ಅಮರಾವತಿ: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಹೊಂದುವ, ಜಗನ್ ಮೋಹನ್ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಎದುರಾದ ಶಾಸಕಾಂಗದ ಅಡಚಣೆಯನ್ನು ತೆರವುಗೊಳಿಸಿ, ರಾಜ್ಯಪಾಲ ಬಿಸ್ವಾ ಭೂಷಣ್ ಹರಿಚಂದನ್ ಅವರು ಇಂದು ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆ, 2020 ಮತ್ತು ಆಂಧ್ರಪ್ರದೇಶ ರಾಜಧಾನಿ ಪ್ರದೇಶಗಳ ಅಭಿವೃದ್ಧಿ ಪ್ರಾಧಿಕಾರ (ಹಿಂತೆಗೆದುಕೊಳ್ಳುವಿಕೆ) ಮಸೂದೆ, 2020ಗೆ ಒಪ್ಪಿಗೆ ನೀಡಿದ್ದಾರೆ.
ಆ ಮೂಲಕ ಇಲ್ಲಿಯವರೆಗೂ ಆಂಧ್ರ ಪ್ರದೇಶಕ್ಕೆ ಅಮರಾವತಿ ಮಾತ್ರವೇ ರಾಜಧಾನಿ ಎಂಬುವುದಕ್ಕೆ ಸಿಎಂ ಜಗನ್ ಎಳ್ಳು ನೀರು ಬಿಟ್ಟಿದ್ದು, ಅಮರಾವತಿ ಆಡಳಿತಾತ್ಮಕ ರಾಜಧಾನಿಯಾಗಿ ಮಾತ್ರ ಉಳಿಯಲಿದೆ. ಉಳಿದಂತೆ ವಿಶಾಖ ಪಟ್ಟಣ ಕಾರ್ಯಾಂಗ ರಾಜಧಾನಿಯಾಗಿರಲಿದ್ದು, ಕರ್ನೂಲು ಜಿಲ್ಲೆ ನ್ಯಾಯಾಂಗ ರಾಜಧಾನಿಯಾಗಿರಲಿದೆ.
ರಾಜ್ಯಪಾಲರ ಒಪ್ಪಿಗೆಯನ್ನು ಅನುಸರಿಸಿ ಎರಡು ಮಸೂದೆಗಳು ಈಗ ಔಪಚಾರಿಕವಾಗಿ ಕಾನೂನಾಗುತ್ತಿದ್ದರೂ, ಅಂತಿಮವಾಗಿ ತನ್ನ ಮೂರು ರಾಜಧಾನಿಗಳ ಯೋಜನೆಯನ್ನು ಜಾರಿಗೊಳಿಸುವ ಮೊದಲು ಸರ್ಕಾರವು ಕಾನೂನು ತೊಡಕುಗಳನ್ನು ತೆರವುಗೊಳಿಸಬೇಕಾಗುತ್ತದೆ.
ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡುವ ಕುರಿತು ಸಿಎಂ ಜಗನ್ ಸರ್ಕಾರ ಮೂರು ವಾರಗಳ ಹಿಂದಷ್ಟೇ ಆಂಧ್ರ ಪ್ರದೇಶ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ “ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ” ಕುರಿತಾದ ಮಸೂದೆ ಮಂಡಿಸಿ ವಿಧಾನಸಭೆಯ ಅನುಮೋದನೆ ಪಡೆದಿತ್ತು.
ತೀವ್ರ ವಿರೋಧ ಮತ್ತು ತೀವ್ರ ಚರ್ಚೆಗಳ ನಡುವೆಯೇ ‘ಪ್ರತ್ಯೇಕಿತ’ ಆಂಧ್ರ ಪ್ರದೇಶ ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ನೀಡುವ ಪ್ರಸ್ತಾವಣೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.