ಆಸೆ -ದೋಸೆ

0
127
Tap to know MORE!

ಸೆಯ ಕುರಿತು ಮಾತನ್ನಾಡುವಾಗಲೆಲ್ಲ ನಮ್ಮ ಸಮಾಜ ಮತ್ತು ಸಮಾಜದ ಅನುಸರಣೀಯ ವ್ಯಕ್ತಿಗಳು ಹೇಳಿದ ಮಾತು “ಅದು ಕೆಟ್ಟದ್ದು”
ಆಸೆಯೇ ದುಃಖಕ್ಕೆ ಮೂಲ, ಮನದ ಮುಂದಣ ಆಸೆಯೇ ಮಾಯೆ, ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೇ ಅಯ್ಯ,ಅತಿಯಾಸೆ ಗತಿಗೇಡು….ಹೀಗೆ ಎಷ್ಟು ಬೇಕಾದರೂ ಈ ಪಟ್ಟಿಯನ್ನು ಬೆಳೆಸಬಹುದು,
ಇಲ್ಲೆಲ್ಲ ಆಸೆಯೆಂಬುದು ಮಾನಸಿಕ ವ್ಯಾಪಾರ ವೆಂದೂ ,ಸಾಮಾನ್ಯ ಜನೋಚಿತ ಮಾರ್ಗವೆಂದೂ ಬಿಂಬಿಸಲಾಗಿದೆ.

ಮನುಷ್ಯನು ತನ್ನ ಬದುಕನ್ನ ಆಹಾರ,ನಿದ್ರೆ,ಮೈಥುನಗಳ ಕನಿಷ್ಟ ಅಗತ್ಯತೆ ಯೆಂದು ತಿಳಿಯದೆ,ಅದನ್ನೊಂದು ಆದರ್ಶವಾದ ಸಂಗತಿಯೆಂದು,ಜೀವನ ವಿಧಾನವೆಂದು ಪರಿಭಾವಿಸಿದ ಪರಿಣಾಮ ತನ್ನ ಬದುಕನ್ನು basic needs ಗಿಂತ ಹೊರತಾಗಿ, ಮೆಲ್ತರಗತಿಯದೆಂದು ಸ್ವೀಕರಿಸಿದ,ಹಾಗಾಗಿ ಜ್ಞಾನ,ನೀತಿ,ಕಾನೂನು, ಸಹಕಾರಯಿವೇ ಮುಂತಾದ ತತ್ವಗಳನ್ನಾಶ್ರಯಿಸಿದ,

ಹೀಗೆ ಬದುಕನ್ನ ತತ್ವಗಳ ಹಿನ್ನೆಲೆಯಿಂದ ನೋಡಿದಾಗ ಆತನಿಗೆ ಮನುಷ್ಯನ ಬದುಕಿಗೆ ಆಸೆಯೇ ಪರಮ ಶತ್ರು ವೆನಿಸಿತು, ಈ ಆಸೆಯು ನಮ್ಮನ್ನು ನಮ್ಮ ದ್ಯೇಯದತ್ತ ಹೋಗಲೀಯದೆ ಸಂಸಾರ ದಲ್ಲಿ ಕಟ್ಟಿ ಹಾಕುತ್ತದೆ,ಅತ್ತಲಿತ್ತ ಸೆಳೆಯುತ್ತದೆ,ಮತ್ತೊಂದ ಬಯಸುತ್ತದೆ,.
ಪಂಚೇಂದ್ರಿಗಳು ಕೋರುವ ಆಸೆಗಳು ಮನುಷ್ಯನನ್ನು ಲೌಕಿಕದತ್ತಲೇ ಮತ್ತೆ ಮತ್ತೆ ಸೆಳೆಯುತ್ತವೆ, ಈ ಪಂಚೆಂದ್ರಿಯಗಳು ಬಯಸುವ ಪ್ರಾಪಂಚಿಕ ಸುಖಗಳು ನಮ್ಮ ಜೀವಿತದ ಉದ್ದೇಶವನ್ನು ಹಾಳುಗೆಡಹುತ್ತವೆ,ಹಾಗಾಗಿಯೇ ಆಸೆಯೆಂಬುದು ಅರಸಿಂಗಲ್ಲದೆ ಶಿವಶರಣರಿಗುಂಟೇ ಅಯ್ಯಾ ಎಂದು ವಚನಕಾರರು ಕೇಳುತ್ತಾರೆ‌ ನಾನು,ನನ್ನದು,ನನ್ನವರಿಗಾಗಿ ಇನ್ನಷ್ಟು ಮತ್ತಷ್ಟು ಕೂಡಿಡುವ ಎಲ್ಲರೂ ಸುಖವನ್ನು “ಅರಸು”ವವರು. ಆದರೆ ಶಿವಶರಣ ಇಂದಿನ,ನಾಳಿನ ಯಾವ ಸುಖಾಪೇಕ್ಷೆಯನ್ನೂ ಮಾಡದ ,ಬಂದುದನ್ನ ಬಂದಹಾಗೆ ಸ್ವೀಕರಿಸುವವನು. ಹಸಿವಾದರೆ ಬಿಕ್ಷಾನ್ನಗಳುಂಟು, ನೀರಡಿಕೆಯಾದರೆ ತೊರೆ ಹಳ್ಳಗಳುಂಟು ಯೆಂದು ನಮ್ಮ ಮನಸ್ಸಿನಲ್ಲಿ ಹುಟ್ಟುವ ಅನಂತ ಬಯಕೆಗಳನ್ನ ನಿಯಂತ್ರಣ ಮಾಡಿಕೊಂಡರೆ ಬದುಕು ನಮ್ಮ ಹಿಡಿತಕ್ಕೆ ಸಿಗುತ್ತದೆ, ಹಾಗಾಗಿ ಆಸೆಯೆಂಬುದು ನಮ್ಮ ಮನದ ಮುಂದೆಹೆಣ್ಣು,ಹೊನ್ನು,ಮಣ್ಣುಗಳ ಮಾಯೆಯನ್ನ ಸೃಷ್ಟಿ ಮಾಡುವ ಮೂಲಕ ಮನಸ್ಸನ್ನು ಚಂಚಲ ಗೊಳಿಸುತ್ತದೆ.
ಇಂತಹ ಮನದ ಮುಂದಣ ಆಸೆಯ ಪರಿಣಾಮವೇ ಆಡಮ್ ಮತ್ತು ಈವರಿಗೆ ಸೇಬನ್ನು ತಿನ್ನಲು ಪ್ರಚೋದಿಸಿತು, ಯಕ್ಷ ಪ್ರಶ್ನೆಯ ಪ್ರಸಂಗದಲ್ಲಿ ಪಾಂಡವರಿಗೆ ಬದುಕಿಗಾಗಿ ನೀರನ್ನು ಕುಡಿಯಲುಪ್ರೇರೇಪಿಸಿತು.ಗಾಳಕ್ಕೆ ಚುಚ್ಚಿದ ಎರೆಯನ್ನು ಕಚ್ಚಲು ಮೀನಿಗೆಪ್ರಚೋದಿಸಿತು,ಬೋನಿನಲ್ಲಿಟ್ಟ ಕಾಯಿ ಚೂರಿಗೆ ಬಾಯಿ ಹಾಕಲು ಇಲಿಗೆ ಸೂಚಿಸಿತು.

ಈ ಉದಾಹರಣೆಗಳಲ್ಲಿ ಆಡಮ್ಮನೋ,ಪಾಂಡವರೋ, ಇಲಿಯೋ,ಮೀನೋ,ಬಾಯಿ ಹಾಕಿದ ಪರಿಣಾಮವಾಗಿ ಅನುಭವಿಸಿದ ಸಂಕಟಗಳ ಸರಮಾಲೆಯನ್ನೇ ನಾವು ನೋಡಿದ್ದೇವೆ .
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂಬುದನ್ನರಿಯದೆ ನಾವು ಈ ಬದುಕು ಮಾತ್ರ ಸತ್ಯವೆಂದು ಬಗೆದು ನಾನು ನನ್ನದೆಂಬ ನೆಲೆಯಲ್ಲಿ ವ್ಯವಹರಿಸುವವರನ್ನು ಕಂಡು ದಾಸರು ಆರು ಹಿತವರು ನಿನಗೆ ಈಮೂವರೊಳಗೆ,ನಾರಿಯೋ,ಧಾರುಣಿಯೊ,ಬಲು ಧನದ ಸಿರಿಯೋಯೆಂದು ಕೇಳಿ ನಗುತ್ತಾರೆ .ಈ ಯಾವುದೂ ನನ್ನನ್ನು ವಿಚಲಿತ ಗೊಳಿಸಲಾರದೆಂಬುದಕ್ಕೆ ಪರಮ ಉದಾಹರಣೆಯ ರೂಪದದಲ್ಲಿ ಬುದ್ದಗುರು ನಮ್ಮೆದುರು ನಿಲ್ಲುತ್ತಾನೆ.
ಈ ಬದುಕು ನಮ್ಮೆದುರು ಆಸೆ,ಆಮಿಷಗನ್ನೊಡ್ಡುತ್ತದೆ,ಅದಕ್ಕೆ ಸಾಯದೆ ನಾವು “ಅವನಿಗಾಗಿ”ಸಾಯಬೇಕು. ಹೀಗಾಗಿ ಅವನತ್ತ ಹೋಗದಂತೆ ನಮ್ಮನ್ನು ತಡೆಯುತ್ತಿರುವ ಪಂಚೇಂದ್ರಿಯಗಳು ಹುಟ್ಟಿಸುವ ಮೋಹವನ್ನುಗೆಲ್ಲಬೇಕು,ಕಾಮವನ್ನು ಸುಡಬೇಕು,ನಮ್ಮ ಮನದ ಕಾಳಿಕೆಯನ್ನು ಸುಟ್ಟು, ಅಡಿಗಲ್ಲಿನ‌ ಮೇಲಿಟ್ಟು ಕುಟ್ಟಿ ಹದ ಮಾಡಬೇಕು.
ಆಸೆಯನ್ನು ಪೂರೈಸುವ ಮೂಲಕ ಅದರಿಂದ ಬಿಡುಗಡೆ ಪಡೆಯಬಹುದೆಂಬ ಭಾವನೆ ಸಲ್ಲದು, ಹಸಿವಾದಾಗ ಊಟಮಾಡುವ ಬಯಕೆಯನ್ನ ತೀರಿಸಿಕೊಂಡರೆ ತತ್ಕಾಲೀನ ಶಮನವಷ್ಟೆ. ಮತ್ತೆರಡು ಗಂಟೆಯಲ್ಲಿ ಬಯಕೆ ಪುನಃ ಕಾಡದಿರುತ್ತದೆಯೇ? ಹಾಗಾಗಿ ಈ ಬಯಕೆಯ ಕುದುರೆಗೆ ಲಗಾಮು ಹಾಕಿ ಮುಂಬರಿಯದಂತೆ,ಅದನ್ನು ನಿಲ್ಲಿಸಿ ಈ ಸಂಸಾರದ ರಥವನ್ನು ತನ್ನಿಚ್ಚೆಯ ಋಜು ಮಾರ್ಗದಲ್ಲಿ ಕೊಂಡೊಯ್ಯುವವನೇ ನಿಜವಾದ ಯೋಗಿ,ಗುರು.ವೀರ.
ಇದನ್ನರಿಯದ ನಾವು ಅಸೆಯೆಂಬ ಸಂಸಾರಕ್ಕೆ ಬಡಪಶುವಿನಂತೆ ಬಿದ್ದು ಕಾಲ ಬಡಿವುತ್ತಿದ್ದೇವೆ‌.

ಶೂಲಕ್ಕೆರಿದವ ಮರುಕ್ಷಣ ಬಂದೆರಗುವ ಸಾವನ್ನು ಮರೆತು ಹಾಲುತುಪ್ಪವ ಬಯಸುವಂತೆ. ಹಾವಿನ ಬಾಯ ಕಪ್ಪೆ ಹಾರುವ ನೊಣಕ್ಕೆ ಹಾರಲೆಳಸುವಂತೆ ಮತ್ತೆ ಮತ್ತೆ ಮನಬಂದುದ ಬಯಸೀಬಯಸೀ ಬೇವುತ್ತಿದ್ದೇವೆ. ಆಸೆಯೆಂಬ ಹಸಿವಿನ ಹೆಬ್ಬಾವು ಬಸಿರನ್ನ ಬಂದು ಹಿಡಿದಿದೆ ಹಸಿವಿಗನ್ನವನಿಕ್ಕಿ ವಿಷವನುಳಿಸುವ ಗಾರುಡಿಗನೇ ನಮ್ಮ ಅಸೆಯನ್ನು ಮಾಣಿಸಿ ಅವನತ್ತ ನೋಡುವ ಬಗೆಯನ್ನು ತೋರಬೇಕು.
ಇಷ್ಟೆಲ್ಲ ಹೇಳಿದರೂ ನಮ್ಮ “ಆಸೆ” ಮಾಯವಾಗುವುದಿಲ್ಲ.ಅಧಿಕಾರ, ಅಂತಸ್ತು, ಹಣ,ಅಂದದ ಹೆಂಡತಿ,ಗಂಡ,ವಾಹನ,ಉಡುಗೆ,ತೊಡುಗೆಗಳ ಆಸೆ ನಮ್ಮನ್ನು ಸದಾ ಸೆಳೆಯುತ್ತಲೆಯಿದೆ, ಆಸೆಯೆಂಬ ರಾವಣನಿಗೆ ಹತ್ತೆ ತಲೆ? ಅಲ್ಲಅದುಅನಂತ !!
,ಒಂದನ್ನು ಕತ್ತರಿಸಿದರೆ ಮತ್ತೊಂದು ಚಿಗುರಿಕೊಳ್ಳುವ ಇದು ಪರಮ ವಿಸ್ಮಯ,

ನಮ್ಮಆಸೆಯ,ದುರಾಸೆಯ .ಮೋಹದ ಅತ್ಯಂತ ಎತ್ತರದ ಶಿಖರ ಸ್ಥಿತಿ ಯನ್ನ ಮೊನ್ನೆ ಹೋಟೆಲೊಂದರಲ್ಲಿ ನೋಡಿದೆ. ನಮ್ಮಲ್ಲಿ ನೀರು ದೊಸೆಯೆಂಬುದಿದೆ, ಬರಿಯ ಅಕ್ಕಿಯನ್ನು ರುಬ್ಬಿ ಹೊಯ್ಯುವ ಅತ್ಯಂತ ಸುಲಭವು ಮಿತವ್ಯಯವೂ ಆದ ತಿಂಡಿ ,ಒಂದು ದೋಸೆಗೆ ಒಂದು ರೂಪಾಯಿ ಕೂಡಾ ಕರ್ಚಿಲ್ಲದಷ್ಟು ಚೀಪ್!!
ಆ ಹೋಟೆಲಿನಲ್ಲಿ ಕಾದ ಕಾವಲಿಗೆ ಒಂದು ಸೌಟು ಹಿಟ್ಟು ಹೊಯ್ದ, ಮರುಕ್ಷಣವೇ ಇಡೀ ಕಾವಲಿಯನ್ನು ಎತ್ತಿ ಅದರಲ್ಲಿದ್ದ ಹಿಟ್ಟನ್ನು ಪಾತ್ರೆಗೆ ಮರಳಿ ಸುರಿದ, ಕಾವಲಿಗೆ ಹೊಯ್ದಿದ್ದಾಗ ಏನು ಹಿಟ್ಟು ಕಾವಲಿಗೆ ಅಂಟಿಕೊಂಡಿತ್ತಲ್ಲಾ ಆ ತೆಳುವೂ ಪಾರದರ್ಶಕವೂ ಆದ ದೋಸೆಯನ್ನು ಎತ್ತಿ ಮಡಚಿ ಕೊಂಚ ಚಟ್ನಿ ಯೊಂದಿಗೆ ಗಿರಾಕಿಗೆ ನೀಡಿ ಇಪ್ಪತ್ತೈದು ರೂಪಾಯಿ ಬಿಲ್ಲು ನೀಡಿದ!!!!

ಹರೀಶ್ ಟಿ.ಜಿ

LEAVE A REPLY

Please enter your comment!
Please enter your name here