ಕರ್ನಾಟಕದಲ್ಲೂ ಆನ್ಲೈನ್ ಗೇಮ್ಸ್‌ ನಿಷೇಧ? – ಈ ಕುರಿತು ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದೆ ಆಂಧ್ರಪ್ರದೇಶ!

0
96
Tap to know MORE!

ಬೆಂಗಳೂರು: ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಆನ್‌ಲೈನ್‌ ಗೇಮ್‌ ಹಾವಳಿ ನಿಷೇಧಕ್ಕೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಕೊನೆಗೂ ಮುಂದಾಗಿದೆ. ಆನ್‌ಲೈನ್‌ ಗೇಮ್‌ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಆಕ್ಷೇಪದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದು, ”ಆನ್ಲೈನ್ ಗೇಮ್ಸ್ ನಿಷೇಧಿಸುವುದಕ್ಕಾಗಿ ಹೊಸ ಕಾನೂನು ಜಾರಿಗೊಳಿಸಲಾಗುವುದು,” ಎಂದು ಹೇಳಿದ್ದಾರೆ.

ನೆರೆ ರಾಜ್ಯಗಳಲ್ಲಿ ಈಗಾಗಲೇ ಇಂತಹ ಕಾನೂನು ಜಾರಿಗೊಳಿಸಿರುವುದರಿಂದ ರಾಜ್ಯ ಸರಕಾರದ ಮೇಲೂ ಈ ಸಂಬಂಧ ಕ್ರಮಕ್ಕೆ ಒತ್ತಡ ಹೆಚ್ಚಿದೆ. ”ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಕಾನೂನು ಇದೆ ಎಂಬ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಈ ಜಾಲಕ್ಕೆ ಯುವಕರು ಬಲಿಯಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಪೋಷಕರು, ಸಾರ್ವಜನಿಕ ವಲಯದಿಂದಲೂ ದೂರು ಬರುತ್ತಿವೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಸರಕಾರದಿಂದ ಅನುಮತಿ ಪಡೆದಿದ್ದರೆ ಸಮಸ್ಯೆ ಇಲ್ಲ. ಕಾನೂನುಬಾಹಿರವಾಗಿ ಯಾವುದೇ ಆನ್‌ಲೈನ್‌ ಗೇಮ್‌ ನಡೆಯುತ್ತಿದ್ದರೂ ಕ್ರಮ ನಿಶ್ಚಿತ,” ಎಂದು ಎಚ್ಚರಿಕೆ ನೀಡಿದ್ದಾರೆ.

ಆನ್‌ಲೈನ್‌ ಗೇಮ್‌ಗಳಿಂದಾಗಿ ಯುವ ಪೀಳಿಗೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಅವರ ಭವಿಷ್ಯ ಹಾಗೂ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅನೇಕ ಯುವಕರು ಆನ್‌ಲೈನ್ ಗೇಮ್‌, ಬೆಟ್ಟಿಂಗ್‌ನ ದಾಸರಾಗಿದ್ದು ಅನೇಕರು ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಹೀಗಾಗಿ ಆಂಧ್ರ ಪ್ರದೇಶ ಸರಕಾರ ಈಗಾಗಲೇ ಆನ್‌ಲೈನ್‌ ಗೇಮ್‌, ಆನ್‌ಲೈನ್‌ ಬೆಟ್ಟಿಂಗ್‌, ಆನ್‌ಲೈನ್‌ ಜೂಜನ್ನು ನಿಷೇಧಿಸಿದೆ. ಇದಕ್ಕಾಗಿ ಆಂಧ್ರ ಪ್ರದೇಶ ಗೇಮಿಂಗ್‌ ಕಾಯಿದೆ 1974ಕ್ಕೆ ತಿದ್ದುಪಡಿ ತಂದು ಸರಕಾರ ಸುಜ್ರೀವಾಜ್ಞೆಯನ್ನೇ ಹೊರಡಿಸಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಒಟ್ಟು 132 ವೆಬ್‌ಸೈಟ್‌ಗಳು ಹಾಗೂ ಆ್ಯಪ್‌ಗಳನ್ನು ಬ್ಲಾಕ್‌ ಮಾಡುವಂತೆ ಕೇಂದ್ರ ಸರಕಾರಕ್ಕೆ ಸಿಎಂ ಜಗನ್‌ ಪತ್ರ ಬರೆದಿದ್ದಾರೆ.

LEAVE A REPLY

Please enter your comment!
Please enter your name here