ಕೊರೋನಾ ಪ್ರಕರಣಗಳ ಇಂದಿನ ವರದಿ ಹೊರಬಿದ್ದಿದ್ದು, ಸತತ ನಾಲ್ಕನೇ ದಿನ ಬೆಂಗಳೂರಿನಲ್ಲಿ ಹೊಸ ಸೋಂಕಿತರ ಸಂಖ್ಯೆ ನೂರು ದಾಟಿದೆ. ಬೆಂಗಳೂರಿನ 179ನ್ನು ಸೇರಿದಂತೆ, ರಾಜ್ಯದಲ್ಲಿ ಒಟ್ಟು 397 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ, ಒಟ್ಟು ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 3,799ಕ್ಕೆ ಏರಿದಂತಾಗಿದೆ. ಬೆಂಗಳೂರು ಹೊರತುಪಡಿಸಿ, ಇತರ ಯಾವುದೇ ಜಿಲ್ಲೆಯಲ್ಲೂ 500ಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಇಲ್ಲ.
ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, ಇತರ ಯಾವುದೇ ಜಿಲ್ಲೆಯಲ್ಲೂ, 40ಕ್ಕೂ ಅಧಿಕ ಸೋಂಕಿತರು ಪತ್ತೆ ಆಗಲಿಲ್ಲ. ಬಳ್ಳಾರಿ(34) ಮತ್ತು ಕಲಬುರ್ಗಿ (22) ನಂತರದ ಸ್ಥಾನದಲ್ಲಿದೆ. ಅದಲ್ಲದೆ, ಇಂದು ರಾಜ್ಯದಲ್ಲಿ ಒಟ್ಟು 149 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದುವರೆಗೆ, ಒಟ್ಟು 6151 ಸೋಂಕಿತರು ಗುಣಮುಖರಾಗಿದ್ದಾರೆ. ಬೆಂಗಳೂರಿನ 5 ಸೋಂಕಿತರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 14 ಮಂದಿ ಇಂದು ಕೊರೋನಾಗೆ ಬಲಿಯಾಗಿದ್ದಾರೆ.