ಕರ್ನಾಟಕ ಬಂದ್ : ದ.ಕ,ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆಗೆ ಸೀಮಿತ!

0
200
Tap to know MORE!

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಗೀಕರಿಸಿರುವ ಕೃಷಿ ಸಂಬಂಧಿತ ಕಾನೂನುಗಳು ರೈತ ವಿರೋಧಿ ಎಂದು ಆರೋಪಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರಾವಳಿಯ ವಿವಿಧ ರೈತ ಪರ ಸಂಘಟನೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದು, ವಿವಿಧೆಡೆ ಪ್ರತಿಭಟನಾ ಸಭೆ, ಮೆರವಣಿಗೆ, ರಸ್ತೆ ತಡೆ ಚಳುವಳಿ ನಡೆಯಲಿದೆ.

ದಕ್ಷಿಣ ಕನ್ನಡ
ಜಿಲ್ಲೆಯಲ್ಲಿ ರೈತ, ದಲಿತ, ಕಾರ್ಮಿಕ ಜನಪರ ಚಳವಳಿಗಳ ಒಕ್ಕೂಟದ ಆಶ್ರಯದಲ್ಲಿ ಬಂಟ್ವಾಳ ಮತ್ತು ಸುಳ್ಯದಲ್ಲಿ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಸಲಾಗುವುದು ಎಂದು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ್‌ ಪುಣಚ ತಿಳಿಸಿದ್ದಾರೆ.

ಅದಲ್ಲದೆ, ಮಂಗಳೂರಿನಲ್ಲಿ ಮಿನಿ ವಿಧಾನಸೌಧದ ಎದುರು ಕೆಲವು ರಾಜಕೀಯ ಪಕ್ಷಗಳ ಸಹಯೋಗದಲ್ಲಿ ಪ್ರತಿಭಟನ ಸಭೆ ಮತ್ತು ರಸ್ತೆ ತಡೆ ಚಳವಳಿ ಬೆಳಗ್ಗೆ 10ಕ್ಕೆ ನಡೆಯಲಿದೆ.

ಮೂಡುಬಿದಿರೆ ಬಸ್‌ ನಿಲ್ದಾಣದ ಬಳಿ ಬೆಳಗ್ಗೆ 10 ಗಂಟೆಗೆ ಬಂದ್‌ ಬೆಂಬಲಿಸಿ ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ
ಸೆ. 28ರ ಸ್ವಯಂ ಪ್ರೇರಿತ ಕರ್ನಾಟಕ ಬಂದ್‌ಗೆ ಉಡುಪಿ ಜಿಲ್ಲೆಯ 15 ಸಂಘಟನೆಗಳು ಬೆಂಬಲ ಘೋಷಿಸಿವೆ. ಆಶ್ರಯದಾತ ಆಟೋ ಯೂನಿಯನ್‌ ಕೂಡ ಬೆಂಬಲ ಸಾರಿದ್ದು, ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಆಟೋ ಸಂಚಾರವನ್ನು ಸ್ಥಗಿತಗೊಳಿಸಲು ಮನವಿ ಮಾಡಿದೆ.

ಎಂದಿನಂತೆ ಬಸ್ ಸಂಚಾರ
ಸೆ. 28ರಂದು ಬಸ್‌ ಸಂಚಾರ ನಿಲ್ಲಿಸುವ ಬಗ್ಗೆ ಕೇಂದ್ರ ಕಚೇರಿಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ, ಖಾಸಗಿ ಬಸ್‌ ಸಂಚಾರ ಎಂದಿನಂತೆ ಇರಲಿದೆ ಎಂದು ದ.ಕ. ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಮತ್ತು ಉಡುಪಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

ಪರೀಕ್ಷೆಗಳು ಮುಂದೂಡಿಕೆ
ಬಂದ್‌ ಕರೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೆ. 28ರಂದು ನಡೆಯಬೇಕಿದ್ದ ಎಸೆಸೆಲ್ಸಿ ಪೂರಕ ಪರೀಕ್ಷೆಯಡಿ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳನ್ನು ಸೆ. 29ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಗಳೂರು ವಿವಿ ಪರೀಕ್ಷೆ ಮುಂದಕ್ಕೆ
ಮಂಗಳೂರು ವಿಶ್ವವಿದ್ಯಾನಿಲಯ ಸೆ. 28ರಂದು ನಿಗದಿಪಡಿಸಿದ್ದ ಎಲ್ಲ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಿದೆ. ಪರಿಷ್ಕೃತ ದಿನಾಂಕವನ್ನು ವಿವಿ ಪರೀಕ್ಷಾಂಗ ಇಲಾಖೆಯು ಪ್ರಕಟಿಸಿದೆ. ಉಳಿದೆಲ್ಲ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here