ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆಡುವಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗಂಭೀರ ಸ್ವರೂಪದ ಗಾಯಕ್ಕೆ ತುತ್ತಾಗಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಎಸೆದ ಮೊದಲ ಓವರ್ನಲ್ಲೇ 2 ವಿಕೆಟ್ ಪಡೆದ ಅಶ್ವಿನ್ ತಾವು ಎಷ್ಟು ಮೌಲ್ಯಯುತ ಆಟಗಾರ ಎಂಬುದನ್ನು ಕಿಂಗ್ಸ್ ಇಲೆವೆನ್ ಫ್ರಾಂಚೈಸಿಗೆ ಮನವರಿಕೆ ಮಾಡಿಕೊಟ್ಟರು.
ಇನಿಂಗ್ಸ್ನ 5ನೇ ಓವರ್ನಲ್ಲೇ ಬೌಲಿಂಗ್ ಮಾಡುವಂತೆ ಅಶ್ವಿನ್ಗೆ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಚೆಂಡನ್ನು ನೀಡಿದರು. ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸದ ಅನುಭವಿ ಆಫ್ ಸ್ಪಿನ್ನರ್ ಮೊದಲ ಎಸೆತದಲ್ಲೇ ಸ್ಟ್ರೈಕ್ನಲ್ಲಿದ್ದ ಕರುಣ್ ನಾಯರ್ ಅವರನ್ನು ಔಟ್ ಮಾಡಿದರು.
ಅಶ್ವಿನ್ ಅವರ ಗಾಯದ ಸಮಸ್ಯೆ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಹಾಗೂ ಅವರು ಮುಂದಿನ ಪಂದ್ಯಗಳಿಗೆ ಲಭ್ಯವಾಗುತ್ತಾರೆಯೇ ಇಲ್ಲವೇ ಎಂಬುದರ ಬಗ್ಗೆ ಕ್ಯಾಪಿಟಲ್ಸ್ ತಂಡವು ಅಧಿಕೃತ ಹೇಳಿಕೆ ಬಿಡುಗಡೆ ಮಾಡುವುದು ಬಾಕಿಯಿದೆ. ಒಂದು ವೇಳೆ ಅಶ್ವಿನ್ ಟೂರ್ನಿಯಿಂದಲೇ ಹೊರ ನಡೆಯುವಂತಾದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರಿ ಹಿನ್ನಡೆ ಎದುರಾಗಲಿದೆ.