ಉಡುಪಿಯ `ಸಮಗ್ರ ಗ್ರಾಮೀಣ ಆಶ್ರಮ’ಕ್ಕೆ ವಿಶ್ವಸಂಸ್ಥೆಯ ಹ್ಯಾಬಿಟಾಟ್ ಗೋಲ್ಡನ್ ಅವಾರ್ಡ್

0
5446
Tap to know MORE!

ಬುಡಕಟ್ಟು ಸಮುದಾಯಗಳ ಏಳಿಗೆಗಾಗಿ ಹೋರಾಡುತ್ತಿರುವ ಸಂಸ್ಥೆ. ಸ್ವಯಂ ಸೇವಕರುಗಳೇ ಅದರ ರುವಾರಿಗಳು. ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೇ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ನಿರಾಶ್ರಿತರಿಗೆ, ಅಸಹಾಯಕರಿಗೆ, ವಿಚಿತ್ರ ಪದ್ಧತಿಗಳಿಂದ ಬಳಲುತ್ತಿದ್ದವರಿಗೆ ಮುಕ್ತಿ ನೀಡಿ, ಅಂತಹ ಜೀವಗಳಿಗೆ ಬದುಕು ಕಲ್ಪಿಸಿಕೊಡಲು ಹೋರಾಡುತ್ತಿರುವ ಸರ್ಕಾರೇತರ ಸಂಸ್ಥೆಯೇ ಉಡುಪಿಯ `ಸಮಗ್ರ ಗ್ರಾಮೀಣ ಆಶ್ರಮ’. ಕಳೆದ 22ವರ್ಷಗಳಿಂದ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಈ ಸಂಸ್ಥೆ, `ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ’, `ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ’ ಹಾಗೂ `ಆಕ್ಷನ್ ಏಡ್ ಇಂಡಿಯಾ’ಗಳ ಜಂಟಿ ಆಶ್ರಯದಲ್ಲಿ ಕಾರ್ಯ ನಿರ್ವಹಿಸುವ ವ್ಯವಸ್ಥಿತ ಸಂಘಟನೆಯಾಗಿದೆ. ಈ ಸಂಸ್ಥೆಯ ಸೇವಾಕಾರ್ಯಕ್ಕೆ ಇದೀಗ 2019-20ನೇ ಸಾಲಿನ ಬ್ರಿಟಿಷ್ ಮೂಲದ ಹ್ಯಾಬಿಟಾಟ್ ಸಂಸ್ಥೆಯು ಯುಎನ್ ಹ್ಯಾಬಿಟಾಟ್ ಸಹಯೋಗದಲ್ಲಿ ಸಾಮಾಜಿಕ ಕಾರ್ಯಗಳಿಗೆ ನೀಡಲ್ಪಡುವ ಪ್ರತಿಷ್ಠಿತ ಪ್ರಶಸ್ತಿ `ಹ್ಯಾಬಿಟಾಟ್ ಗೋಲ್ಡನ್ ಅವಾರ್ಡ್’ ಲಭಿಸಿರುವುದು ನಾಡಿಗೆ ಹೆಮ್ಮೆಯ ಸಂಗತಿ.

ಕರ್ನಾಟಕಕ್ಕೆ ಮೊದಲನೇ ಬಾರಿ ಹಾಗೂ ಭಾರತಕ್ಕೆ 4ನೇ ಬಾರಿ ಈ ಪ್ರಶಸ್ತಿ ದೊರೆತಿದ್ದು, `ಸಮಗ್ರ ಗ್ರಾಮೀಣ ಆಶ್ರಮ’ದ ಅಧ್ಯಕ್ಷೆ ಶಕುಂತಲಾ ಕೊರಗ ನೇಜಾರು, ನಿರ್ದೇಶಕ ಅಶೋಕ್ ಶೆಟ್ಟಿ ಫೆ 12ರಂದು ಅಬುದಾಬಿಯಲ್ಲಿ ನಡೆದ ಸಮ್ಮೆಳನದಲ್ಲಿ ಯು.ಎನ್ ಡೆಪ್ಯುಟಿ ಡೈರೆಕ್ಟರ್ ವಿಕ್ಟರ್ ಒಸಾಕಾ ಅವರಿಂದ ಪ್ರಶಸ್ತಿ ಸ್ವೀಕರಿಸಿರುವುದು ರಾಜ್ಯಕ್ಕೆ ಹೆಗ್ಗಳಿಕೆಯೇ ಸರಿ.

ಸಮಗ್ರ ಗ್ರಾಮೀಣ ಆಶ್ರಮ ನಡೆದು ಬಂದ ಹಾದಿ:
ಬುಡಕಟ್ಟು ಜನರ ಅಭಿವೃದ್ದಿಯನ್ನೇ ಗುರಿಯಾಗಿಸಿಕೊಂಡ ಈ ಸಮಗ್ರ ಗ್ರಾಮೀಣ ಆಶ್ರಮವು ಉಡುಪಿಯಿಂದ 20ಕಿ.ಮೀ ದೂರದ ಪೆರ್ನಾಲ್ ನಲ್ಲಿ 1987ರಲ್ಲಿ ದೇವದಾಸ್ ಶೆಟ್ಟಿ ನೇತೃತ್ವದ ನೋಂದಾಯಿತ ಸಂಸ್ಥೆಯಾಗಿ ಆರಂಭವಾಯಿತು. ಅಂದಿನಿಂದ ಆರಂಭವಾದ ಇದರ ಸೇವಾಕಾರ್ಯ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವಂತೆ ಮಾಡಿದೆ. 2007ರತನಕ ಕೊರಗರಿಗಷ್ಟೇ ಸೀಮಿತವಾಗಿದ್ದ ಈ ಆಶ್ರಮ ತದನಂತರದಲ್ಲಿ ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ನಡುವೆ ಸಮನ್ವಯದ ಕೆಲಸವನ್ನು ಮಾಡುತ್ತಿದೆ. 2008ರಲ್ಲಿ ಮೈಸೂರು, ಕೊಡಗು(ಜೇನು ಕುರುಬರು, ಬೆಟ್ಟ ಕುರುಬರು, ಸೋಲಿಗರು,ಎರವರು), ಹಾಸನ(ಹಕ್ಕಿಪಿಕ್ಕಿ), ಚಿಕ್ಕಮಗಳೂರು(ಹಸಲರರು, ಮಲೆಕುಡಿಯರು), ಶಿವಮೊಗ್ಗ(ಹಸಲರರು, ಗೊಂಡರು) ಉಡುಪಿ, ದ,ಕನ್ನಡ, ಕಾಸರಗೋಡಿ(ಕೊರಗರು)ಗೆ ತನ್ನ ಸೇವೆಯನ್ನು ವಿಸ್ತರಿಸಿ ಅಲ್ಲಿನ ಸಮುದಾಯಗಳಿಗೂ ಪ್ರೋತ್ಸಾಹ ನೀಡುತ್ತಿದೆ.

ಹೋರಾಟದ ಮೂಲಕ ಜಯಿಸಿದ್ದು ನೂರಾರು ವಿಷಯಗಳನ್ನು:
ಶಿಕ್ಷಣ, ಆರೋಗ್ಯ, ಉದ್ಯೋಗ ಭದ್ರತೆ, ಕೂಲಿ, ಭೂಮಿ, ಕೃಷಿಸಹಿತ ಬುಡಕಟ್ಟು ಜನರ ಸಮಗ್ರ ಹಕ್ಕುಗಳ ಅರಿವು ಮೂಡಿಸಲಾಗುತ್ತಿದ್ದು, ಸಾಕಷ್ಟು ಉತ್ತಮ ಫಲಿತಾಂಶಗಳನ್ನು ಗಳಿಸುತ್ತಿದೆ ಸಮಗ್ರ ಗ್ರಾಮೀಣ ಆಶ್ರಮದ ಜಾಗೃತಿ ಕಾರ್ಯಕ್ರಮಗಳು. ದ.ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ 550ಜನರಿಗೆ 600 ಎಕರೆ ಭೂಮಿಯನ್ನು `ಕೊರಗರ ಭೂಮಿ ಚಳುವಳಿ’ ಎಂಬ ಹೋರಾಟದ ಮೂಲಕ ಒದಗಿಸಿರುವುದು ಇದರ ಪ್ರಮುಖ ಕಾರ್ಯವಾಗಿದ್ದು, ಈ ಪ್ರಶಸ್ತಿ ಪಡೆಯುವಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ರಾಜ್ಯದಲ್ಲಿ ಅಜಲು ನಿಷೇಧ ಕಾಯಿದೆ ಜಾರಿಯಲ್ಲೂ ಸಮಗ್ರ ಗ್ರಾಮೀಣ ಆಶ್ರಮದ ಪಾತ್ರವಿದ್ದು, 200ಮಂದಿ ಕೊರಗರು ಪದವಿ, ಸ್ನಾತಕೋತ್ತರ ಪದವಿ ಪಡೆದಿರುವುದು ಆಶ್ರಮದ ಯಶಸ್ಸಿಗೆ ಹಿಡಿದ ಕೈಗನ್ನಡಿ. ರಾಜ್ಯದಾದ್ಯಂತ 19000 ಜನರಿಗೆ ಮನೆಕಟ್ಟಲು ಸರಕಾರದ ನೆರವನ್ನು ಒದಗಿಸಿದೆ. ಜತೆಗೆ 1000ಮಂದಿಯನ್ನು ಆರ್ಥಿಕ ಸ್ವಾವಲಂಬಿಗಳಾಗಿ ರೂಪಿಸಿರುವುದು ಈ ಸಮಗ್ರ ಗ್ರಾಮೀಣ ಆಶ್ರಮ.

ಏನಿದು ಪ್ರಶಸ್ತಿ?:
ಬುಡಕಟ್ಟು ಸಮುದಾಯಗಳ ಭೂಮಿ ಮತ್ತು ವಸತಿ ಹೊಂದಲು ನಡೆಸಿದ ಹೋರಾಟಗಳ ವಿಶೇಷ ಸಾಧನೆಗಾಗಿ ಈ ಪ್ರಶಸ್ತಿ ನೀಡಿದ್ದು, ಎರಡು ತಿಂಗಳ ಹಿಂದೆ ವಿಶ್ವಸಂಸ್ಥೆಯ ಇಬ್ಬರು ಪ್ರತಿನಿಧಿಗಳು ಸಮಗ್ರ ಗ್ರಾಮೀಣ ಆಶ್ರಮಕ್ಕೆ ಬಂದು ಅಧ್ಯಯನ ಮಾಡಿ ತೆರಳಿದ್ದರು. ಜಗತ್ತಿನ ರಾಷ್ಟ್ರಗಳಿಂದ 2000ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಸಮಗ್ರ ಗ್ರಾಮೀಣ ಆಶ್ರಮದ ಜತೆಗೆ ಸ್ಪೇನ್‍ನ ಸಂಸ್ಥೆಗೂ ಗೋಲ್ಡನ್ ಅವಾರ್ಡ್ ದೊರೆತಿದೆ.

ಪ್ರಶಸ್ತಿಯ ಪ್ರಮುಖಾಂಶಗಳು:

1.ಪ್ರಶಸ್ತಿಯು 10ಸಾವಿರ ಯುರೋ(7.93ಲ.ರೂ.) ಮತ್ತು ಟ್ರೋಫಿಯನ್ನು ಹೊಂದಿದೆ.
2.ರಾಜ್ಯಕ್ಕೆ ಮೊದಲ ಪ್ರಶಸ್ತಿ:
ಹ್ಯಾಬಿಟಾಟ್ ಪ್ರಶಸ್ತಿಯು 16ವರ್ಷಗಳ ಬಳಿಕ ಭಾರತಕ್ಕೆ ಲಭಿಸಿದ್ದು, ಕರ್ನಾಟಕಕ್ಕೆ ದೊರಕಿದ್ದು ಇದೇ ಮೊದಲ ಬಾರಿ.

`ರಾಜ್ಯದಲ್ಲಿ ಬುಡಕಟ್ಟು ಸಮುದಾಯಗಳ ಭೂಮಿ ಮತ್ತು ವಸತಿಗಾಗಿ ನಡೆಸಿದ ವಿಶೇಷ ಸಾಧನೆಗಾಗಿ ಜಗತ್ತಿನಾದ್ಯಂತದ ಸಂಸ್ಥೆಗಳ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಪಡೆದುಕೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಪ್ರಶಸ್ತಿಯಿಂದ ಗಳಿಸಿದ ಹಣವನ್ನು ಸಮುದಾಯದ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಕೊಳ್ಳಲಾಗುತ್ತದೆ’ ಎನ್ನುತ್ತಾರೆ ಸಮಗ್ರ ಗ್ರಾಮೀಣ ಆಶ್ರಮದ ಆಡಳಿತ ನಿರ್ದೇಶಕರಾದ ಅಶೋಕ್ ಶೆಟ್ಟಿ.

ಇಷ್ಟು ವರ್ಷದ ಹೋರಾಟಕ್ಕೆ ಪ್ರತಿಫಲ ನೀಡಿದೆ ಈ ಪ್ರಶಸ್ತಿ. ನಮ್ಮ ಸಂಸ್ಥೆಯ ಕಾರ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಪ್ರಶಸ್ತಿ ನೀಡಿರುವುದು ನಮಗೆಲ್ಲಾ ಸಂತಸದ ವಿಷಯವಾಗಿದೆ. ಆದರೆ ಸರ್ಕಾರವು ನಮ್ಮಂತಹ ಬುಡಕಟ್ಟು ಸಮುದಾಯಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ಗಮನ ಹರಿಸಬೇಕು. ಇದರ ಜತೆಗೆ ಮೊದಲ ಬಾರಿ ವಿದೇಶ ಪ್ರಯಾಣ ಮಾಡಿರುವುದು ಖುಷಿಯನ್ನು ಉಂಟುಮಾಡಿದೆ.

ಶಕುಂತಲಾ ಕೊರಗ ನೇಜಾರು, ಅಧ್ಯಕ್ಷರು, ಸಮಗ್ರ ಗ್ರಾಮೀಣ ಆಶ್ರಮ

ವಿದೇಶ ಪ್ರಯಾಣ ಮಾಡಿದ ಮೊದಲ ಕೊರಗ ಮಹಿಳೆ:
ಪ್ರಶಸ್ತಿ ಸ್ವೀಕರಿಸಲು ವಿದೇಶ ಪ್ರವಾಸ ಕೈಗೊಂಡಿರುವ ಶಕುಂತಲಾ ಕೊರಗ ನೇಜಾರು ಅವರು ವಿದೇಶಕ್ಕೆ ತೆರಳಿರುವ ಮೊದಲ ಕೊರಗ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2019, ಅಗಸ್ಟ್ ನಿಂದ ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷರಾದ ಶಕುಂತಲಾ ಅವರು 7ನೇ ತರಗತಿ ಉತ್ತೀರ್ಣರಾಗಿದ್ದು, ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಆಟೋ ಚಲಾಯಿಸುತ್ತಿರುವ ಪತಿ ಸಂಜೀವ ಜತೆ ಕೊರಗರ ಸಹಿತ ಬುಡಕಟ್ಟು ಜನರ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದಾರೆ.

ಶ್ರೀರಕ್ಷಾ ಶಿರ್ಲಾಲ್

LEAVE A REPLY

Please enter your comment!
Please enter your name here