ಲಂಡನ್ ಡಿ.26: 2028ರಲ್ಲಿ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಅತೀ ದೊಡ್ಡ ಆರ್ಥಿಕತೆಯಾಗಿ ಚೀನಾ ಹೊರಹೊಮ್ಮಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
‘ಸೆಂಟರ್ ಫಾರ್ ಎಕನಾಮಿಕ್ಸ್ ಆಂಡ್ ಬಿಸಿನೆಸ್ ರಿಸರ್ಚ್’ ವರದಿಯು ಶನಿವಾರ ಬಿಡುಗಡೆಗೊಂಡಿದೆ. ಕೊರೊನಾದಿಂದ ಚೀನಾದ ಆರ್ಥಿಕತೆ ಬಲುಬೇಗ ಚೇತರಿಸಿಕೊಂಡಿದ್ದು, ಈ ಹಿಂದೆ ಅಂದಾಜು ಮಾಡಿದ್ದಕ್ಕಿಂತ ಐದು ವರ್ಷ ಮೊದಲೇ ಅಮೆರಿಕದ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎಂದು ಹೇಳಿದೆ.
ಇದನ್ನೂ ಓದಿ: ಸಾಲ ಮಂಜೂರು ಮಾಡುವ ಅನಧಿಕೃತ ಮೊಬೈಲ್ ಆ್ಯಪ್ಗಳ ಬಗ್ಗೆ ಎಚ್ಚರವಿರಲಿ : RBI
ಚೀನಾ ಮತ್ತು ಅಮೆರಿಕ ಆರ್ಥಿಕತೆಯ ನಡುವೆ ಕಳೆದ ಕೆಲವು ವರ್ಷಗಳಿಂದ ಭಾರಿ ಸಮರವೇ ಏರ್ಪಟ್ಟಿದೆ. ಹೀಗಿದ್ದೂ ಅಮೇರಿಕಾದ ಆರ್ಥಿಕತೆಯಿಂದ ಚೀನಾ ದೂರವೇ ಉಳಿದಿತ್ತು. ಆದರೆ ಕೊರೊನಾ ಬಿಕ್ಕಟ್ಟಿನ ಪರಿಣಾಮ ಅಮೆರಿಕ ಆರ್ಥಿಕತೆ ಕುಸಿದಿರುವುದು ಚೀನಾದ ಪಾಲಿಗೆ ವರವಾಗಿದೆ.
ಚೀನಾದ ಆರ್ಥಿಕತೆ 2021 ರಿಂದ 2025ರ ನಡುವೆ ಶೇ. 5.7ರ ದರದಲ್ಲಿ ಬೆಳವಣಿಗೆ ಕಾಣಲಿದೆ ಎಂದು ಅಂದಾಜು ಮಾಡಲಾಗಿದೆ. 2026 ರಿಂದ 2030ರ ನಡುವೆ ಚೀನಾದ ಬೆಳವಣಿಗೆ ದರ ಸ್ವಲ್ಪ ಕಡಿಮೆಯಾಗಲಿದ್ದು, ಶೇ.4.5 ಇರಬಹುದು ಲೆಕ್ಕಾಚಾರ ಹಾಕಲಾಗಿದೆ.
ಆದರೆ ಅಮೆರಿಕದ ಆರ್ಥಿಕತೆ ವೇಗವಾಗಿ ಹಳಿಗೆ ಮರಳಿದರೂ 2022-24ರ ನಡುವೆ ಶೇ.1.9ರಷ್ಟು ಮಾತ್ರ ಬೆಳವಣಿಗೆ ದಾಖಲಿಸಲಿದೆ. ಬಳಿಕ ಬೆಳವಣಿಗೆ ದರ ಸ್ವಲ್ಪ ಕಡಿಮೆಯಾಗಲಿದ್ದು ಶೇ. 1.6 ಇರಲಿದೆ.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಭಾರತ ಮೂರನೇ ದೊಡ್ಡ ಆರ್ಥಿಕತೆ..!
2030ರವರೆಗೆ ಜಪಾನ್ ವಿಶ್ವದ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿ ಮುಂದುವರಿಯಲಿದೆ. 2030ರ ವೇಳೆಗೆ ಭಾರತ ಜಪಾನ್ನ್ನು ಹಿಂದಿಕ್ಕಲಿದೆ. ಈ ವೇಳೆ ನಾಲ್ಕನೇ ಸ್ಥಾನದಲ್ಲಿರುವ ಜರ್ಮನಿ ಐದನೇ ಸ್ಥಾನಕ್ಕೆ ಕುಸಿಯಲಿದೆ.
2024ರ ವೇಳೆಗೆ ಭಾರತ ಐದನೇ ಸ್ಥಾನದಲ್ಲಿರುವ ಬ್ರಿಟನ್ನನ್ನು ಹಿಂದಿಕ್ಕಲಿದ್ದು, ವಿಶ್ವದ ಐದನೇ ಅತೀ ದೊಡ್ಡ ಆರ್ಥಿಕತೆಯಾಗಲಿದೆ. ಹಾಗೆ ನೋಡಿದರೆ 2018-19ರಿಂದಲೇ ಭಾರತ ಐದನೇ ಅತೀ ದೊಡ್ಡ ಆರ್ಥಿಕತೆಯಾಗಿತ್ತು. ಕೊರೊನಾ ಕಾರಣದಿಂದ ಈ ಸ್ಥಾನವನ್ನು ಕಳೆದುಕೊಂಡಿದ್ದು, ಮತ್ತೆ ಐದನೇ ಸ್ಥಾನಕ್ಕೇರಲು ನಾಲ್ಕು ವರ್ಷ ತೆಗೆದುಕೊಳ್ಳಲಿದೆ.
ಸಾಲ ಮಂಜೂರು ಮಾಡುವ ಅನಧಿಕೃತ ಮೊಬೈಲ್ ಆ್ಯಪ್ಗಳ ಬಗ್ಗೆ ಎಚ್ಚರವಿರಲಿ : RBI