ನವದೆಹಲಿ: ಶತಕೋಟ್ಯಾಧಿಪತಿ ಉದ್ಯಮಿ ಎಲಾನ್ ಮಸ್ಕ್ ಈ ವರ್ಷ ತಮ್ಮ ಸಂಪತ್ತಿಗೆ $100 ಶತಕೋಟಿಗೂ ಅಧಿಕ ಮೌಲ್ಯವನ್ನು ಸೇರಿಸಿದ್ದಾರೆ. ಇದರಿಂದಾಗಿ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ, ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ.
ಟೆಸ್ಲಾ ಇಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮಸ್ಕ್ (49) ಅವರ ನಿವ್ವಳ ಮೌಲ್ಯವು $ 7.2 ಬಿಲಿಯನ್ ನಿಂದ $127.9 ಬಿಲಿಯನ್ ಗೆ ಏರಿದೆ. ಬಿಲ್ ಗೇಟ್ಸ್ ಅವರ ಮೌಲ್ಯವು $127.7 ಬಿಲಿಯನ್ ಆಗಿದೆ. ಅದಲ್ಲದೆ, ಟೆಸ್ಲಾ ಷೇರು ಬೆಲೆಯಲ್ಲಿ 7 ಶೇಕಡಾ ಏರಿಕೆಯಾಗಿದೆ.
ಇದನ್ನೂ ಓದಿ: NETFLIX ಸ್ಟ್ರೀಮ್ ಫೆಸ್ಟ್ | ಕಂಟೆಂಟ್ಗಳನ್ನು ಉಚಿತವಾಗಿ ವೀಕ್ಷಿಸಿ!
ನಿಖರವಾಗಿ ಹೇಳುವುದಾದರೆ, 2020ರ ಜನವರಿಯಲ್ಲಿ ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ವಿಶ್ವದ 500 ಶ್ರೀಮಂತರ ಪೈಕಿ 35ನೇ ಸ್ಥಾನದಲ್ಲಿದ್ದ ಮಸ್ಕ್, ಕೇವಲ 10 ತಿಂಗಳಲ್ಲಿ 2 ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಪ್ರಸ್ತುತ $182 ಬಿಲಿಯನ್ ಮೌಲ್ಯದ ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇವರ ಹಿಂದೆ, ಎಲಾನ್ ಮಸ್ಕ್, ಬಿಲ್ ಗೇಟ್ಸ್, ಬರ್ನಾರ್ಡ್ ಅರ್ನಾಲ್ಟ್ ಮತ್ತು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಇದ್ದು, ಬ್ಲೂಮ್ಬರ್ಗ್ ಬಿಲಿಯನೇರ್ಗಳ ಪಟ್ಟಿಯಲ್ಲಿರುವ ವಿಶ್ವದ ಐದು ಶ್ರೀಮಂತರಾಗಿದ್ದಾರೆ.
ಜಪಾನ್ನ ಟೊಯೋಟಾ ಮೋಟಾರ್ ಮತ್ತು ಜನರಲ್ ಮೋಟಾರ್ಸ್ನಂತಹ ಪ್ರತಿಸ್ಪರ್ಧಿಗಳ ಹೊರತಾಗಿಯೂ, 2020 ರಲ್ಲಿ ಟೆಸ್ಲಾ ಷೇರುಗಳ ಬೆಲೆಗಳು ಶೇಕಡಾ 500 ರಷ್ಟು ಏರಿಕೆಯಾಗಿರುವುದು ಉಲ್ಲೇಖನೀಯ. ಎಲೆಕ್ಟ್ರಿಕ್ ವಾಹನಗಳ ಭವಿಷ್ಯದ ಬಗ್ಗೆ ಹೂಡಿಕೆದಾರರು ಹೆಚ್ಚು ವಿಶ್ವಾಸ ಹೊಂದಲು ಪ್ರಾರಂಭಿಸಿರುವುದರಿಂದ ಷೇರು ಬೆಲೆಗಳು ಗಗನಕ್ಕೇರಿವೆ ಎಂದು ಅನೇಕ ಮಾರುಕಟ್ಟೆ ತಜ್ಞರು ಹೇಳುತ್ತಾರೆ.