ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆಸ್ತಿ ಮೌಲ್ಯ ಐದು ವರ್ಷಗಳಲ್ಲಿ 33.92 ಕೋಟಿ ರೂ.ಗಳಿಂದ 128.60 ಕೋಟಿ ರೂ.ಗೆ ಏರಿಕೆಯಾಗಿದೆ. ಖರ್ಚು ವೆಚ್ಚಗಳನ್ನು ಕಳೆದ ಬಳಿಕ ಆದಾಯಕ್ಕೆ ಮೀರಿ ಶೇ. 44ರಷ್ಟು ಆಸ್ತಿ ಹೊಂದಿದ್ದು, ಅದಕ್ಕೆ ಸೂಕ್ತ ಉತ್ತರ ನೀಡಲು ಡಿ.ಕೆ. ಶಿವಕುಮಾರ್ ಮತ್ತು ಕುಟುಂಬ ಸದಸ್ಯರು ವಿಫಲರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. 2013 ಏ.1ರ ಪೂರ್ವದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಕುಟುಂಬ ಸದಸ್ಯರು 33.92 ಕೋಟಿ ರೂ. ಸ್ಥಿರಾಸ್ತಿ ಮತ್ತು ಚರಾಸ್ತಿ ಹೊಂದಿದ್ದರು. 2018ರ ಏ.30ರ ವೇಳೆಗೆ 128.60 ಕೋಟಿ ರೂ.ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಅವರ ಒಟ್ಟು ಆಸ್ತಿಯ ಮೌಲ್ಯ 162.53 ಕೋಟಿ ರೂ. ಆಗಿದೆ. ಈ ಅವಧಿಯ ಒಟ್ಟಾರೆ ಆದಾಯ ಮತ್ತು ಸ್ವೀಕೃತಿಗಳು ಸೇರಿ 166.79 ಕೋಟಿ ರೂ. ಆಗಿದೆ.
ಇದೇ ಅವಧಿಯಲ್ಲಿ ಶಿವಕುಮಾರ್ ಕುಟುಂಬ ಸದಸ್ಯರ ಖರ್ಚುಗಳು 113.12 ಕೋಟಿ ರೂ. ಎಂದು ತಿಳಿಸಲಾಗಿದೆ. ಅಂದರೆ, ಈ ಅವಧಿಯಲ್ಲಿ ಶಿವಕುಮಾರ್ ಮತ್ತು ಕುಟುಂಬದವರು 74.93 ಕೋಟಿ ರೂ. ಆದಾಯಕ್ಕೂ ಮೀರಿ ಆಸ್ತಿ ಹೊಂದಿದ್ದಾರೆ.
ಒಟ್ಟಾರೆ ಆದಾಯಕ್ಕಿಂತ ಶೇ.44.93ರಷ್ಟು ಹೆಚ್ಚು ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವುದು ಕಂಡು ಬಂದಿದೆ. ಈ ಕುರಿತು ಪ್ರಶ್ನಿಸಿದಾಗ, ಸಮರ್ಥವಾದ ಉತ್ತರಗಳನ್ನು ಅವರ ಕುಟುಂಬವು ನೀಡಿಲ್ಲ. ಹೀಗಾಗಿ, ಭ್ರಷ್ಟಾಚಾರ ನಿಗ್ರಹ ಕಾಯಿದೆ ಕಲಂ 13(2) ಜತೆಗೆ, 13(1)(ಇ) ಅಡಿ ಡಿ.ಕೆ. ಶಿವಕುಮಾರ್ ಶಿಕ್ಷಾರ್ಹರು ಎಂದು ಸಿಬಿಐ ದಾಖಲಿಸಿಕೊಂಡಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.