ಆಗಸ್ಟ್ ಮೊದಲ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ: ಸುರೇಶ್ ಕುಮಾರ್

0
101
Tap to know MORE!

ಬೆಂಗಳೂರು: ಕೋವಿಡ್ 19 ಪರಿಸ್ಥಿತಿಯಲ್ಲಿ ಮೌಲ್ಯಮಾಪನ ಸಲೀಸಾಗಿ ನಡೆಸುವುದು ಕಷ್ಟಸಾಧ್ಯ ಎಂದು ಬಹುತೇಕರು ಭಾವಿಸಿದ್ದರು. ಆದರೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು, ಸರಕಾರದ ನಿರ್ದೇಶನದಂತೆ ಮೌಲ್ಯಮಾಪನ ಕೇಂದ್ರದ ಭದ್ರತೆ ಹಾಗೂ ಮೌಲ್ಯಮಾಪಕರ ಸುರಕ್ಷೆಗೆ ಪ್ರತ್ಯೇಕ ಮಾರ್ಗಸೂಚಿ ರಚಿಸಿ, ಅನುಷ್ಠಾನ ಮಾಡಿದೆ. ಆಯಾ ಜಿಲ್ಲೆಗಳಲ್ಲಿರುವ ಶಿಕ್ಷಕರು ಜಿಲ್ಲೆಯ ಒಳಗೆ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಲು ಅನುಕೂಲ ಆಗುವಂತೆ 51 ಹೆಚ್ಚುವರಿ ಮೌಲ್ಯಮಾಪನ ಕೇಂದ್ರ ತೆರೆದಿತ್ತು.

ಮೌಲ್ಯಮಾಪಕರಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿದೆ. ಅಂಕಗಳ ಆನ್‌ಲೈನ್‌ ನಮೂದನೆಗೆ ಸರ್ವರ್‌ ಸಮಸ್ಯೆ ಆಗದಂತೆಯೂ ನೋಡಿಕೊಂಡಿಕೊಳ್ಳಲಾಗಿದೆ. ಸುಮಾರು 71 ಸಾವಿರ ಮೌಲ್ಯಮಾಪಕರಲ್ಲಿ ಸರಾಸರಿ 68 ಸಾವಿರ ಮೌಲ್ಯಮಾಪಕರು ಮೌಲ್ಯಮಾಪನದಲ್ಲಿ ಭಾಗವಹಿಸಿದ್ದಾರೆ ಎಂದು ಮಂಡಳಿಯ ನಿರ್ದೇಶಕಿ ವಿ. ಸುಮಂಗಳಾ ಅವರು ತಿಳಿಸಿದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದಾಗಿ ಮೌಲ್ಯಮಾಪನ ಪ್ರಕ್ರಿಯೆ ಆರಂಭ ವಿಳಂಬವಾಗಿದ್ದರೂ ಇನ್ನೆರಡು ಮೂರು ದಿನಗಳಲ್ಲಿ ಮುಗಿಯಲಿದೆ. ಬಹುತೇಕ ಜಿಲ್ಲೆಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಆಗಸ್ಟ್‌ ಮೊದಲ ವಾರದೊಳಗೆ ಫ‌ಲಿತಾಂಶ ನೀಡಲು ಸಿದ್ಧತೆ ನಡೆಸುತ್ತಿದೆ.

ಕೊರೊನಾ ಆತಂಕದ ನಡುವೆಯೇ ಎಸೆಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಶೇ. 89ರಷ್ಟು ಮುಗಿದಿದ್ದು ಫ‌ಲಿತಾಂಶ ಪ್ರಕಟನೆಗೆ ಸಿದ್ಧತೆ ಆರಂಭವಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಸರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ವಿವಿಧ ಇಲಾಖೆಗಳ ಸಹಕಾರದೊಂದಿಗೆ 2019-20ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು ಜೂನ್‌ 25ರಿಂದ ಜುಲೈ 3ರ ವರೆಗೆ ನಡೆಸಿತ್ತು.
ಜುಲೈ 13ರಿಂದ ಮೌಲ್ಯಮಾಪನ ಪ್ರಕ್ರಿಯೆಗೆ ರಾಜ್ಯಾದ್ಯಂತ ಚಾಲನೆ ದೊರೆತಿದ್ದು, ಈಗಾಗಲೇ ಶೇ.89ರಷ್ಟು ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮೂಲಗಳು ಖಚಿತಪಡಿಸಿವೆ.

ಮೌಲ್ಯಮಾಪನ ಬಹುತೇಕ ಪೂರ್ಣ
ಎಸೆಸೆಲ್ಸಿ ಮೌಲ್ಯಮಾಪನ ಬಹುತೇಕ ಪೂರ್ಣಗೊಂಡಿದೆ. ಬೆಂಗಳೂರಿನ ಎರಡು ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದಾಗಿ ಸ್ವಲ್ಪ ತಡವಾಗಿ ಮೌಲ್ಯಮಾಪನ ಆರಂಭವಾಗಿದೆ. ಉಳಿದಂತೆ ಎಲ್ಲ ಜಿಲ್ಲೆಗಳ ಮಾಹಿತಿಯನ್ನು ಪಡೆಯುತ್ತಿದ್ದೇನೆ. ಆಗಸ್ಟ್‌ ಮೊದಲ ವಾರದಲ್ಲೇ ಫ‌ಲಿತಾಂಶ ನೀಡಲಿದ್ದೇವೆ ಎಂದು ಸಚಿವರು ಹೇಳಿದರು.

LEAVE A REPLY

Please enter your comment!
Please enter your name here