“ನಮ್ಮ ದೇಶದಲ್ಲಿ ಇದುವರೆಗೆ ಯಾರಲ್ಲೂ ಕೋವಿಡ್ ಸೋಂಕು ದೃಢಪಟ್ಟಿಲ್ಲ” : ಉತ್ತರ ಕೊರಿಯಾ ಸರ್ವಾಧಿಕಾರಿ

0
148
Tap to know MORE!

ಇಡೀ ವಿಶ್ವ ಕೊರೋನಾ ವೈರಸ್ ನಿಂದ ತತ್ತರಿಸುತ್ತಿದ್ದರೆ ಉತ್ತರ ಕೊರಿಯಾ ಮಾತ್ರ ಇದುವರೆಗೆ ಕೊರೋನಾ ಸೋಂಕಿನಿಂದ ಮುಕ್ತವಾಗಿದೆ. ಸಾಂಕ್ರಾಮಿಕದ ಸಂಕಷ್ಟದ ಸಂದರ್ಭದಲ್ಲಿ ದೇಶದ ನಾಗರಿಕರು ಉತ್ತಮ ಆರೋಗ್ಯ ಕಾಳಜಿ ಕಾಪಾಡಿಕೊಂಡಿರುವುದಕ್ಕೆ ಧನ್ಯವಾದ ಹೇಳಲು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ನಿನ್ನೆ ಮಿಲಿಟರಿ ಪರೇಡ್ ನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದರು.

ಉತ್ತರ ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ 75ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿದ್ದು ಈ ಸಂದರ್ಭದಲ್ಲಿ ರಾಷ್ಟ್ರದ ವಾಹಿನಿಯನ್ನುದ್ದೇಶಿಸಿ ಮಾತನಾಡಿದ ಕಿಮ್ ಜಾಂಗ್ ಉನ್, ಕೊರೋನಾ ಸೋಂಕಿಗೆ ತುತ್ತಾಗದೆ ಜನರು ಉತ್ತಮ ಆರೋಗ್ಯ ಕಾಪಾಡಿಕೊಂಡಿರುವುದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಸೋಂಕಿಗೆ ಯಾವ ನಾಗರಿಕರೂ ತುತ್ತಾಗದಿರುವಂತೆ ನೋಡಿಕೊಳ್ಳುವುದು ನಮ್ಮ ಸಹಜ ಕರ್ತವ್ಯವಾಗಿದ್ದು ನಮ್ಮ ಪಕ್ಷದ ಯಶಸ್ಸನ್ನು ಸಹ ಇದು ತೋರಿಸುತ್ತದೆ. ಈ ಯಶಸ್ಸು ನನಗೆ ತೀವ್ರ ಸಂತಸ ತಂದಿದೆ ಎಂದು ಹೇಳಿದರು.

ನಮ್ಮ ಪಕ್ಷಕ್ಕೆ ಪ್ರತಿಯೊಬ್ಬ ನಾಗರಿಕರ ಜೀವ ಬೇರೆಲ್ಲಕ್ಕಿಂತಲೂ ಮುಖ್ಯ. ನಾಗರಿಕರ ಆರೋಗ್ಯ ನಮ್ಮ ಪಕ್ಷದ ಇರುವಿಕೆಗೆ ಸಹ ಮುಖ್ಯವಾಗಿದೆ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ.

ನೆರೆಯ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕೊರೋನಾ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡು ಇಡೀ ವಿಶ್ವಕ್ಕೆ ಹರಡಿದರೂ ಕೂಡ ಉತ್ತರ ಕೊರಿಯಾಕ್ಕೆ ಮಾತ್ರ ಇದುವರೆಗೆ ಅದರ ಬಿಸಿ ತಟ್ಟಿಲ್ಲ.

ವರ್ಕರ್ಸ್ ಪಾರ್ಟಿಯ 75ನೇ ಸ್ಥಾಪನಾ ವರ್ಷಾಚರಣೆ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕಿಮ್ ಜಾಂಗ್ ಉನ್ ಗೆ ಶುಭಾಶಯ ತಿಳಿಸಿದ್ದಾರೆ. ವರ್ಕರ್ಸ್ ಪಾರ್ಟಿಯ ನಾಯಕತ್ವ ಮತ್ತು ಸಾಧನೆ ಅತ್ಯಂತ ಪ್ರಶಂಸನೀಯ. ಕಳೆದ 100 ವರ್ಷಗಳಲ್ಲಿಯೇ ವಿಶ್ವಾದ್ಯಂತ ಕಂಡುಕೇಳರಿಯದ ತೊಂದರೆ, ಅಪಾಯದಲ್ಲಿ ಇಡೀ ವಿಶ್ವ ಸಿಲುಕಿದ್ದು ಕೋವಿಡ್-19 ವ್ಯಾಪಕವಾಗಿ ಹರಡುತ್ತಿದೆ. ಅಂತಹುದರಲ್ಲಿ ಉತ್ತರ ಕೊರಿಯಾ ಮಾತ್ರ ಸಮಸ್ಯೆಗೆ ಸಿಲುಕದಿರುವುದು ಪ್ರಶಂಸನೀಯ ಸಂಗತಿ ಎಂದು ಜಿನ್ ಪಿಂಗ್ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here