ಕೃಷಿ ಅವಲಂಬಿತ ತುಳುನಾಡಿನಲ್ಲಿ ಆಷಾಢ ಮಾಸದಲ್ಲಿ ಯಾವುದೇ ಬೆಳೆಯ ಫಸಲು ಕೊಯ್ಲಿಗೆ ಬರುವುದಿಲ್ಲ. ಈ ಮಾಸವನ್ನು ಆಟಿ ತಿಂಗಳು ಎನ್ನುತ್ತಾರೆ. ಈ ಸಮಯದಲ್ಲಿ ಬದಲಾಗುವ ಭೂಮಿಯ ವಾತಾವರಣ ಹಾಗೂ ನಿರಂತರ ಮಳೆಯನ್ನು ಕಾಣಬಹುದು. ಆಟಿ ತಿಂಗಳಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. ತುಳುನಾಡಿನ ಜಾನಪದ ಸಂಸ್ಕೃತಿಯಲ್ಲಿ ಆಟಿ ತಿಂಗಳಿಗೆ ವಿಶೇಷ ಸ್ಥಾನವಿದೆ
ಆಟಿಯಲ್ಲಿ ಸುರಿಯುವ ನಿರಂತರ ಮಳೆಯಿಂದ ರೋಗರುಜಿನಗಳ ಭಾದೆ ಹೆಚ್ಚು. ಈ ಸಮಯದಲ್ಲಿ ಕಂಡು ಬರುವ ರೋಗಗಳು ಮನುಷ್ಯನನ್ನು ನಿತ್ರಾಣ ಮಾಡುತ್ತವೆ. ಆಟಿ ತಿಂಗಳಿನಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಷಾಢ ತಿಂಗಳ ಮೊದಲ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ಬೆಳೆದು ಬಂದಿದೆ.
ಹಾಲೆ(ಪಾಲೆ) ಮರದ ತಿರುಳನ್ನು ಕರಿ ಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಅರೆದು ಮಾಡಿದ ಕಷಾಯವನ್ನು ಆಟಿ ತಿಂಗಳ ಅಮಾವಾಸ್ಯೆಯ ನಸುಕಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾರೆ. ಹಾಲೆ ಮರದ ಎಲೆಯು ಸಾಮಾನ್ಯವಾಗಿ ದಪ್ಪವಾಗಿದ್ದು ಒಂದು ಗೊಂಚಲಿನಲ್ಲಿ 7 ರಿಂದ 9 ಪತ್ರಗಳಿರುತ್ತವೆ. ಎಲೆಗಳ ಅಗಲ ಒಂದರಿಂದ ಎರಡು ಇಂಚು ಇದ್ದು, ಉದ್ದ 6 ರಿಂದ 12ಇಂಚು ಇರುತ್ತದೆ. ಕಡು ಹಸಿರು ವರ್ಣದಿಂದ ಕೂಡಿದ್ದು ಮುರಿದಾಗ ಹಾಲು ಹೊರಸೂಸುತ್ತದೆ.
ಹಾಲೆ ಮರದ ತೊಗಟೆ ಬೂದು ವರ್ಣದಿಂದ ಕೂಡಿದ್ದು, ದೊರಗಾಗಿದ್ದು ಕಲ್ಲಿನಿಂದ ಜಜ್ಜಿ ಹಾಳೆಗಳಂತೆ ತೆಗೆಯಲು ಬರುವುದು. ಈ ಕಷಾಯವನ್ನು ಕುಡಿಯುವುದರಿಂದ ಶೀತ ವಾತಾವಾರಣವನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ ಹುಳ ಬಾಧೆಯಿಂದ ಜೀರ್ಣಾಂಗವ್ಯೂಹವನ್ನು ಶುದ್ಧಗೊಳಿಸುತ್ತದೆ