ಮೊಬೈಲ್ ಆ್ಯಪ್ ನಿಷೇಧ ಮಾಡುವ ಭಾರತದ ಕ್ರಮವು, ಚೀನಾದ ಹೂಡಿಕೆದಾರರು ಮತ್ತು ಸೇವಾ ಪೂರೈಕೆದಾರರ ಕಾನೂನು ಹಿತಾಸಕ್ತಿಗಳನ್ನು ಉಲ್ಲಂಘಿಸುತ್ತದೆ ಎಂದು ಚೀನಾ ಗುರುವಾರ ಹೇಳಿದೆ.
ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರ ಗಾವೊ ಫೆಂಗ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈ ವಿಚಾರದ ಬಗ್ಗೆ ಬೀಜಿಂಗ್ ಗಂಭೀರವಾಗಿ ಕಾಳಜಿವಹಿಸುತ್ತಿದೆ ಮತ್ತು ಚೀನಾದ ಮೊಬೈಲ್ ಅಪ್ಲಿಕೇಶನ್ಗಳ ನಿಷೇಧವನ್ನು ದೃಢವಾಗಿ ವಿರೋಧಿಸುತ್ತದೆ. ಡೇಟಾ ಗೌಪ್ಯತೆಯ ಕಾಳಜಿ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದು ಉಲ್ಲೇಖಿಸಿ ಜನಪ್ರಿಯ ಗೇಮಿಂಗ್ ಆ್ಯಪ್ PUBg ಸೇರಿದಂತೆ ಚೀನಾದೊಂದಿಗೆ ಸಂಬಂಧವಿರುವ 118 ಮೊಬೈಲ್ ಅಪ್ಲಿಕೇಶನ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಒಂದು ದಿನದ ನಂತರ ಚೀನಾದಿಂದ ಈ ಪ್ರತಿಕ್ರಿಯೆ ಬಂದಿದೆ.
ನಿನ್ನೆಯ 118 ಸೇರಿದಂತೆ, ಭಾರತವು ನಿಷೇಧಿಸಿರುವ ಒಟ್ಟು ಚೀನೀ-ಸಂಬಂಧಿತ ಮೊಬೈಲ್ ಅಪ್ಲಿಕೇಶನ್ಗಳ ಸಂಖ್ಯೆ 224 ಕ್ಕೆ ಏರಿದೆ. “ಭಾರತದ ಸಾರ್ವಭೌಮತ್ವ, ರಕ್ಷಣೆ, ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಮಗ್ರತೆಗೆ ಧಕ್ಕೆ ತರುವ 118 ಮೊಬೈಲ್ ಅಪ್ಲಿಕೇಶನ್ಗಳನ್ನು ಸರ್ಕಾರ ನಿರ್ಬಂಧಿಸುತ್ತದೆ” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಹೇಳಿಕೆ ತಿಳಿಸಿದೆ.
ಲಡಾಖ್ನಲ್ಲಿ ಚೀನಾದೊಂದಿಗೆ ಎದ್ದಿರುವ ಹೊಸ ಗಡಿ ಉದ್ವಿಗ್ನತೆಯ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರುವ ಕೆಲವು ಮೊಬೈಲ್ ಅಪ್ಲಿಕೇಶನ್ಗಳ ದುರುಪಯೋಗದ ಬಗ್ಗೆ ಹಲವಾರು ವರದಿಗಳನ್ನು ಒಳಗೊಂಡಂತೆ ಐಟಿ ಸಚಿವಾಲಯವು ಹಲವಾರು ಮೂಲಗಳಿಂದ ಪಡೆದ ದೂರುಗಳನ್ನು ಉಲ್ಲೇಖಿಸಿದೆ.