ಕತ್ತಲೆಯಿಂದ ಬೆಳಕಿನ ಅನಾವರಣ

0
183
Tap to know MORE!

ನಾ ಪ್ರಧಾನಿಯಾದರೆ……
ನನ್ನ ಮೊದಲ ಚಿತ್ತ
ದೇಶದ ಪರಿಪೂರ್ಣ ಅಭಿವೃದ್ಧಿಯತ್ತ..
ಸ್ವದೇಶಿಯ ಸೌಗಂಧ ಪಸರಿಸುತ್ತಾ
ವಿಶ್ವದ ತುಂಬೆಲ್ಲಾ….
ಜಾತಿಯ ಚಿಂತೆಯಿಲ್ಲ
ಅಜ್ಞಾನದ ಕಂತೆಯೇ ಇಲ್ಲ
ಗುರುಕುಲ ಪದ್ಧತಿ
ಉದಿಸುವುದು ಮತ್ತೊಮ್ಮೆ
ಶಿಕ್ಷಣದ ಒಂದೊಂದು
ಮೆಟ್ಟಿಲಾಗುವುದು ಭವಿಷ್ಯದ ಚಿಲುಮೆ..
ಪುಟ್ಟ ಕನಸಿದು
ನನಸಾಗಿಸುವ ಪ್ರಯತ್ನ ನನ್ನದು….

ಸಾಂಸ್ಕೃತಿಕ ವೈಭವದ ತವರೂರು,ವೈವಿಧ್ಯತೆಯ ಕೋಶ,ಭಾವೈಕ್ಯತೆಯ ಧಾಮ ಈ ಭರತ ಖಂಡ.ಹಳ್ಳಿಯು ಈ ದೇಶದ ಹೃದಯ.ಯುವ ಪೀಳಿಗೆಯೇ ಮಿದುಳು. ಆಚಾರ ವಿಚಾರಗಳ ಲ್ಲಿ ಸಮೃದ್ಧವಾಗಿರುವ ಹಚ್ಚ ಹಸುರಿನ ಪರಿಶುದ್ಧತೆಯ ದೇಶ ನನ್ನದು. ಹಳ್ಳಿಯಲ್ಲಿ ಹುಟ್ಟಿ ಹಳ್ಳಿಯೊಳಗಿನ ಕನ್ನಡ ಶಾಲೆಯಂಗಳದಿ ನಲಿಯುತ್ತಾ,ಸ್ವದೇಶಿ ರೈತ ಮಣ್ಣಿನ ಸೌಗಂಧ,ಪ್ರೀತಿ, ಒಗ್ಗಟ್ಟಿನೊಳಗೆ ಬೆಳೆದವಳು.ಹಳ್ಳಿಯ ಪುಟ್ಟ ಹಂಚಿನ ಮನೆಯೊಂದರಲ್ಲಿ ಬೆಳಗುತ್ತಿದ್ದ ಪುಟ್ಟ ದೀಪ ಮುಂದೊಂದು ದಿನ ದಿಲ್ಲಿಯ ಸಂಸತ್ ಭವನವನ್ನು ಸ್ಪರ್ಶಿಸಿ ಬೆಳಗುವ ಮಹತ್ಕಾರ್ಯ ನನ್ನ ಕೈಗೆ ಬಂದೊದಗಿದರೆ ಅದೊಂದು ಸೌಭಾಗ್ಯವೇ ಸರಿ.

ನಾನು ಪ್ರಧಾನಿಯಾದ ರೆ ಮೊದಲು ನಾ ಮಾಡುವ ಕೆಲಸ ನನ್ನ ಪ್ರತಿಪಕ್ಷದವರ ಜೊತೆಗೆ ವಿರೋಧ ಪಕ್ಷವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಭ್ರಷ್ಟಾಚಾರ ಮುಕ್ತವಾದ ಸರ್ಕಾರ ರಚಿಸುವೆನು.ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಮಾತಿಗೂ ಸಮಾನ ಅವಕಾಶ ನೀಡುವೆ.ಅದರೊಂದಿಗೆ ನನಗಿಂತ ಮೊದಲು ಅಧಿಕಾರ ವಹಿಸಿದ್ದ ಪ್ರಧಾನಿಗಳು ಜಾರಿಗೊಳಿಸಿದ್ದ ಎಲ್ಲಾ ಪ್ರಮುಖ ಅಭಿವೃದ್ಧಿಶೀಲ ಯೋಜನೆಗಳನ್ನು ಮತ್ತಷ್ಟು ಕ್ರಿಯಾಶೀಲ ಗೊಳಿಸುತ್ತೇನೆ.ದೇಶದ ಅಭಿವೃದ್ಧಿ ಯೆಂದರೆ ಅದು ನನ್ನೊಬ್ಬಳಿಂದ ಮಾತ್ರ ಅಲ್ಲ. ಪ್ರತಿಯೊಬ್ಬ ಪ್ರಜೆಯಿಂದಲೂ ಆಗಬೇಕು. ಏಕೆಂದರೆ ಒಂದು ಕೈಯಿಂದ ಚಪ್ಪಾಳೆ ತಟ್ಟಲಾಗದು.ಎರಡು ಕೈ ಬೇಕೇ ಬೇಕು.ಹಾಗೆಯೇ ಪಕ್ಷದ ,ವಿರೋಧ ಪಕ್ಷದ ದೇಶದ ಪ್ರತಿಯೊಬ್ಬರಿಗೂ ಒಪ್ಪಿತವಾದ ಯೋಜನೆಯ ನ್ನೇ ಜಾರಿಗೊಳಿಸುತ್ತೇನೆ.

ಬೇರೆ ರಾಷ್ಟ್ರಗಳು ಹುಬ್ಬೇರಿಸಿ ನೋಡುವಂತೆ ಅಭಿವೃದ್ದಿ ಶೀಲ ದೇಶವನ್ನಾಗಿ ಭಾರತವನ್ನು ರೂಪಿಸುತ್ತೇನೆ. ರೂಪಾಯಿಯ ಮೌಲ್ಯ ಡಾಲರ್ ಗಿಂತಲೂ ಏರಿಕೆಯಾಗಬೇಕು. ಆರ್ಥಿಕತೆಯ ಸುಸ್ಥಿರತೆಗೆ ಮೊದಲ ಆದ್ಯತೆ. ಸ್ವದೇಶಿ ಕಂಪನಿಗಳ ಸ್ಥಾಪನೆ,ಅಭಿವೃದ್ಧಿಯನ್ನು ಕೈಗೊಳ್ಳುವೆನು. ಬಡತನದಿ ಬೆಂದಿರುವ ಜೀವಗಳಿಗೆ ಭರವಸೆಯ ಹೊಂಬೆಳಕು ಚೆಲ್ಲುವೆನು ನನ್ನಯ ದೇಶದಲ್ಲಿ. ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆ ತರುತ್ತೇನೆ. ಶಿಕ್ಷಣವೆಂದರೆ ಅದು ಅಂಕಗಳಿಗೆ ಸೀಮಿತವಾಗಿರದೇ ಅದರಲ್ಲಿ ಜೀವನ ಮೌಲ್ಯವಿರಬೇಕು, ಭವಿಷ್ಯದ ರೂಪಣೆಯಿರಬೇಕು ,ಜೀವನಕ್ಕೆ ಅಗತ್ಯವಾದ ಕೌಶಲ್ಯಗಳ ಆಗರವಿರಬೇಕು.ಸರ್ಕಾರಿ ಶಾಲೆಗಳಲ್ಲಿಯೇ ಉನ್ನತ ಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುತ್ತೇನೆ. ಖಾಸಗಿ ಶಾಲೆಯನ್ನೂ ಮೀರಿಸುವ ಅವಕಾಶಗಳನ್ನು ಸರಕಾರಿ ಶಾಲೆಗಳಲ್ಲಿ ಸೃಷ್ಟಿಸುತ್ತೇನೆ. ಶಿಕ್ಷಣ ಪದ್ಧತಿಯಲ್ಲಿ ಹಿಂದಿದ್ದ ಗುರುಕುಲ ಶಿಕ್ಷಣ ಪದ್ಧತಿಯನ್ನು ಮತ್ತೆ ಜಾರಿಗೊಳಿಸುವ ಪ್ರಯತ್ನ ನನ್ನದು. ಈ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಅರುವತ್ತ ನಾಲ್ಕು ವಿದ್ಯೆಗಳನ್ನು ಕಲಿಸಿಕೊಡಲಾಗುತ್ತಿತ್ತು. ಇವಿಷ್ಟೂ ವಿದ್ಯೆ ಬಲ್ಲವ ಈ ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕಬಲ್ಲ ಎಂಬ ವಿಚಾರವಿದೆ.ಪ್ರತಿಯೊಬ್ಬ ಪ್ರಜೆಯೂ ಜೀವನಕ್ಕೆ ಬೇಕಾದ ಎಲ್ಲಾ ಉತ್ತಮ ವಿದ್ಯೆಯನ್ನು ಕಲಿಯಲೇಬೇಕು, ಮೈಗೂಡಿಸಲೇಬೇಕು.

ಪುರಾತನ ಕಾಲದಿಂದಲೂ ಕೃಷಿಯೊಂದಿಗೇ ಜೀವಿಸುತ್ತಿರುವ ದೇಶ ನಮ್ಮದು.ಇಲ್ಲಿ ಕೃಷಿಯೇ ಉಸಿರು.ಕೃಷಿ ಪ್ರಧಾನ ದೇಶ ಇಂದು ಕೈಗಾರೀಕರಣ, ಖಾಸಗೀಕರಣ ಎಂದೆಲ್ಲಾ ಮಾಡುತ್ತಾ ಕೃಷಿಯ ಮಹತ್ವ ಕಣ್ಮರೆಯಾಗುತ್ತಿದೆ. ರೈತನೊಬ್ಬನ ಮಗ ಮುಂದೆ ತಾನು ರೈತನಾಗಲಾರೆ,ಒಬ್ಬ ಇಂಜಿನಿಯರೋ , ಡಾಕ್ಟರೋ, ಐ ಟಿ ಕಂಪನಿಯ ಉದ್ಯೋಗಿಯೋ ಆಗಬೇಕೆಂಬ ಆಸೆ ಹೊತ್ತು ಮುಂದೆ ಸಾಗುತ್ತಾರೆ.ಅವರ ಆಸೆ ಕನಸು ಇವೆರಡೂ ತಪ್ಪಲ್ಲ.ಅದು ಅವರ ಹಕ್ಕು.ತಾನು ಮುಂದೆ ಹೋಗಬೇಕೆಂಬ ಚಿಂತನೆ.ಆದರೆ ಇಂದು ಎಲ್ಲ ಮಕ್ಕಳು ಡಾಕ್ಟರ್, ಎಂಜಿನಿಯರ್ ಗಳಾದರೆ ಮುದೆ ಕೃಷಿ ಮಾಡುವವನಾರು ? ನಮ್ಮ ಹಸಿವನ್ನೀಗುವ ರೈತನ ಮೊಗದಲ್ಲಿ ಮಂದಹಾಸದ ಚಿಲುಮೆ ಸದಾ ಬತ್ತದೆ ಇರದಂತೆ ಅನೇಕ ಯೋಜನೆಗಳನ್ನು ಕಾರ್ಯರೂಪಗೊಳಿಸುತ್ತೇನೆ . ಕೃಷಿಯೊಳಗೊಂದು ಉದ್ಯೋಗ ಸೃಷ್ಟಿಸುತ್ತೇನೆ. ಸಾವಯವ ಕೃಷಿಯುತ,ರಾಸಾಯನಿಕ ಮುಕ್ತ ಕೃಷಿಯ ದೇಶವನ್ನಾಗಿ ರೂಪಿಸುತ್ತೇನೆ . ಕೃಷಿಯಲ್ಲಿ ಬೀಜ ಬಿತ್ತನೆಯಿಂದ ಹಿಡಿದು ವಿದೇಶೀ ರಪ್ತಿನವರೆಗೂ ಪ್ರತಿಯೊಂದರಲ್ಲೂ ತಂತ್ರಜ್ಞಾನದ ವ್ಯವಸ್ಥೆ ಅಳವಡಿಸಿ ರೈತರಿಗೆ ಉತ್ತಮ ಲಾಭ,ಇಳುವರಿ ದೊರೆಯುವಂತಹ ಯೋಜನೆ ಅನುಷ್ಠಾನಕ್ಕೆ ತರುತ್ತೇನೆ.

ವಿಜ್ಞಾನ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗಾಧವಾದ ಅಭಿವೃದ್ದಿ ಮಾಡುತ್ತೇನೆ.
ದೇಶಕ್ಕೆ ಸ್ವಾತಂತ್ರ ದೊರೆತು ೭೩ ವರ್ಷಗಳು ಕಳೆಯಿತು,೧೬ ಪ್ರಧಾನ ಮಂತ್ರಿಗಳು ಬಂದು ಹೋದರು. ಭಾರತ ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲಾಗಲಿಲ್ಲ.ನಾನು ಇದಕ್ಕೆ ಬೇಕಾದ ಎಲ್ಲಾ ವಿದೇಶಾಂಗ ಕ್ರಮಗಳನ್ನು ಕೈಗೊಂಡು ಭಾರತವೂ ಭದ್ರತಾ ಸಮಿತಿಯಲ್ಲಿ ಖಾಯಂ ಸದಸ್ಯತ್ವ ಕಾಯ್ದುಕೊಂಡು ಪ್ರಪಂಚದಲ್ಲಿಯೇ ಸೂಪರ್ ಪವರ್ ದೇಶವನ್ನಾಗಿ ರೂಪಿಸುತ್ತೇನೆ. ಆದರೆ ಇದು ಆಯುಧ, ಅಣುಬಾಂಬ್ ಗಳಿಂದಲ್ಲ ಬದಲಾಗಿ ಆರ್ಥಿಕ ಸ್ಥಿತಿ, ಶೈಕ್ಷಣಿಕ ಕ್ರಾಂತಿ,ಕೃಷಿ ಅಭಿವೃದ್ಧಿ, ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಅಭಿವೃದ್ದಿ ಇಂತಹ ವಿಚಾರಗಳಿಂದ. ಸಮೃದ್ಧಿ,ಸುರಕ್ಷತೆ,ಸಾಮರಸ್ಯ ಈ ಮೂರು ಅಂಶಗಳಿಗೆ ಪ್ರಮುಖ ಆದ್ಯತೆ . ನನ್ನ ದೇಶದಲ್ಲಿ ಮೀಸಲಾತಿಯ ಅತೀ ಮುಖ್ಯ ಮಾನದಂಡ ಆತನೊಳಗಿನ ಪ್ರತಿಭೆ.ದೇಶದ ಪ್ರತಿಯೊಂದು ವ್ಯವಸ್ಥೆಯು ಸರ್ಕಾರದ ಅಧೀನದಲ್ಲಿ ಇರಬೇಕು.

ರೂಪಾಯಿಯ ಮೌಲ್ಯ ಏರಿಕೆಯಾಗುತ್ತದೆ. ಕಾಗದ ರೂಪದ ಹಣ ಹೋಗಿ ಡಿಜಿಟಲೀಕರಣವಾಗುತ್ತದೆ ಸಂಪೂರ್ಣ ದೇಶ.ಸಮಾನತೆಯ ಕ್ರಾಂತಿ ಮೂಡುವುದು, ಅಪೌಷ್ಠಿಕತೆ ಇರದು. ಪುರುಷನಷ್ಟೇ ದೈರ್ಯದಿ ಬದುಕಬಲ್ಲಳು ನಾರಿಯೋರ್ವಳು. ಭ್ರಷ್ಟಾಚಾರ, ಲಂಚಕೋರತನದ ವಿಚಾರವೇ ಇರದು ನನ್ನಯ ಭಾರತದಲ್ಲಿ.ಅತ್ಯಾಚಾರ, ಅನಾಚಾರ,ಅಸ್ಪ್ರಶ್ಯತೆ,ಮೂಢನಂಬಿಕೆ, ನಿರುದ್ಯೋಗ ಮುಕ್ತ ದೇಶವನ್ನಾಗಿ ರೂಪಿಸುವ ದೃಢ ಸಂಕಲ್ಪದೊಂದಿಗೆ ಮುನ್ನಡೆಸುತ್ತೇನೆ ಈ ದೇಶವನ್ನು.

ನೂರಾರು ಕೋಟಿ ಮನಸ್ಸುಗಳ ಭಾವನೆ ನೂರಾರು,ಚಿಂತನೆ ಹಲವಾರು, ಆದರೆ ಎಲ್ಲಾ ಕಣ್ಗಳಲ್ಲಿಯೂ ಆಶಾವಾದದ ಅಲೆ, ಎಂದು ಬೆಳಕು ಮೂಡುವುದೋ ನಮಗೆ…. ಕತ್ತಲೆ ಸರಿಯುತ್ತಲಿದೆ ಸ್ವಲ್ಪ ಸ್ವಲ್ಪವೇ ಬೆಳಕು ಅವರಿಸುತ್ತಲಿದೆ, ಆ ಬೆಳಕನ್ನು ಸಂಪೂರ್ಣವಾಗಿ ಅನಾವರಣಗೊಳಿಸುವೆ ನಾ ಪ್ರಧಾನಿಯಾದರೆ………

ಉಮಾಶ್ರೀ ಶೆಟ್ಟಿ

LEAVE A REPLY

Please enter your comment!
Please enter your name here