ಬೆಂಗಳೂರು: ಅಮೆರಿಕಾದ ದೈತ್ಯ ಟೆಕ್ ಕಂಪನಿಯಾದ ಆ್ಯಪಲ್, ಬೆಂಗಳೂರಿನಲ್ಲಿ 4 ಲಕ್ಷ ಚ.ಅಡಿ ಜಾಗವನ್ನು ಗುತ್ತಿಗೆಗೆ (ಲೀಸ್) ಪಡೆದಿದೆ. ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲಕರವಾದ ಜಾಗ ಇದಾಗಿದ್ದು, ಬೆಂಗಳೂರಿನಲ್ಲಿ ತನ್ನ ಉದ್ಯಮ ವಿಸ್ತರಣೆಗೆ ಆ್ಯಪಲ್ ಮುಂದಾಗಿದೆ ಎಂದು ಮೂಲಗಳು ಹೇಳಿವೆ.
ಭಾರತಕ್ಕೆ ಸಂಬಂಧಿಸಿದಂತೆ ಇದು ಆ್ಯಪಲ್ನ ದೊಡ್ಡ ರಿಯಲ್ ಎಸ್ಟೇಟ್ ಡೀಲ್ ಆಗಿದೆ. ಪ್ರೆಸ್ಟೀಜ್ನ ಮಿನ್ಸ್ಕ್ ಸ್ಕ್ವೇರ್ ಕಟ್ಟಡವನ್ನು ಆ್ಯಪಲ್ ಲೀಸ್ಗೆ ಪಡೆದಿದೆ.
ಐಫೋನ್ ತಯಾರಕ ಕಂಪನಿಯಾದ ಆ್ಯಪಲ್, ಭಾರತದಲ್ಲಿ ಆನ್ಲೈನ್ ರಿಟೇಲ್ ಸ್ಟೋರ್ ಆರಂಭಿಸುತ್ತಿದೆ. ಈ ಬೆನ್ನಲ್ಲಿಯೇ ಬೆಂಗಳೂರಿನಲ್ಲಿ ದೊಡ್ಡ ಡೀಲ್ ನಡೆದಿದೆ. ಆ್ಯಪಲ್ ಕಂಪನಿಯು ಈಗಾಗಲೇ ಸ್ಮಾರ್ಟ್ಫೋನ್ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಿದೆ. ಬೆಂಗಳೂರಿನಲ್ಲಿ ಐಫೋನ್ ಜೋಡಣೆ ಕಾರ್ಯವೂ ನಡೆಯುತ್ತಿದೆ. ಇನ್ನು ನವೆಂಬರ್ನಲ್ಲಿ ಮುಂಬಯಿನಲ್ಲಿ ತನ್ನ ಮೊದಲ ಅಧಿಕೃತ ಮಳಿಗೆಯನ್ನು ತೆರೆಯುವುದಾಗಿ ಇತ್ತೀಚೆಗಷ್ಟೇ ಘೋಷಿಸಿತ್ತು.
ಬೆಂಗಳೂರಿನ ಹೊಸ ಕಚೇರಿಯು ದೊಡ್ಡ ಟೆಕ್ನಾಲಜಿ ಕೇಂದ್ರವಾಗಲಿದೆ. 4,000 ಉದ್ಯೋಗಿಗಳಿಗೆ ಇಲ್ಲಿ ಕೆಲಸ ಮಾಡಲು ಜಾಗವಾಗಲಿದೆ. ಆದರೆ ಸದ್ಯ, ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಬಹುದು ಎನ್ನಲಾಗಿದೆ.