ಕೋಲಾರ : ಐಫೋನ್ ತಯಾರಿಕ ಕಂಪನಿಯಲ್ಲಿ ಆಡಳಿತ ಮಂಡಳಿಯ ವಿರುದ್ಧ ಕಾರ್ಮಿಕರ ಆಕ್ರೋಶ!

0
142
Tap to know MORE!

ಕೋಲಾರ: ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಸದ ಕಂಪನಿ ವಿರುದ್ಧ ಸಿಡಿದೆದ್ದ ಕಾರ್ಮಿಕರು ಕಂಪನಿಗೆ ಕಲ್ಲು ತೂರಾಟ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಬಳಿಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆರಂಭವಾಗಿದ್ದ ದೇಶದ ಏಕೈಕ ಐಫೋನ್ ತಯಾರಿಕ ಕಂಪನಿ ವಿಸ್ಟ್ರಾನ್‌ನಲ್ಲಿ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವಿನ ಜಗಳ ಬೀದಿಗೆ ಬಂದಿದ್ದು, ನಾಲ್ಕು ತಿಂಗಳ ಸಂಬಳ ನೀಡಬೇಕೆಂದು ಹಲವು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾವಿರಾರು ಕಾರ್ಮಿಕರು ಇಂದು ತಾಳ್ಮೆ ಕಳೆದುಕೊಂಡಿದ್ದಾರೆ. ಪರಿಣಾಮ ಕಂಪನಿಯ ಒಂದು ಭಾಗಕ್ಕೆ ಬೆಂಕಿ ಹಚ್ಚಿ, ಕಿಟಕಿ ಗಾಜುಗಳನ್ನು ಒಡೆದು, ಕಾರುಗಳನ್ನು ಜಖಂಗೊಳಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸುಮಾರು 15 ಸಾವಿರ ಜನರಿಗೆ ಉದ್ಯೋಗ ಕೊಡುವುದಾಗಿ ವಿಸ್ಟ್ರಾನ್ ಕಂಪನಿ ಘೋಷಿಸಿತ್ತು. ಆದರೆ ಕಂಪನಿಯ ಖಾಯಂ ಉದ್ಯೋಗಗಳನ್ನು ಬೇರೆ ರಾಜ್ಯದವರಿಗೆ ನೀಡಿ, 12 ಸಾವಿರ ನಾಲ್ಕನೇ ದರ್ಜೆಯ ಗುತ್ತಿಗೆ ಉದ್ಯೋಗಗಳನ್ನು ಮಾತ್ರ ಸ್ಥಳೀಯರಿಗೆ ನೀಡಿದೆ. ಅಲ್ಲದೆ ಕೆಲಸ ಮಾಡಿಸಿಕೊಂಡು 4 ತಿಂಗಳುಗಳಿಂದ ಸಂಬಳ ಕೊಡದೆ ಸತಾಯಿಸುತ್ತಿದ್ದರು. ಹಾಗಾಗಿ ಅಲ್ಲಿನ ಕಾರ್ಮಿಕರು ಬಂಡಾಯವೆದ್ದು ಕಂಪನಿಯ ವಸ್ತುಗಳನ್ನು ಪುಡಿ ಪುಡಿ ಮಾಡಿ ತಮ್ಮ ಸಿಟ್ಟು ಹೊರಹಾಕಿದ್ದಾರೆ.

ಇಂದು ಬೆಳ್ಳಂಬೆಳಿಗ್ಗೆಯೇ 5 ಗಂಟೆ ಸಮಯದಲ್ಲಿ ನೂರಾರು ಕಾರ್ಮಿಕರು ಕಂಪನಿ ವಸ್ತುಗಳನ್ನು ಒಡೆದು ಹಾಕುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಆಡಳಿತ ಮಂಡಳಿಯ ಸದಸ್ಯರ ಕಾರುಗಳನ್ನು ಜಖಂಗೊಳಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಹಲವು ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ, ಪೊಲೀಸ್ ಅಧೀಕ್ಷಕ ಕಾರ್ತಿಕ್ ರೆಡ್ಡಿ ಭೇಟಿ ನೀಡಿದ್ದಾರೆ.

ಇಷ್ಟು ದೊಡ್ಡ ಕಂಪನಿಯಲ್ಲಿ ದುಡಿಯುವ 12 ಸಾವಿರ ಕಾರ್ಮಿಕರಿಗೆ ಕೇವಲ 8-12 ಸಾವಿರ ರೂ ಸಂಬಳವಿದೆ. ಅದನ್ನು ಕೊಡದೆ ಸತಾಯಿಸುತ್ತಿದ್ದರು. ಹಾಗಾಗಿ ಕಾರ್ಮಿಕರು ರೊಚ್ಚಿಗೆದ್ದಿದ್ದಾರೆ. ಈ ಘಟನೆ ಬೆಳಿಗ್ಗೆ 5 ಗಂಟೆಗೆ ಆರಂಭವಾದರೂ ಪೊಲೀಸರು ಸ್ಥಳಕ್ಕೆ ಬರುವಲ್ಲಿ 7 ಗಂಟೆ ಆಗಿದೆ. ಅಷ್ಟರಲ್ಲಿ ಕಾರ್ಮಿಕರು ಅಲ್ಲಿಂದ ಚೆಲ್ಲಾಪಿಲ್ಲಿಯಾಗಿದ್ದಾರೆ. ನಂತರ ರಸ್ತೆಯಲ್ಲಿ ಸಿಕ್ಕ ಸಿಕ್ಕ ಬೇರೆ ಕಂಪನಿಯ ಕಾರ್ಮಿಕರನ್ನು, ಸಾಮಾನ್ಯ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಪ್ರಕ್ಷುಬ್ದ ವಾತವಾರಣ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here