ಪುಳಕಗೊಳಿಸುವ ಆಹಾರಕ್ರಮ

0
232
Tap to know MORE!

ನಮ್ಮ ನಾಡಿನ ಬೇರೆಬೇರೆ ಪ್ರದೇಶಗಳ‌ ಆಹಾರ ಪದ್ದತಿಯನ್ನು ಕೊಂಚ ಗಮನಿಸಿದರೆ ಅಲ್ಲಿಯ ಊಟದ ವೈಶಿಷ್ಟ್ಯಗಳು ಮತ್ತು ಅವನ್ನಬತಯಾರಿಸುವ ಪ್ರಾದೇಶಿಕ ಪಾಕ‌ಪ್ರವೀಣತೆ ಗೋಚರಿಸುತ್ತದೆ ಮತ್ತು ನೀವೆಷ್ಟು ಪ್ರಯತ್ನಿಸಿದರೂ ಆ ಬಗೆಯ ಪಾಕವನ್ನು ಬೇರೆಕಡೆ ಬೇರೆಯವರಿಗೆ ಮಾಡಲಾಗುವುದಿಲ್ಲ. ಇದು ಒಂದು ಪ್ರದೇಶ,ಒಂದು ಜನಾಂಗಕ್ಕೆ ಹುಟ್ಟಿನಿಂದ ಬಂದ ಬಳುವಳಿ,ಸವಿಯಬಹುದಷ್ಟೆ, ಕಲಿಯಲಾಗುವುದಿಲ್ಲ‌‌‌.

ಮಲೆನಾಡಿನ ಅಕ್ಕಿ ಕಡುಬು ,ಅಕ್ಕಿರೊಟ್ಟಿ, ದಕ್ಷಿಣ ಕನ್ನಡದ ಮುಂಡುಗನ ಓಲಿಯ ಮೂಡೆ ಮತ್ತು ಹಲಸಿನ‌ ಕೊಟ್ಟೆಯ ಗುಂಡ ಮತ್ತು ತೆಂಗಿನಕಾಯಿ ಚಟ್ನಿ! ಕೋಲಾರ ಕಡೆಯ ರಾಗಿ ಮುದ್ದೆ ಬಸ್ಸಾರು, ಬೆಳಗಾವಿ ಕಡೆಯ ಕಟಕು ರೊಟ್ಟಿ…..ಇದನ್ನು ಈ ಪ್ರದೇಶಬಿಟ್ಟು ಬೇರೆಕಡೆ ಅಲಭ್ಯ!

ಇದಲ್ಲದೆ ಆಯಾ ಪ್ರದೇಶದ ಪದಾರ್ಥಗಳ ಪಟ್ಟಿಯನ್ನು ನೋಡಿದರೂ ಇಂತದೆ ವೈಶಿಷ್ಟ್ಯ ಕಂಡುಬರುತ್ತದೆ. ಮಲೆನಾಡಿನ ಬೇಳೆ ಬೆಲ್ಲ ಕಡಿಮೆಯ ಪದಾರ್ಥಗಳು. ದಕ್ಷಿಣ ಕನ್ನಡದ ಬೇಳೆ, ಬೆಲ್ಲ, ತೆಂಗಿನಕಾಯಿ ಜಾಸ್ತಿಯೇ ಹಾಕಿದ ಸಿಹಿಹುಳಿ, ಮುದ್ದು ಹುಳಿ, ಗುಳ್ಳಹುಳಿ, ಮೆಣಸುಗಾಯಿ, ಉತ್ತರಕ್ಕೆ ಹೋದರೆ ಅವರೆ ಬೇಳೆ ಹಾಕಿದ, ಬೆಲ್ಲವನ್ನೇ ಕಾಣದ ಹುಳಿ, ಬತ್ಸಾರು ,ಉದಕ, ರಸಗಳೆಂಬವು ನಮ್ಮ ನಾಲಗೆಗೆ ಕಟಕು ರುಚಿ ಕೊಡುತ್ತವೆ.

ಇದರ ಜೊತೆಗೆ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಕೆಲವು ಪ್ರದೇಶಗಳ ಬೆಳೆಗಳ ಲಭ್ಯತೆಯ ಸೀಜನ್ನಿನಲ್ಲಿ ಬರೀ ಅದನ್ನೇ ತಿಂದು ತಿಂದು ಸಾಕಪ್ಪಾ ಸಾಕು ಅನ್ನಿಸುವಂತೆ , ಎಲ್ಲಿ,ಯಾರ ಮನೆಗೆ ಹೋದರೂ ಅದೇ ಪದಾರ್ಥಗಳು ನಮ್ಮನ್ನು ಎದಿರುಗೊಂಡು ನಮಗೆ ಸುಸ್ತು ಬರಿಸುತ್ತವೆ. ಆದರೂ ನಾವು ಸೋಲದೇ ಅದನ್ನು ಮತ್ತೆಮತ್ತೆ ಸವಿದು ಚಪ್ಪರಿಸುತ್ತೇವೆ. ಇಂತಹ ಬೆಳೆಗಳ ಮೇಲೋಗರಗಳನ್ನು ಜನ ಸಂಭ್ರಮದಿಂದ ಸ್ವಾಗತಿಸುವುದಲ್ಲದೆ ,ಈ ಸೀಜನ್ನುಗಳನ್ನು ಇದಿರುಗೊಂಡು ಹಬ್ಬದಂತೆ ಆಚರಿಸುತ್ತಾರೆ , ನೆಂಟರಿಷ್ಟರಿಗೆ ಮನೆಗೆ ಆಹ್ವಾನಿಸಿ ಪದಾರ್ಥ,ತಿಂಡಿ ಮಾಡಿ ಉಪಚರಿಸುತ್ತಾರೆ.

ಉಡುಪಿಯ ಪರಿಸರದಲ್ಲಿ ಮಳೆಗಾಲ ಮುಗೀತಿದ್ದ ಹಾಗೇ ಮಟ್ಟುಯೆಂಬಲ್ಲಿ ಮಾತ್ರ ಬೆಳೆವ ಬದನೆಕಾಯಿಯು, ‘ಗುಳ್ಳ,’ ಅಥವಾ ‘ವಾದಿರಾಜ ಗುಳ್ಳ’ ಯೆಂಬ ಅಭಿದಾನದಿಂದ ಮಾರುಕಟ್ಟೆಗೆ ಧಾಂಗುಡಿಯಿಡುತ್ತಿದ್ದ ಹಾಗೇ ಬೋಜನಪ್ರಿಯರ ನಾಲಗೆ ತುರಿಸಲಾರಂಭಿಸುತ್ತದೆ. ವಿಶಿಷ್ಟ ಪರಿಮಳ ಬೀರುವ ಗುಳ್ಳಕ್ಕೆ ತೊಗರಿಬೇಳೆ ಬೆಲ್ಲ ಮತ್ತು ಯಥೇಚ್ಛವಾಗಿ ತೆಂಗಿನಕಾಯಿಯನ್ನು ಹಾಕಿ ದಪ್ಪದಪ್ಪವಾದ ಗುಳ್ಳಹುಳಿ ಬಿಸಿಬಿಸಿಯಾಗಿ ಎಲೆಗೆ ಬೀಳುತ್ತಿದ್ದ ಹಾಗೇ ನಾಲಗೆಯ ಯಾವಯಾವುದೋ ಮೂಲೆಯ ರಸಗ್ರಂಥಿಗಳ ಸೆಲೆಯೊಡೆದು ಜನರು ಗುಳ್ಳಹುಳಿಯನ್ನು ಸವಿವ ಚಂದವನ್ನು ನೋಡಬೇಕು. ಸಣ್ಣಸಣ್ಣ ಗುಳ್ಳಗನ್ನು ತೊಟ್ಟಿರುವ ಹಾಗೇ ಇಡೀ ಕಾಯನ್ನು ಸಣ್ಣಗೆ ಸೀಳು ಮಾಡಿ ಅದಕ್ಕೆ ಮಸಾಲೆ ತುಂಬಿ ಎಣ್ಣೆಗಾಯಿ ಮಾಡಿ ಇಡಿಡೀ ಗುಳ್ಳವನ್ನು ಎಲೆಗೆ ಹಾಕಿಕೊಂಡು ಸವಿಯುವ ಮಜ ನೋಡಬೇಕು, ಈ ಸಮಯದಲ್ಲಿ ಯಾವುದೇ ಹೋಟೆಲ್, ದೇವಳ, ಮದುವೆ ಛತ್ರಗಳಲ್ಲಿಬರೀ ಇದರದ್ದೇ ಹುಳಿ! ಒಂದು ಗುಳ್ಳವನ್ನು ಎರಡೇ ಭಾಗ ಮಾಡಿದ ಸಿಹಿಸಿಹೀ ಗುಳ್ಳಹುಳಿಯನ್ನು ಸವಿಯದೆ ಗುಳ್ಳ ಸೀಜನ್ ಮುಗಿವುದಿಲ್ಲ.ದೇಶದ ಹೊರಗಿರುವ ಉಡುಪಿ ಮಂದಿ ಈ ಸಮಯದಲ್ಲಿ ಗುಳ್ಳಹುಳಿಯನ್ನು ನೆನಪು ಮಾಡಿಕೊಳ್ಳುತ್ತಾರೆ.

ಇಂತಹುದೇ ಇನ್ನೊಂದು ಬೆಳೆಯೆಂದರೆ ಬೆಂಗಳೂರು ಸುತ್ತಮುತ್ತ ಶಿವರಾತ್ರಿ ಸಮಯದಲ್ಲಿ ಮಾರುಕಟ್ಟೆಗೆ ಬರುವ ಅವರೆಕಾಯಿ ಅಥವಾ ಸೊಗಡವರೆ . ಇದು ಆರಂಭವಾದಲ್ಲಿಂದ ಮುಗಿಯುವವರೆಗೆ ಪ್ರತೀ ಮನೆಯಲ್ಲಿ ಇದರ ಕಾಳಿನ ಹುಳಿ, ಕಾಳಿನ ಪಲ್ಯ,ಗಸಿ,.ಕಾಳನ್ನು ಹಿಚುಕಿ ಮೇಲಿನ ಸಿಪ್ಪೆ ಸುಲಿದ ‘ಹಿತಕವರೆ ‘ಹುಳಿ,ಪಲ್ಯ ಗಸಿ.ಬೆಳಗ್ಗೆ ಹಿತಕವರೆ ಉಪ್ಪಿಟ್ಟು, ಹಿಕವರೆ ರೊಟ್ಟಿ.ಸಂಜೆಗೆ ಹಿತಕವರೆ ಪಾಯಸ,ಹೋಳಿಗೆ.

ಮಲೆನಾಡಿನಲ್ಲಿ ಮಳೆಗಾಲದ ಹಲಸಿನ ಕಾಯಿಗೆ ಇಂತಹ ಸ್ಥಾನ.ಆ ಮೂರುತಿಂಗಳಿಡೀ ಪ್ರತೀ ಮನೆಯಲ್ಲಿ ಹಲಸು ,ಹಲಸು ,ಮತ್ತು ಹಲಸು! ಹಲಸಿನ ಮಿಡಿ ಗೇಣುದ್ದವಾದ ಕೂಡಲೇ ಕೊಯ್ದು,ಮುಳ್ಳನ್ನ ಹೆರೆದು ಬೇಯಿಸಿ, ಗುದ್ದಿ, ಸಾಸಿವೆ ಒಗ್ಗರಣೆ ನೀಡಿ ಚಟ್ನಿ ರೆಡಿ. ಇನ್ನೊಂಚೂರು ಬಲಿಯಿತೋ?,ಕಾಯಿಸಾಸಿವೆ ಹಾಕಿ ಪಲ್ಯ, ತೊಳೆ,ಬೀಜ ಮೂಡಿತೋ ಹುಳಿ,!!ಚನ್ನಾಗಿ ಬಲಿಯಿತೋ ತೊಳೆ ಬಿಡಿಸಿ ತೊಳೆಯ ಪಲ್ಯ!!ಬೇಯಿಸಿ ಗುದ್ದಿ ಹಪ್ಪಳ, ಬೆಳೆದ ತೊಳೆಯ ಚಿಪ್ಸ್. ತೊಳೆಯನ್ನು ಕಡೆದು ದೋಸೆ, ತೊಳೆಯನ್ನು ಸಣ್ಣಗೆ ಹೆಚ್ಚಿ,ಅಕ್ಕಿಯೊಂದಿಗೆ ಕಡೆದು ಚಟ್ಟಂಬಡೆ!! ಹಣ್ಣಾಯಿತೋ ಹಣ್ಣಿನ ಹಪ್ಪಳ ,ಮಾಂಬಳ, ಹಲಸಿನ ಹಣ್ಣಿನ ಕಡಬು!! ಬೆಳಗ್ಗೆ ಇಡ್ಲಿಪಾತ್ರದಲ್ಲಿ ಬೆಂದಂತಹ ಬಿಸಿಬಿಸೀ ಕಡಬು ನಮ್ಮ ಎಲೆಯ ಮೇಲೆ ಕೂತು ಅದರ ತಲೆಯ ಮೇಲೆ ಒಂದು ಮಿಳ್ಳೆ ತುಪ್ಪವೂ ಬಿದ್ದು!!! ಆಹಾ ಸುಖವೇ!!

ಹಲಸಿನ‌ಹಣ್ಣುಯೆಂಬಾಗ ನೆನಪಾಗುವುದು ಮುಳಕ! ಹೆಚ್ಚು ಖರ್ಚಿಲ್ಲದೆ ಸಿದ್ದವಾಗುವ ಈ ಎಣ್ಣೆತಿಂಡಿ ನೆನೆದಾಗಲೆಲ್ಲ ಹಿತಾನುಭವ ಮೂಡಿಸುತ್ತದೆ . ಅಕ್ಕಿ ಬೆಲ್ಲದೊಂದಿಗೆ ಹಣ್ಣನ್ನು ಕಡೆದು, ಬಿಸಿಯೆಣ್ಣೆಗೆ ಬಿಟ್ಟು ಕರಿದು, ಬಾಣಲೆಯಿಂದ ನಮ್ಮತಟ್ಟೆಗೇ ಬೀಳುತ್ತಿದ್ದ ಬಿಸಿಬಿಸೀ ಮುಳಕವನ್ನು ಬಿಸಿಯಿರುವಂತೆಯೇ ಹಾ,ಹೂ ಎನ್ನುತ್ತಾ ತಿನ್ನುವ ಸೊಗಸೇನು !

ಇನ್ನು ಸಂಜೆಗೆ ಹಲಸಿನ ಹಪ್ಪಳ ವನ್ನು ಸುಟ್ಟು ,ಕೊಬ್ಬರಿಯೆಣ್ಣೆ ಸವರಿ.ಇಷ್ಟು ಎಳೆಯ ತೆಂಗಿನಕಾಯಿ ತುರಿ, ಇಷ್ಟುದೊಡ್ಡ ಅಂಟು ಬೆಲ್ಲ ಇಟಗೊಂಡು ಚೂರುಚೂರೇ ತಿನ್ನುವ ಮಜ. ಉಳಿದಂತೆ ಹಲಸಿನ ಬೀಜ ಒಲೆಯಲ್ಲಿ ಸುಟ್ಟು ತಿನ್ನುವ ಸುಖ!! ತಿಂದೂ ತಿಂದೂ ಬೇಜಾರಾದ ಮೇಲೆ ,ಹಲಸಿನ‌ ತೊಳೆಯನ್ನು ಬೀಜ ಸಮೇತ ಉಪ್ಪುನೀರಿಗೆ ಹಾಕಿ ಮುಂದೆ ಹಲಸು ಖಾಲಿಯಾದ ಮೇಲೆ ಗೊಜ್ಜು,ಗಸಿ,ಪಲ್ಯ ,ದೋಸೆ!!!
ಮಲೆನಾಡಿನಲ್ಲಿ ಮಳೆಗಾಲದಲ್ಲಿ ಬರುವ ಬಿದಿರಿನ ಮೊಳಕೆ ಕೂಡಾ ಬಹು ಪ್ರಿಯವಾದ ತರಕಾರಿ. ಕಳಲೆ ಯೆಂಬ ಹೆಸರಿನಲ್ಲಿ ಜನಪ್ರಿಯವಾದ ಇದನ್ನು ಮುರಿದು ತಂದು ಗಾಲಿಗಾಲಿಯಾಗಿ ಹೆಚ್ಚಿ ಮೂರುದಿನ ನೆನಸಿಟ್ಟು ನಂತರ ಹಲಸಿನ‌ಬೀಜವೋ ಸೌತೆಕಾಯಿಯೋ,ಬೀನ್ಸೋ ಸೇರಿಸಿ ಮಾಡುವ ಪರಿಮಳದ ಹುಳಿ!ಸಣ್ಣಗೆ ಹೆಚ್ಚಿದ ಕಳಲೆಯ ಪಲ್ಯ, ನಾಲಗೆಯಲ್ಲಿ ನೀರೂರಿಸುವ ಉಪ್ಪಿನಕಾಯಿ,,,,,ಛೆ ಛೆ ಛೆ ಮಳೆಗಾಲದಲ್ಲಿ ಮಲೆನಾಡಿಗೆ ಹೋಗದವನು ಅದೃಷ್ಟ ಹೀನನೆ ಸರಿ‌‌ .

ನಮ್ಮ ಗ್ರಾಮೀಣರಿಗೆ ಸ್ಥಳೀಯವಾಗಿ ಲಭ್ಯವಿರುವ ಬೆಳೆಗಳನ್ನು ಆಯಾ ಕಾಲದಲ್ಲಿ ಯಥೇಚ್ಛವಾಗಿ ಸವಿವ, ಪರರಿಗೆ ನೀಡುವ,ದೂರದೂರಿಗೆ ಹಂಚುವ ಪ್ರೀತಿ ಸಹಜವಾಗಿ ಬಂದಿದೆ, ಅವರೆ,ಶೇಂಗಾ, ಕಡಲೆ,ಕಬ್ಬು ಮತ್ತು ಬೆಲ್ಲ, ಕಬ್ಬಿನ ಹಾಲು ಮುಂತಾದವುಗಳು ಲಭ್ಯವಾಗುವಾಗ ನೆಂಟರನ್ನು ಮನೆಗೆ ಕರೆಕರೆದು ಉಣಬಡಿಸುವ, ನೀಡುವ ಖುಷಿಗಿಂತ ಮಿಗಿಲಾದ ಖುಷಿ ಮತ್ತೊಂದಿಲ್ಲ.

ಈ ಮನೋಭಾವ ಹಳ್ಳಿಗಳಲ್ಲಿ ಇವತ್ತಿಗೂ ಕಂಡುಬರುತ್ತಿರುವುದು ಅತ್ಯಂತ ಸಂತೋಷದ ವಿಚಾರ.ಇದು ಹಳ್ಳಿಗರ ಸಹಜ ಗುಣ. ಜನರ ಈ ಮನೋಭಾವದಲ್ಲಿ ಯಾವುದೇ ಬದಲಾವಣೆಯಾಗದಿರಲಿ,ಈ ಬೆಳೆಗಳು ಆಯಾ ಕಾಲಮಾನದಲ್ಲಿ ಯಥೇಚ್ಛವಾಗಿ ಲಭ್ಯವಾಗಲಿ.

ಹರೀಶ್. ಟಿ.ಜಿ

LEAVE A REPLY

Please enter your comment!
Please enter your name here