ಬೆಂಗಳೂರು : ಮನೆ ಬಾಗಿಲಿಗೆ ಮದ್ಯವನ್ನು ವಿತರಿಸಲು ಅನುವು ಮಾಡಿಕೊಡುವ ಪ್ರಸ್ತಾಪವನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಮತ್ತು ಎಲ್ಲಾ ವಿತರಕ ಮತ್ತು ಮಾರಾಟಗಾರರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ಪ್ರಾರಂಭಿಸಿದೆ. ಮೊದಲ ಹಂತವಾಗಿ, ಬೆಂಗಳೂರು ನಗರದ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎಂಎಸ್ಐಎಲ್ ಅಂಗಡಿಗಳ ಮೂಲಕ ಮಾರಾಟ ಆರಂಭಿಸಲು ಚಿಂತನೆ ನಡೆದಿದೆ. ಇದನ್ನು ರಾಜ್ಯದ ಉಳಿದ ಭಾಗಗಳಿಗೆ ವಿಸ್ತರಿಸುವ ಮೊದಲು, ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಆನ್ಲೈನ್ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಅವಕಾಶ ನೀಡಲಿದೆ ಎನ್ನಲಾಗಿದೆ.
ಆಯುಕ್ತ ಎಂ.ಲೋಕೇಶ್ ನೇತೃತ್ವದ ರಾಜ್ಯ ಅಬಕಾರಿ ಇಲಾಖೆ, ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ಸಲ್ಲಿಸುವಂತೆ ಮಧ್ಯಸ್ಥಗಾರರಿಗೆ ಸೂಚಿಸಿದೆ. ಪ್ರಸ್ತಾವನೆಯ ಬಗ್ಗೆ ಒಮ್ಮತ ಸಾಧಿಸಿದರೆ ರಾಜ್ಯದಲ್ಲಿ ಆಗಸ್ಟ್ ತಿಂಗಳಿನಿಂದ ಈ ಸೇವೆಯನ್ನು ಪ್ರಾರಂಭವಾಗಬಹುದು. ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ಸುಮಾರು ಆರು ರಾಜ್ಯಗಳಲ್ಲಿ ಈಗಾಗಲೇ, ಆನ್ಲೈನ್ ಮದ್ಯ ವಿತರಣೆಯನ್ನು ಪ್ರಾರಂಭಿಸಿವೆ.
ಕೋವಿಡ್ -19 ರ ಭೀತಿಯಿಂದಾಗಿ, ರಾಜ್ಯದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ಗಳು, ಕ್ಲಬ್ಗಳು ಇತ್ಯಾದಿ ಮಾರ್ಚ್ನಿಂದ ಮುಚ್ಚಿವೆ. ಕೆಲವೆಡೆ ತೆರೆಯಲು ಅನುಮತಿ ಸಿಕ್ಕರೂ, ಪೂರ್ಣ ಪ್ರಮಾಣದಲ್ಲಿ ವ್ಯಾಪಾರಕ್ಕೆ ಅವಕಾಶವಿರಲಿಲ್ಲ. ಬುಧವಾರ ರಾತ್ರಿ ಘೋಷಿಸಿದ ಅನ್ಲಾಕ್ 3.0 ಮಾರ್ಗಸೂಚಿಯಲ್ಲೂ, ತೆರವಿಗೆ ಅನುಮತಿ ಸಿಗಲಿಲ್ಲ. “ಇದು ಆನ್ಲೈನ್ ಮದ್ಯ ಮಾರಾಟವನ್ನು ಪ್ರಾರಂಭಿಸಲು ಸರ್ಕಾರವನ್ನು ಪ್ರೇರೇಪಿಸುತ್ತದೆ” ಎಂದು ಅಬಕಾರಿ ಅಧಿಕಾರಿ ಹೇಳಿದರು.