಲ್ಲಾ ಖಾನ್ ಸೇರಿದಂತೆ ಅನೇಕ ಯುವಜನರು ಖಿನ್ನತೆಗೆ ಒಳಗಾಗಿದ್ದರು. ಅಶ್ಫಾಕುಲ್ಲಾ ಖಾನ್ ಮತ್ತು ಸಮಾನ ಮನಸ್ಕ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಕ್ರಾಂತಿಕಾರಿ ಸಂಘಟನೆಯನ್ನು ರಚಿಸಲು ನಿರ್ಧರಿಸಿದರು. ಇದರ ಪರಿಣಾಮವಾಗಿ 1924 ರಲ್ಲಿ ಸ್ಥಾಪನೆಯಾದ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ​​ರಚನೆಯಾಯಿತು. ಈ ಸಂಘದ ಉದ್ದೇಶ, ಮುಕ್ತ ಭಾರತವನ್ನು ಸಾಧಿಸಲು ಸಶಸ್ತ್ರ ಕ್ರಾಂತಿಗಳನ್ನು ಆಯೋಜಿಸುವುದಾಗಿತ್ತು.

ಡಿಸೆಂಬರ್ 19, 1927 ಕಾಕೋರಿ ಮೊಕದ್ದಮೆಯಲ್ಲಿ ರಾಮ್‌ಪ್ರಸಾದ್ ಬಿಸ್ಮಿಲ್, ಆಶ್ಫಾಕ್ ಉಲ್ಲಾಖಾನ್‌ರಿಗೆ ಬ್ರಿಟಿಷ್ ಸರಕಾರದಿಂದ ನೇಣುಶಿಕ್ಷೆ. ಇಬ್ಬರಲ್ಲೂ ಮಾತೃಭೂಮಿಗಾಗಿ ನೇಣಿಗೇರುವ ಆನಂದ. ಅದಕ್ಕೂ ಮುನ್ನ ಬ್ರಿಟಿಷ್ ಸರಕಾರ ಇವರಿಬ್ಬರನ್ನೂ ಪ್ರತ್ಯೇಕಿಸಿ ಆಶ್ಫಾಕ್‌ನಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ ಎಲ್ಲ ಕ್ರಾಂತಿಕಾರಿಗಳನ್ನೂ ಸೆರೆ ಹಿಡಿಯುವ ಕುತಂತ್ರದ ಪ್ರಯತ್ನ ಮಾಡಿತ್ತು. ಅದಕ್ಕೆ ನಿಯೋಜಿಸಲ್ಪಟ್ಟವನು “ಖಾನ್ ಬಹದೂರ್ ತಹಸುಕ್ ಹುಸೈನ್” ಎಂಬ ಬ್ರಿಟಿಷ್ ಸರಕಾರದ ಪೋಲಿಸ್ ಸೂಪರಿಂಟೆಂಡೆಂಟ್.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

1927ರ ಸೆಪ್ಟೆಂಬರ್ ತಿಂಗಳ ಒಂದು ದಿನ ಖಾನ್ ಬಹಾದೂರ್ ಸಾಹೇಬ, ಆಶ್ಫಾಕ್ ಉಲ್ಲಾಖಾನ್‌ನನ್ನು ಭೇಟಿಯಾಗಿ “ನೋಡು ನೀನು ಮುಸಲ್ಮಾನ, ನಾನೂ ಮುಸಲ್ಮಾನ. ನಿನ್ನನ್ನು ಬಂಧಿಸಿರುವುದಕ್ಕೆ ನನಗೆ ಬೇಸರವಿದೆ. ರಾಮಪ್ರಸಾದ್ ಒಬ್ಬ ಹಿಂದೂ, ನೀನಾದರೋ ಒಂದು ಸಂಪ್ರದಾಯಸ್ಥ ಇಸ್ಲಾಂ ಕುಟುಂಬದವನು. ಆ ಕಾಫಿರರು ನಿನ್ನ ಮತ ಮತ್ತು ಜಾತಿಗೆ ವಿರುದ್ಧವಾದವರು. ಆ ಕಾಫಿರರಿಗೆ ಏಕೆ ಸಹಾಯ ಮಾಡುವೆ? ನೀನು ರಾಮ್‌ಪ್ರಸಾದನ ವಿರುದ್ಧ ಸರಕಾರದ ಪರವಾಗಿ ಸಾಕ್ಷಿ ಹೇಳು. ನಿನ್ನನ್ನು ತಕ್ಷಣ ಬಿಟ್ಟು ಬಿಡುವುದೇ ಅಲ್ಲದೆ ಸರಕಾರದ ಉದ್ಯೋಗ ಕೊಡಿಸುತ್ತೇನೆ” ಎಂದು ಆ ಕ್ರಾಂತಿಕಾರಿ ದೇಶಭಕ್ತ ತರುಣನ ಮೆದುಳಿನಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಾನೆ.

ಆದರೆ ಇದಾವುದಕ್ಕು ಅಶ್ಫಾಕ್‌ ಉಲ್ಲಾ ಖಾನ್ನ ದೇಶಭಕ್ತಿಯನ್ನು ಕಿತ್ತುಕೊಳ್ಳುವ ಶಕ್ತಿ ಇರುವುದಿಲ್ಲ. ಜಾತಿ ಧರ್ಮಗಳನ್ನು ಮೀರಿದ ದೇಶ ಭಕ್ತಿ ಅವನದ್ದು. ದೇಶ ದಾಸ್ಯದ ಬಂಧನದಿಂದ ಮುಕ್ತವಾಗಬೇಕೆಂದು ಕನಸು ಕಂಡಿದ್ದ ದೇಶಭಕ್ತ 1927 ಡಿಸೆಂಬರ್ 19 ರಂದು ಗಲ್ಲಿಗೇರಿದ .

ಸುರೇಶ್ ರಾಜ್, ಪಕ್ಷಿಕೆರೆ
ವಿವಿ ಕಾಲೇಜು, ಮಂಗಳೂರು

ಹದಿಹರೆಯದಲ್ಲೇ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಕ್ರಾಂತಿಕಾರಿ ಯುವಕ ಪ್ರಪುಲ್ಲಾ ಚಂದ್ರ ಚಾಕಿ

LEAVE A REPLY

Please enter your comment!
Please enter your name here