ಆನ್ಲೈನ್ ತರಗತಿಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ ರಾಜ್ಯ ಶಿಕ್ಷಣ ಸಚಿವಾಲಯ

0
63

ಬೆಂಗಳೂರು: ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ ಭೌತಿಕವಾಗಿ ಇನ್ನೂ ಶಾಲೆಗಳು ತೆರೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶಾಲೆಗಳು ಶಿಕ್ಷಣದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಕುರಿತು ತಜ್ಞರ ಸಮಿತಿಯ ಶಿಫಾರಸ್ಸಿನನ್ವಯ ಆನ್‍ಲೈನ್ ತರಗತಿಗಳನ್ನು ನಡೆಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಾಲೆಗಳು ಸರ್ಕಾರದ ಆನ್ಲೈನ್ ತರಗತಿಗಳಿಗೆ ಮಾರ್ಗಸೂಚಿಗಳನ್ನು ಪಾಲಿಸದೇ ಹೆಚ್ಚಿನ ಅವಧಿಗಳನ್ನು ಪಡೆಯುತ್ತಿರುವುದರಿಂದ, ಮಕ್ಕಳ ಆರೋಗ್ಯ ಮತ್ತು ದೃಷ್ಟಿಯ ಮೇಲೆ ಪರಿಣಾಮಗಳುಂಟಾಗುತ್ತಿವೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ತಜ್ಞರ ವರದಿಯ ಶಿಫಾರಸಿನ ಅವಧಿಯನ್ವಯ ಆನ್-ಲೈನ್ ಬೋಧನೆ ಮಾಡಬೇಕು ಎಂದಿದೆ. ಈ ಮಾರ್ಗಸೂಚಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 (1995)ರ ಸೆಕ್ಷನ್ 124(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಸುತ್ತೋಲೆಯಲ್ಲಿ ತಜ್ಞರ ಸಮಿತಿ ಶಿಫಾರಸ್ಸಿನನ್ವಯ ಆನ್ಲೈನ್ ತರಗತಿಗಳ ಅವಧಿಯನ್ನು ವಿವರಿಸಲಾಗಿದ್ದು ಈ ಕೆಳಕಂಡಂತಿದೆ:

● ಪ್ರತಿ ಅವಧಿಯ ಗರಿಷ್ಠ ಸಮಯ: 30 ನಿಮಿಷಗಳು
● 6 ಮತ್ತು ಮೇಲ್ಪಟ್ಟ ತರಗತಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ 30-45 ನಿಮಿಷಗಳು
● ವಯೋಮಾನಕ್ಕೆ ಅನುಗುಣವಾಗಿ ದಿನಕ್ಕೆ 1 ರಿಂದ 4 ಗರಿಷ್ಠ ಅವಧಿಗಳನ್ನು ನಡೆಸಬಹುದು
● 2 ನೇ ತರಗತಿಯವರೆಗೆ ವಾರದಲ್ಲಿ ಪರ್ಯಾಯ ದಿನಗಳಲ್ಲಿ ಬೋಧನೆ
● 3 ನೇ ತರಗತಿಯ ನಂತರ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ತರಗತಿ ನಡೆಸಲು ಅವಕಾಶ
● 2 ನೇ ತರಗತಿಯವರೆಗೆ ಪೋಷಕರ ಉಪಸ್ಥಿತಿ ಕಡ್ಡಾಯ ಅಥವಾ ಪೋಷಕರ ಅನುಮತಿಯ ಮೇರೆಗೆ ಒಬ್ಬ ವಯಸ್ಕರ ಉಪಸ್ಥಿತಿಗೆ ಅವಕಾಶವಿದೆ

ಸಿಂಕ್ರೊನಸ್ (ನೇರ ಪ್ರಸಾರದ ಅಧಿವೇಶನಗಳು) ಮತ್ತು ಅಸಿಂಕ್ರೊನಸ್ (ಪೂರ್ವ-ಮುದ್ರಿತ ಅಧಿವೇಶನಗಳು) ವಿಧಾನಗಳಿಗೆ ಅನುಮತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದ ಖಾಸಗಿ ಶಾಲೆಗಳು ಆನ್-ಲೈನ್ ಬೋಧನೆ ಆರಂಭಿಸಿ ಹೆಚ್ಚುವರಿ ಶುಲ್ಕ ಪಾವತಿಸಲು ಒತ್ತಡ ತರುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರ ದೂರಿನನ್ವಯ ಕ್ರಮ ಕೈಗೊಂಡು ಹೆಚ್ಚುವರಿ ಶುಲ್ಕ ಪಡೆಯದೇ ಆನ್ಲೈನ್ ತರಗತಿಗಳನ್ನು ನಡೆಸುವಂತೆ ಏಪ್ರಿಲ್ 2020ರಲ್ಲಿ ಆದೇಶ ನೀಡಲಾಗಿತ್ತು. ಪೋಷಕರಿಗೆ ಮಕ್ಕಳ ಆನ್ಲೈನ್ ತರಗತಿಗಳಿಗೆ ಮೊಬೈಲ್‍ನಂತಹ ಸಾಧನಗಳನ್ನು ಕೊಳ್ಳಲು ಸಾಮರ್ಥ್ಯ ಇಲ್ಲದಿರುವ ಮತ್ತು ಎಲ್‍ಕೆಜಿಯಿಂದ ಐದನೇ ತರಗತಿ ಮಕ್ಕಳು ಆನ್-ಲೈನ್ ಶಿಕ್ಷಣದಲ್ಲಿ ಭಾಗವಹಿಸಲು ತೊಂದರೆಗಳಾಗುತ್ತಿವೆ ಎಂಬ ಪೋಷಕರ ದೂರಿನ ಹಿನ್ನೆಲೆಯಲ್ಲಿ ಜೂ.15ರಂದು ತಜ್ಞರ ಸಮಿತಿ ರಚಿಸಿ ಆನ್-ಲೈನ್ ಶಿಕ್ಷಣ ಕುರಿತು ವರದಿ ನೀಡಲು ಕೇಳಲಾಗಿತ್ತು.

ಏತನ್ಮಧ್ಯೆ ಜೂ. 17ರಂದು ಎಲ್‍ಕೆಜಿಯಿಂದ ಐದನೇ ತರಗತಿವರೆಗೆ ಆನ್-ಲೈನ್ ಶಿಕ್ಷಣ ರದ್ದುಪಡಿಸಲು ಆದೇಶ ಹೊರಡಿಸಲಾಗಿತ್ತು. ತಜ್ಞರ ಸಮಿತಿ ವರದಿ ಬರುವತನಕ ಪ್ರಾಥಮಿಕ ತರಗತಿಗಳಿಂದ 10ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣಕ್ಕೆ ತರಗತಿವಾರು ಆವಧಿ ನಿಗದಿಪಡಿಸಿ ಜೂ. 27ರಂದು ಸುತ್ತೋಲೆ ಹೊರಡಿಸಲಾಗಿತ್ತು. ಇಲಾಖೆಯ ಜೂ. 17ರ ಸುತ್ತೋಲೆ ವಿರುದ್ಧ ಖಾಸಗಿ ಶಿಕ್ಷಣಸಂಸ್ಥೆಗಳು ಉಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು, ಘನ ನ್ಯಾಯಾಲಯವು ಜೂ. 17 ಮತ್ತು ಜೂ. 27ರ ಆದೇಶಗಳಿಗೆ ತಡೆಯಾಜ್ಞೆ ನೀಡಿದ್ದು, ಆನ್-ಲೈನ್ ಶಿಕ್ಷಣವನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಹೋಗಲು ಅವಕಾಶ ನೀಡಿತ್ತು.

LEAVE A REPLY

Please enter your comment!
Please enter your name here