ಉಡುಪಿ – ಮುಂಬೈ ನಂಟು ಅಂತಿಂತದ್ದಲ್ಲ

0
201
Tap to know MORE!

ಕೋರೋನಾ ಮಹಾಮಾರಿ ಭಾರತದ ಮೂಲೆಮೂಲೆಗೂ ತಲುಪುತ್ತಿದೆ. ದೇಶದಲ್ಲಿ ಜಾರಿಯಲ್ಲಿದ್ದ ಲಾಕ್ಡೌನ್ ನ ಎರಡು ಹಂತಗಳ ಬಳಿಕ ದೇಶದ ಜಿಲ್ಲೆಗಳನ್ನು ಮೂರು ವಲಯಗಳಲ್ಲಿ ವಿಭಜಿಸಲಾಗಿತ್ತು. ಪ್ರತಿ ದಿನ ಸೋಂಕು ಕಾಣಿಸಿಕೊಳ್ಳುತ್ತಿರುವ ಜಿಲ್ಲೆಗಳನ್ನು ಕೆಂಪು ವಲಯಗಳಾಗಿ; ಸತತವಾಗಿ ಅಲ್ಲದಿದ್ದರೂ, ಸೋಂಕಿತರು ಇರುವಂತಹ ಇತರ ಜಿಲ್ಲೆಗಳನ್ನು ಹಳದಿ ಮತ್ತು ಕಿತ್ತಳೆ ವಲಯಗಳಾಗಿ ಹಾಗೂ ಸುಮಾರು ಒಂದು ತಿಂಗಳು ಸೋಂಕನ್ನೇ ಕಾಣಿಸಿಕೊಳ್ಳದ ಜಿಲ್ಲೆಗಳನ್ನು ಹಸಿರು ವಲಯಗಳಾಗಿ ವಿಭಜಿಸಲಾಗಿತ್ತು. ಹಾಗಾಗಿ ಲಾಕ್ಡೌನ್ ಸಡಿಲಗೊಂಡ ಬೆನ್ನಲ್ಲೇ ಹಸಿರು ಜಿಲ್ಲೆಗಳಲ್ಲಿ ಹಂತಹಂತವಾಗಿ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡವು. “ನಾವು ಸೇಫ್” ಎಂದು ಬೀಗತೊಡಗಿದರು. ಎಲ್ಲವೂ ಹತೋಟಿಯಲ್ಲಿದೆ ಎಂದುಕೊಂಡ ಸರ್ಕಾರ, ಬಸ್ಸು-ರೈಲುಗಳನ್ನು ಪ್ರಾರಂಭಿಸಿತು. ಅಂತರ್ ಜಿಲ್ಲೆ, ಅಂತರ್ರಾಜ್ಯ ಓಡಾಟಗಳು ಪ್ರಾರಂಭವಾದವು. ಹಲವು ಟೀಕಾಕಾರರು, ವ್ಯಂಗ್ಯ ಚಿತ್ರಕಾರರು, ಮಾಧ್ಯಮದವರು ಇದನ್ನು “ಕೊರೋನಾ ಎಕ್ಸ್ ಪ್ರೆಸ್” ಎಂದರು. ಅವರು ಹೇಳಿದ್ದೇನೂ ಸುಳ್ಳಾಗಲಿಲ್ಲ. ಕೊರೋನಾ ಎಂಬ ಮಾರಿ ದೇಶವನ್ನು ಇನ್ನಷ್ಟು ಆವರಿಸಿತು. ವಲಯಗಳಿಗೆ ಅರ್ಥವೇ ಇಲ್ಲದಂತಾಯಿತು. ಹಸಿರು ವರಯದಲ್ಲಿದ್ದ ಜಿಲ್ಲೆಗಳಲ್ಲೂ ಭಾರೀ ಪ್ರಮಾಣದ ಸೋಂಕಿತರು ಕಾಣಿಸಿಕೊಂಡರು. ಅಂತಹ ಜಿಲ್ಲೆಗಳಲ್ಲಿ ಒಂದು ಕರ್ನಾಟಕದ ಉಡುಪಿ ಜಿಲ್ಲೆ!
ಮಾರ್ಚ್ ಅಂತ್ಯದವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಕೇವಲ ಮೂರೇ ಮೂರು ಸೋಂಕಿತರು ಇದ್ದರು. ಬಳಿಕ ಸುಮಾರು ಒಂದು ತಿಂಗಳುಗಳ ಕಾಲ ಯಾರಲ್ಲೂ ಸೋಂಕು ಕಾಣಿಸಿಕೊಳ್ಳದ ಕಾರಣ ಜಿಲ್ಲೆಯನ್ನು ಹಸಿರು ವಲಯದಲ್ಲಿ ಸೇರಿಸಲಾಯಿತು. ಮೇ ತಿಂಗಳ ಪ್ರಾರಂಭದಲ್ಲೂ ಉಡುಪಿ ಸೇಫ್ ಆಗಿಯೇ ಇತ್ತು. ಆದರೆ ಯಾವಾಗ ದುಬೈನಿಂದ ವಿಮಾನಗಳು ಮತ್ತು ಮುಂಬೈನಿಂದ ರೈಲುಗಳು ಜಿಲ್ಲೆಗೆ ಬರಲಾರಂಭಿಸಿದವೋ, ಜಿಲ್ಲೆಯ ಚಿತ್ರಣವೇ ಬದಲಾಗತೊಡಗಿತು. ಮೊದಲು ದುಬೈನಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿತು. ಅಷ್ಟೇನು ದೊಡ್ಡ ಪ್ರಮಾಣದಲ್ಲಿರಲಿಲ್ಲ. ಆದರೆ ಮುಂಬೈನಿಂದ ಮರಳಿದ ಕರಾವಳಿಗರು ಜಿಲ್ಲೆಗೇ ಕಂಟಕರಾದರು. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಎಷ್ಟರ ಮಟ್ಟಿಗೆ ಎಂದರೆ, ರಾಜ್ಯದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ೧೭ನೇ ಸ್ಥಾನದಲ್ಲಿದ್ದ ಜಿಲ್ಲೆ, ಒಂದೆರಡು ವಾರಗಳಲ್ಲೇ ರಾಜ್ಯಕ್ಕೇ ನಂ.೧ ಸ್ಥಾನಕ್ಕೆ ಜಿಗಿಯಿತು! ಸುಮಾರು ಒಂದು ಕೋಟಿಯಷ್ಟು ಜನಸಂಖ್ಯೆ ಇರುವ ಬೆಂಗಳೂರಿನ್ನೂ ಹಿಂದಿಕ್ಕಿತ್ತು ‘ನಮ್ಮ ಉಡುಪಿ’ .
ಶಿಕ್ಷಣ, ಆಡಳಿತ, ವೈದ್ಯಕೀಯ, ಬ್ಯಾಂಕಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಉಡುಪಿ, ಇದೀಗ ಕೊರೋನಾ ಸೋಂಕಿತರ ಪಟ್ಟಿಯಲ್ಲೂ ಹಿಂದೆ ಬೀಳಲಿಲ್ಲ. ಆದರೆ ಇದಕ್ಕೆ ಉಡುಪಿಯೇ ನೇರ ಹೊಣೆಯಲ್ಲ ಎಂಬುವುದನ್ನು ನಾವು ಗಮನದಲ್ಲಿಡಬೇಕು. ಏಕೆಂದರೆ ಶೇ.೯೫% ರಷ್ಟು ಸೋಂಕಿತರು ಮಹಾರಾಷ್ಟ್ರದಿಂದ ಮರಳಿದವರು ಎಂಬುವುದನ್ನು ನಾವು ಅಲ್ಲಗೆಳೆಯುವಂತಿಲ್ಲ. ದೇಶದಲ್ಲೇ ಅತೀ ಹೆಚ್ಚು ಸೋಂಕು ತಗುಲಿರುವ ರಾಜ್ಯ ಮಹಾರಾಷ್ಟ್ರ. ಅದರಲ್ಲಿ ಬಹುಪಾಲು ಮುಂಬೈನದ್ದೇ! ಹಾಗಾಗಿ ಆ ಭೀತಿಯಿಂದ, ಸೋಂಕಿನಿಂದ ತಪ್ಪಿಸಲು ವಲಸಿಗರು, ಉದ್ಯಮಿಗಳೆಲ್ಲರೂ ಮರಳಿ ಗೂಡಿಗೆ ಬರುತ್ತಿದ್ದಾರೆ. ಅದುವೇ ಈಗ ಉಡುಪಿಗೂ ಶಾಪವಾಗಿದೆ. ಉಡುಪಿ ಮಾತ್ರವಲ್ಲದೆ ದಕ್ಷಿಣ ಕನ್ನಡಕ್ಕೂ ಮುಂಬೈಗೂ ಅವಿನಾಭಾವ ನಂಟು. ಈ ಅವಳಿ ಜಿಲ್ಲೆಯ ಹಲವರು ಉದ್ಯೋಗವನ್ನಾರಿಸಿ, ಮುಂಬೈಗೆ ವಲಸೆ ಹೋಗಿದ್ದರು. ಅಲ್ಲಿಯೇ ಖ್ಯಾತಿಯನ್ನೂ ಪಡೆದರೂ ಸಹ! ನೋಡ ಹೊರಟರೆ, ಈಗಲೂ ಬಾಲಿವುಡ್ ನಲ್ಲಿ ಮತ್ತು ಉದ್ಯಮರಂಗದಲ್ಲಿ ಈ ಪ್ರದೇಶದ ಹಲವರು ಮುಂಬೈನಲ್ಲಿ ಮಿಂಚು ಹರಿಸುತ್ತಿದ್ದಾರೆ.

ತುಳುನಾಡಿನ ಬಹುಪಾಲು ಜನರು ಕೃಷಿ ಮತ್ತು ಸಣ್ಣ ವ್ಯವಹಾರದಲ್ಲಿ ತೊಡಗಿದ್ದರು. ಇಂದಿರಾ ಗಾಂಧಿಯವರ ಭೂ ಸುಧಾರಣೆಗಳು ಅಲ್ಲಿನ ಚಿತ್ರಣವನ್ನೇ ಬದಲಾಯಿಸಿದವು. ಜನರು ಸ್ವಯಂಪ್ರೇರಣೆಯಿಂದ ತಮ್ಮ ಹೆಚ್ಚುವರಿ ಜಮೀನುಗಳನ್ನು ಬಿಟ್ಟುಕೊಟ್ಟರು. ಹೀಗಾದಾಗ ಅವರು ತಮ್ಮ ಅಲ್ಪ ಆದಾಯದೊಂದಿಗೆ ದೊಡ್ಡ ಕುಟುಂಬಗಳಿಗೆ ಆಹಾರವನ್ನು ನೀಡಲು ಕಷ್ಟವಾಯಿತು. ಆಗ ಕರ್ನಾಟಕದ ರಾಜಧಾನಿ ಬೆಂಗಳೂರು ಕೇವಲ ಕೆಲವು ದೊಡ್ಡ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಹೊಂದಿದ್ದ ಸಣ್ಣ ಪಟ್ಟಣವಾಗಿತ್ತು. ಹಾಗಾಗಿ ತುಳುನಾಡಿನ ಜನತೆಗೆ ಮುಂಬೈ ಒಂದು ತಾರ್ಕಿಕ ತಾಣವಾಗಿತ್ತು. ಆದ್ದರಿಂದ ಅವರು ಉದ್ಯೋಗ ಹುಡುಕಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈಗೆ ವಲಸೆ ಹೋದರು. ಆರಂಭದಲ್ಲಿ, ಜಿಎಸ್‌ಬಿ ಸಮುದಾಯದವರು ನಗರದಲ್ಲಿ ಸಣ್ಣ ಪುಟ್ಟ ಹೊಟೇಲುಗಳನ್ನು ಸ್ಥಾಪಿಸಿದರು ಮತ್ತು ಪ್ರಸಿದ್ಧ ಉಡುಪಿ ಪಾಕಪದ್ಧತಿಯನ್ನು ಅಲ್ಲಿ ಪರಿಚಯಿಸಿದರು. ನಂತರ, ಇತರ ಸಮುದಾಯಗಳಾದ ಬಂಟರು ಮತ್ತು ಬಿಲ್ಲವರು ಮಂಗಳೂರಿನ ಪಾಕಪದ್ಧತಿಯನ್ನು, ವಿಶೇಷವಾಗಿ ಮಾಂಸಾಹಾರದ ಹೊಟೇಲುಗಳನ್ನು ಪರಿಚಯಿಸಿದರು.ಹೊಟೇಲುಗಳು ಪ್ರಸಿದ್ಧಿಯನ್ನು ಪಡೆಯುತ್ತಿದ್ದಂತೆ, ಮಂಗಳೂರು(ಉಡುಪಿಯೂ ಸೇರಿದಂತೆ) ಮತ್ತು ಮುಂಬೈ ನಡುವಿನ ಸಂಬಂಧವು ಬೆಳೆಯಿತು. ಮುಂದುವರೆದಂತೆ, ತುಳುವರು ರಿಯಲ್ ಎಸ್ಟೇಟ್, ಸಿನೆಮಾ, ನಾಟಕರಂಗ, ಭೂಗತ ಲೋಕ ಮತ್ತು ರಾಜಕೀಯಕ್ಕೂ ಸಹ ಕಾಲಿಟ್ಟರು. ಯಾವಾಗ ಬೆಂಗಳೂರು ಪ್ರಧಾನ ಐಟಿ ಕೇಂದ್ರವಾಗಿ ಹೊರಹೊಮ್ಮಿತೋ, ಮಂಗಳೂರಿನ ವಿದ್ಯಾವಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ವಲಸೆ ಹೋಗಲು ಪ್ರಾರಂಭಿಸಿತು. ಆದರೂ ಮುಂಬೈಯೊಂದಿಗಿನ ಮಂಗಳೂರಿನ ನಿಕಟತೆ ಇನ್ನೂ ಮುಂದುವರೆದಿದೆ ಮತ್ತು ಮತ್ತಷ್ಟು ಬಲಗೊಳ್ಳುತ್ತಿದೆ.

ಬಾಂಬೆಯಲ್ಲಿ ೧೯೨೭ರಲ್ಲೇ ಸ್ಥಾಪನೆಗೊಂಡಿತ್ತು “ಬಂಟರ ಸಂಘ” !
ಬಂಟ ಸಮುದಾಯದವರಿಂದ, ಬಂಟ ಸಮುದಾಯದವರಿಗೆ ಸಮುದಾಯದ ಜನರಿಗೆ ಸ್ಥಾಪನೆಗೊಂಡ ಸಂಘವೇ “ಬಂಟ್ಸ್ ಸಂಘ”. ಈ ಸಂಘದ ಮುಖ್ಯ ಧ್ಯೇಯವೆಂದರೆ ಅವರ ಜನರಿಗೆ ಸಹಾಯ ಮಾಡುವುದು ಮತ್ತು ಅವರ ಸಮುದಾಯವನ್ನು ಅಭಿವೃದ್ಧಿಪಡಿಸುವುದು. ೧೯೨೭ ರಲ್ಲಿ ಸ್ಥಾಪನೆಯಾದ ಬಂಟ್ಸ್ ಸಂಘ ಮುಂಬೈ, ತಮ್ಮ ಜನರನ್ನು ಒಗ್ಗೂಡಿಸಲು ಮತ್ತು ಪ್ರೋತ್ಸಾಹಿಸಲು ಕಾರ್ಯನಿರ್ವಹಿಸುತ್ತಿದೆ.
ಅದಲ್ಲದೇ, ಮಹಾರಾಷ್ಟçದ ಪುಣೆಯಲ್ಲಿ ಬಿಲ್ಲವ ಸಂಘವೂ ಸ್ಥಾಪನೆಗೊಂಡಿದೆ.

೨೦೦೮ರಲ್ಲಿ ಮುಂಬೈಯಲ್ಲಿ “ತುಳುನಾಡ ಹಬ್ಬವನ್ನು” ವಿಶಿಷ್ಟವಾಗಿ ಆಚರಿಸಲಾಗಿತ್ತು.

ಮುಂಬೈ ನಗರದ ದೊಂಬಿವ್ಲಿಯಲ್ಲಿ ೨೦೦೮ರಲ್ಲಿ ನಡೆದ ತುಳುನಾಡಿನ ಒಂದು ವಿಶಿಷ್ಟ ಮತ್ತು ಭವ್ಯವಾದ ಆಚರಣೆಯು, ಅದರಲ್ಲಿ ಭಾಗವಹಿಸಿದದವರಲ್ಲಿ ತುಳು ಸಂಸ್ಕೃತಿಯ ನೆನಪುಗಳನ್ನು ತಂದಿತು. ತುಳುನಾಡ ಗೊಬ್ಬುಲು, ಅಷ್ಟೆಮಿ ಆಚರಣೆ ಮತ್ತು ಇತರ ಚಟುವಟಿಕೆಗಳು ಜನರ ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಉಳಿಯುವಂತೆ ಮಾಡಿತು. ಈ ಆಚರಣೆಯು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಥೋನ್ಸ್ ವಿಜಯ್‌ಕುಮಾರ್ ಶೆಟ್ಟಿಯವರ ಮೆದುಳಿನ ಕೂಸು ಆಗಿತ್ತು. ಹಾಗಾಗಿ ಅವರ ನೇತೃತ್ವದಲ್ಲೇ ದೊಂಬಿವ್ಲಿಯಲ್ಲಿ ತುಳುಕೂಟ ನಡೆಸಲಾಗಿತ್ತು.
ದವ್ದಿ ಗ್ರಾಮದ ದೊಂಬಿವ್ಲಿ ರೈಲ್ವೆ ನಿಲ್ದಾಣದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ವಿಶಾಲವಾದ ಮೈದಾನವನ್ನು ಸುಮಾರು ೩೦ ತುಳುವರು ಸೇರಿ ಹತ್ತು ದಿನಗಳ ಕಠಿಣ ಪರಿಶ್ರಮದಿಂದ ಸುಂದರವಾದ ತುಳುನಾಡಾಗಿ ಪರಿವರ್ತಿಸಿದರು ಮತ್ತು ಅದರ ಒಂದು ಎಕರೆ ಪ್ರದೇಶವು ಕಂಬಳ ಓಟಕ್ಕೆ ಸಿದ್ಧವಾಯಿತು. ಹೇಮಂತ್ ಶೆಟ್ಟಿ ನೇತೃತ್ವದ ತುಳುಕೂಟ ಸದಸ್ಯರು ೨೦೦೮ ರಲ್ಲಿ ಪ್ಯಾರೆಲ್ ಕಾಮಗರ್ ಕ್ರೀಡಾಂಗಣದಲ್ಲಿ ಆಚರಿಸಿದ “ಬೊಂಬಾಯಿಡ್ ತುಳುನಾಡು” ನೆನಪಿಗೆ ಕಂಬಳ ಕ್ಷೇತ್ರ, ಕಾಂತಬರೆ ಬೂದುಬಾರೆ ಮಂಜೊಟ್ಟು, ತುಳು ಚಾವಡಿ, ಅಂಕಾರ ಕಲಾ, ಪಂತೊದ ಜಾಲ ಮತ್ತು ಪರ್ಬದ ದೊಂಪಗಳನ್ನು ಸಿದ್ಧಪಡಿಸಿದ್ದರು.

ಜನವರಿ ೨೦೨೦ರಲ್ಲಿ ನಡೆದಿತ್ತು ವಿಶ್ವ ತುಳು ಸಮ್ಮೇಳನ!
ಮುಂಬೈನ ಕಲಾಜಗತ್ತು ತಂಡವು, ಎರಡು ದಿನಗಳ ಸುದೀರ್ಘ ಜಾಗತಿಕ ತುಳು ಸಮಾವೇಶವನ್ನು ಹಮ್ಮಿಕೊಂಡಿದ್ದರು. ಹಿರಿಯ ಲೇಖಕಿ ಡಾ.ಸುನೀತಾ ಎಂ.ಶೆಟ್ಟಿ ಅವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ಲೋಬಲ್ ಬಂಟ್ಸ್ ಫೆಡರೇಶನ್ ಅಧ್ಯಕ್ಷ, ಐಕಳ ಹರೀಶ್ ಶೆಟ್ಟಿ ಅವರು ತುಳು ರಥವನ್ನು ಎಳೆದರು. ಬಂಟ್ಸ್ ಸಂಘ ಮುಂಬೈಯ ಅಧ್ಯಕ್ಷರಾಗಿರುವ ಪದ್ಮನಾಭ ಎಸ್ ಪೈಯ್ಯಡೆ ಸಾಂಕೇತಿಕವಾಗಿ ಸಮ್ಮೇಳನವನ್ನು ಪ್ರಾರಂಭಿಸಿದರು. ಹಲವಾರು ತುಳು ಕವಿಗಳು ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಗೆದ್ದವು.

ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷವಾಗಿರುವ “ಶಿವಸೇನೆ”ಯ ಸ್ಥಾಪನೆಗೂ ಈ ತುಳುವರೇ ಕಾರಣವಂತೆ!
ಶಿವಸೇನೆ ಪಕ್ಷವು ಇಂದು ಮಹಾರಾಷ್ಟçದಲ್ಲಿ ಸರಕಾರವನ್ನು ನಡೆಸುತ್ತಿದೆ. ಹಿಂದುತ್ವ ಸಿದ್ಧಾಂತವನ್ನು ಪಾಲಿಸುವ ಪಕ್ಷ ಎಂದು ನಾವು ನಂಬಿದ್ದರೂ, ಆ ಪಕ್ಷವು ಸ್ಥಾಪನೆಗೊಂಡಿದ್ದು ಇಡೀ ಮರಾಠಿ ಭಾಷಿಗರ ಪರ ಎಂಬುವುದು ಉಲ್ಲೇಖನೀಯ! ೧೯೬೬ರಲ್ಲಿ ಒಬ್ಬ ವ್ಯಂಗ್ಯಚಿತ್ರಕಾರ ಬಾಳ ಠಾಕ್ರೆಯವರ ನೇತೃತ್ವದಲ್ಲಿ ಜನ್ಮ ತಾಳಿತು. ನಿರುದ್ಯೋಗಿ ಮರಾಠಿಗರನ್ನು ಒಟ್ಟು ಸೇರಿಸಿ, ಮುಂಬೈ ಹಾಗೂ ಪುಣೆ ಪ್ರದೇಶದಲ್ಲಿ ನೆಲೆಸಿರುವ ವಲಸಿಗರ ವಿರುದ್ಧ ದನಿ ಎತ್ತಲಾರಂಭಿಸಿದರು. ವಲಸಿಗರಿಂದಾಗಿ ಮೂಲ ಮರಾಠಿಗರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬುವುದು ಠಾಕ್ರೆಯವರ ವಾದ! ಆ ವಲಸಿಗರಲ್ಲಿ ತಮಿಳರೂ ಇದ್ದರೂ, ಬಹುಪಾಲು ತುಳುವರದ್ದೇ ಇತ್ತು. ಹೊಟೇಲು ಉದ್ಯಮದಿಂದ ಹಿಡಿದು, ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲೂ ಇವರ ಪ್ರಭಾವ ಭಾರಿ ಪ್ರಮಾಣದಲ್ಲಿತ್ತು!

ತುಳುನಾಡಿನಿಂದ ಸುಮಾರು ೮೦೦-೯೦೦ ಕಿ.ಮೀ ದೂರದಲ್ಲಿರುವ ಮುಂಬೈ ನಗರದಲ್ಲಿ, ತುಳುನಾಡಿನ ಜನರಿಗೆ ಸಂಬಧಿಕರಿದ್ದಾರೆ. ಈ ಹಿಂದೆ ಜನರು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.. ನನ್ನ ಮಗ ಸಂಬಂಧಿಕರು ಮುಂಬೈಯಲ್ಲಿರೋದು ಎಂದು! ಅವರು ಅಲ್ಲಿಂದ ಮನೆಗೆ ಬರುವಾಗ ಏನಾದರೂ ತಿಂಡಿ-ತಿನಿಸುಗಳನ್ನೋ, ಉಡುಗೆ-ತೊಡುಗೆಗಳನ್ನೋ ತರುತ್ತಿದ್ದಾಗ ಭಾರಿ ಖುಷಿಯೂ ಆಗುತ್ತಿತ್ತು. ಆದರೆ ಈಗ ಕೊರೋನಾ ಸಾಂಕ್ರಾಮಿಕವು ಮುಂಬೈಯಲ್ಲಿಯೇ ಮಹಾ ಸ್ಫೋಟಗೊಂಡಿರುವುದರಿಂದ, ಮುಂಬೈಯಿಂದ ಮರಳುವುದೇ ಬೇಡ ಎನ್ನುತ್ತಿದ್ದಾರೆ ಅದೇ ಜನ. ಬೊಂಬಾಯಿ ಅಳಿಯನ ಆಸೆಯಲ್ಲಿರುವ ಅದೆಷ್ಟೋ ಅತ್ತೆಯಂದಿರು ಬಾಯಿ ಬಾಯಿ ಬಡಿದುಕೊಂಡು ಬಾಂಬೆ ಪೀಸನ್ನು ನಿರಾಕರಿಸುವ ಕಾಲ ಸನ್ನಿಹಿತದಲ್ಲಿದೆ.

LEAVE A REPLY

Please enter your comment!
Please enter your name here