ಬಾಲಿವುಡ್ ಗಾಯಕ-ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ವಿರುದ್ಧ ಆದಾಯ ತೆರಿಗೆ ಇಲಾಖೆಯು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದ್ರಾಸ್ ಹೈಕೋರ್ಟ್ ಅವರಿಗೆ ನೋಟಿಸ್ ನೀಡಿದೆ. ತೆರಿಗೆಯಿಂದ ತಪ್ಪಿಸಲು, ರೆಹಮಾನ್ ಅವರು ತಮ್ಮ ಚಾರಿಟಬಲ್ ಟ್ರಸ್ಟ್ – ಎ.ಆರ್. ರೆಹಮಾನ್ ಫೌಂಡೇಶನ್ ಗೆ ₹3 ಕೋಟಿಯನ್ನು ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆದಾಯ ತೆರಿಗೆ ವಿಭಾಗದ ಹಿರಿಯ ಸ್ಥಾಯಿ ಸಲಹೆಗಾರ ಟಿ ಆರ್ ಸೆಂಥಿಲ್ ಕುಮಾರ್ ಅವರ ಪ್ರಕಾರ, ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್, ಯುಕೆ ಮೂಲದ ಟೆಲಿಕಾಂ ಕಂಪನಿಯೊಂದಕ್ಕೆ ವಿಶೇಷ ರಿಂಗ್ಟೋನ್ಗಳನ್ನು ರಚಿಸಿದ್ದಕ್ಕಾಗಿ 2011-12ರ ಆರ್ಥಿಕ ವರ್ಷದಲ್ಲಿ 3.47 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದವು ಮೂರು ವರ್ಷಗಳ ಕಾಲ ನಡೆಯಿತು. ಅಲ್ಲಿ ರೆಹಮಾನ್ ನೇರವಾಗಿ ಹಣವನ್ನು ತನ್ನ ಚಾರಿಟಬಲ್ ಟ್ರಸ್ಟ್ ಆಗಿರುವ ಎಆರ್ ರೆಹಮಾನ್ ಫೌಂಡೇಶನ್ಗೆ ಪಾವತಿಸುವಂತೆ ಕೇಳಿಕೊಂಡರು.
“ತೆರಿಗೆ ವಿಧಿಸಬಹುದಾದ ಆದಾಯವನ್ನು ರೆಹಮಾನ್ ಪಡೆಯಬೇಕು. ತೆರಿಗೆಯನ್ನು ಸರಿಯಾಗಿ ಕಡಿತಗೊಳಿಸಿದ ಬಳಿಕ, ಆ ಮೊತ್ತವನ್ನು ಟ್ರಸ್ಟ್ಗೆ ವರ್ಗಾಯಿಸಬಹುದು. ಆದರೆ ಚಾರಿಟಬಲ್ ಟ್ರಸ್ಟ್ಗೆ ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿ ನೀಡಲಾಗಿರುವುದರಿಂದ, ತೆರಿಗೆ ಕಡಿತಗೊಳಿಸುವ ಮೊದಲು ಹಣವನ್ನು ಟ್ರಸ್ಟ್ ಮೂಲಕ ರವಾನಿಸಲಾಗುವುದಿಲ್ಲ” ಎಂದು ಐಟಿ ಇಲಾಖೆಯ ಸಲಹೆಗಾರರೊಬ್ಬರು ಹೇಳಿದ್ದಾರೆ.