ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡ ಹಬ್ಬವನ್ನು ಪ್ರತ್ಯೇಕವಾಗಿ ಆಚರಿಸೋಣ!

0
275
Tap to know MORE!

ನವೆಂಬರ್‌ ೧ ರಂದು ಕರ್ನಾಟಕದ ರಾಜ್ಯಾದ್ಯಂತ ರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಕರ್ನಾಟಕ ರಾಜ್ಯದ ಏಕೀಕರಣಕ್ಕೆ ಕೊಡುಗೆಯನ್ನು ನೀಡಿದ ಮಹನೀಯರನ್ನು ನೆನಪಿಸಲಾಗುತ್ತದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ವ್ಯಕಿಗಳನ್ನು ಗುರುತಿಸಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ, ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ದಿನವನ್ನು ಕೆಲವೆಡೆ ಕರ್ನಾಟಕ ರಾಜ್ಯೋತ್ಸವವೆಂದು, ಹಲವೆಡೆ ಕನ್ನಡ ರಾಜ್ಯೋತ್ಸವವಾಗಿ ಹಾಗೂ ಇನ್ನಿತರ ಕಡೆಗಳಲ್ಲಿ “ಕರಾಳ ದಿನ/ಬ್ಲ್ಯಾಕ್‌ ಡೇ” ಎಂದು ಆಚರಿಸುತ್ತಾರೆ!

ನಾನು ಗಮನಿಸಿದಂತೆ, ಬಹುತೇಕರು ಕನ್ನಡ ರಾಜ್ಯೋತ್ಸವಕ್ಕೆ ಶುಭವನ್ನು ಕೋರುತ್ತಾರೆ. ನಿಜಕ್ಕೂ ನವೆಂಬರ್‌ ಒಂದರಂದು ನಾವು ಏನನ್ನು ಆಚರಿಸಬೇಕು? ಯಾವ ಅರ್ಥದಲ್ಲಿ ಆಚರಣೆ ಮಾಡಬೇಕು? ಕರ್ನಾಟಕ ರಾಜ್ಯದ ಏಕೀಕರಣದ ಸಂದರ್ಭ ಅನ್ಯಾಯ ಆದವರಿಗೆ ಹೇಗೆ ನ್ಯಾಯ ಕೊಡಿಸುವುದು? ಭಾಷಾ ಆಧಾರದಲ್ಲಿಯೇ ಮೈಸೂರು ರಾಜ್ಯ ಸ್ಥಾಪನೆಯಾದರೂ, ಕೆಲವು ಕನ್ನಡ ಪ್ರದೇಶಗಳು ಹೇಗೆ ಬೇರೆ ರಾಜ್ಯದ ಪಾಲಾದವು? ಎಂಬುವುದನ್ನೆಲ್ಲ ನಾವು ಮೊದಲು ಚರ್ಚಿಸಬೇಕಾಗುತ್ತದೆ. ಇವುಗಳನ್ನೆಲ್ಲ ಅರ್ಥೈಸಿ, ಏಕೀಕರಣದ ನೈಜ ಇತಿಹಾಸವನ್ನು ಅರಿತು, ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಪ್ರಜ್ಞಾವಂತ ನಾಗರಿಕರಾಗೋಣ.

ನವೆಂಬರ್‌ ೧ರ ಪ್ರಾಮುಖ್ಯತೆ
1956ನೇ ನವೆಂಬರ್ 1ರಂದು ಮೈಸೂರು ರಾಜ್ಯ ನಿರ್ಮಾಣವಾಯಿತು. ಆಲೂರು ವೆಂಕಟರಾಯರು, ಮಂಜೇಶ್ವರ ಗೋವಿಂದ ಪೈ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಭಾ, ಕೆಪಿಸಿಸಿ ಇತ್ಯಾದಿ ವ್ಯಕ್ತಿ-ಸಂಘಟನೆಗಳ ಒಗ್ಗಟ್ಟಿನ ಹೋರಾಟದ ಫಲವಾಗಿ ಕನ್ನಡಿಗರಿಗಾಗಿ ಒಂದು ರಾಜ್ಯ ನಿರ್ಮಾಣವಾಯಿತು. ಫಜಲ್‌ ಅಲಿ ನೇತೃತ್ವದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಜಾರಿಗೆ ಬಂದ ರಾಜ್ಯಗಳ ಪುನರ್‌ ವಿಂಗಡನೆ ಕಾಯಿದೆಯ ಅಡಿಯಲ್ಲಿ ಈ ಹೊಸ ರಾಜ್ಯವು ನಿರ್ಮಾಣಗೊಂಡಿತು.

ಇದು ಕೇವಲ ಕನ್ನಡಿಗರ ರಾಜ್ಯವಲ್ಲ!
ಇಂದು ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯೇ ಅಧಿಕೃತ ಭಾಷೆಯಾದರೂ, ಮೈಸೂರು ರಾಜ್ಯವು ಕೇವಲ ಕನ್ನಡ ಭಾಷಾ ಪ್ರದೇಶಗಳ ಒಂದುಗೂಡಿಕೆಯಾಗಿರಲಿಲ್ಲ. ಬಹುಕಾಲ ಅಳುಪರು ಆಳಿದ ತುಳುನಾಡು, ಕೊಡವರು ಆಳುತ್ತಿದ್ದ ಸ್ವತಂತ್ರ ಸಂಸ್ಥಾನ ಕೊಡಗು, ಗೋವಾದಿಂದ ಕರ್ನಾಟಕ ಕರಾವಳಿಗೆ ವಲಸೆ ಬಂದ ಕೊಂಕಣರು, ಬ್ಯಾರಿಗಳು ಇತ್ಯಾದಿ ಭಾಷಿಕರನ್ನೂ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಸುಮಾರು 2 ಸಾವಿರ ವರ್ಷಗಳ ಉಜ್ವಲ ಇತಿಹಾಸ ಪರಂಪರೆ ಹಾಗೂ ಸಂಸ್ಕೃತಿಯುಳ್ಳ ಜನತೆಯನ್ನು ಏಕೀಕರಣವು ಒಂದುಗೂಡಿಸಿತು.

ಕನ್ನಡಿಗರು ಬಹುಸಂಖ್ಯಾತರಾದರೂ, ಇತರ ಭಾಷಿಕರನ್ನೂ ಕನ್ನಡಾಂಬೆ ಸಾಕಿ ಸಲಹುತ್ತಿದ್ದಳು. ಹೀಗಾಗಿ, ಮೈಸೂರು ರಾಜ್ಯವನ್ನು ಕರ್ನಾಟಕವೆಂಬ ಹೆಸರಿನಿಂದ ಕರೆಯಬೇಕೆಂದು ತೀವ್ರವಾದ ಚರ್ಚೆಯು 1972ರ ಜುಲೈಯಲ್ಲಿ ಆರಂಭವಾಯಿತು. ಇದರ ಪ್ರತಿಫಲವಾಗಿ, ೧೯೭೩ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣವನ್ನು ಮಾಡಲು ಮೈಸೂರು ವಿಧಾನಸಭೆಯು ಸರ್ವಾನುಮತದಿಂದ ಒಪ್ಪಿಗೆ ನೀಡಿತು.

ಕೆಲವರಿಗೆ ಏಕೀಕರಣವು ಕರಾಳ ದಿನವಾಗಿದೆ!
ಏಕೀಕರಣದ ಸಂದರ್ಭ ಬಹುತೇಕ ಕನ್ನಡಿಗರು ಒಂದೇ ಸೂರಿನಡಿ ಬಿದ್ದರೂ, ಕೆಲವು ಕನ್ನಡ ಪ್ರದೇಶಗಳು ಇತರ ರಾಜ್ಯಗಳ ಪಾಲಾಯಿತು. ವಿಪರ್ಯಾಸವೆಂದರೆ, ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಆಲೂರು ವೆಂಕಟರಾಯ ಮತ್ತು ಮಂಜೇಶ್ವರ ಗೋವಿಂದ ಪೈಯವರ ಪ್ರದೇಶಗಳೇ ಮೈಸೂರು ರಾಜ್ಯದಿಂದ ಹೊರಗುಳಿಯಿತು. ಪ್ರಸ್ತುತ ಆಂಧ್ರ ಪ್ರದೇಶದಲ್ಲಿರುವ ಆಲೂರು, ರಾಯದುರ್ಗ, ತಮಿಳುನಾಡಿಗೆ ಸೇರ್ಪಡೆಗೊಂಡಿರುವ ನೀಲಗಿರಿ, ಕೇರಳದಲ್ಲಿರುವ ಮಂಜೇಶ್ವರ, ಕಾಸರಗೋಡು, ಮಹಾರಾಷ್ಟ್ರದ ಭಾಗವಾಗಿರುವ ಶೋಲಾಪುರ, ಚಂದಗಢ ಇತ್ಯಾದಿ ಪ್ರದೇಶಗಳಲ್ಲಿ ಕನ್ನಡಿಗರಿದ್ದರೂ ಅವುಗಳನ್ನು ಮೈಸೂರು ರಾಜ್ಯದಿಂದ ಹೊರಗಿಡಲಾಯಿತು. ಈಗ ತೆಲುಗು, ತಮಿಳು, ಮರಾಠಿ, ಮಲಯಾಳಿಗಳ ಪ್ರಭಾವ ಹಾಗೂ ಹೇರಿಕೆ ಮತ್ತು ಆ ಪ್ರದೇಶಗಳಲ್ಲಿ ಕನ್ನಡಕ್ಕೆ ಸೂಕ್ತ ಪ್ರೋತ್ಸಾಹ ಸಿಗದಿರುವುದರಿಂದ ಅಲ್ಲಿಂದ ಕನ್ನಡವು ಕಣ್ಮರೆಯಾಗುತ್ತಿದೆ.

ಮೈಸೂರು ರಾಜ್ಯದಲ್ಲಿ ಇತರ ಭಾಷಾ ಅಲ್ಪಸಂಖ್ಯಾತರಿಗೆ ನೆಲೆ ನೀಡಲಾಗಿದೆ. ಕರಾವಳಿಯಲ್ಲಿ ತುಳು, ಕೊಂಕಣಿ, ಬ್ಯಾರಿ, ದಕ್ಷಿಣದಲ್ಲಿ ಕೊಡವ, ಉತ್ತರದಲ್ಲಿ ಮರಾಠಿ, ಹೈದರಾಬಾದ್‌-ಕರ್ನಾಟಕ ಪ್ರಾಂತ್ಯದಲ್ಲಿ ಕೆಲವು ತೆಲುಗು ಭಾಷಿಕರ ಪ್ರದೇಶಗಳು ಮೈಸೂರು(ಕರ್ನಾಟಕ) ರಾಜ್ಯದ ಪಾಲಾದವು. ಇವರಲ್ಲಿ ಕೆಲವರು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟರೂ ಅವು ಫಲಕಾರಿಯಾಗಲಿಲ್ಲ. ಕನ್ನಡ ಭಾಷೆಯು ಈ ಅಲ್ಪಸಂಖ್ಯಾತ ಭಾಷಿಕರ ಮೇಲೆ ದಬ್ಬಾಳಿಕೆ ನಡೆಸಿತು. ಬಹುತೇಕ ಕಡೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಾಲೆಗಳನ್ನು ತೆರೆದರೇ ವಿನಃ ಬೇರೆ ಭಾಷೆಗಳಿಗೆ ಸೂಕ್ತವಾದ ಪ್ರೋತ್ಸಾಹ ನೀಡಲಿಲ್ಲ!

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ?
ಇಂದು ಈ ಕುರಿತಂತೆ ಬಹಳ ಚರ್ಚೆಗಳಾಗುತ್ತಿವೆ. ಕನ್ನಡೀಕರಣದ ಹೆಸರಿನಲ್ಲಿ ಇತರ ಭಾಷೆಯನ್ನು ತುಳಿಯಲಾಗುತ್ತಿದೆ. ನವೆಂಬರ್‌ ೧ ರಂದು ಮೈಸೂರು ರಾಜ್ಯವು ನಿರ್ಮಾಣವಾಗಿತ್ತು. ಅದನ್ನು ಕನ್ನಡ ನಾಡು ಅಥವಾ ಕನ್ನಡ ರಾಜ್ಯವೆಂದೂ ಹೆಸರಿಸಬಹುದಿತ್ತು. ಆದರೆ, ಈ ರಾಜ್ಯದಲ್ಲಿ ಕನ್ನಡಿಗರು ಮಾತ್ರವಲ್ಲದೆ, ಮೇಲೆ ಉಲ್ಲೇಖಿಸಿದಂತೆ ತುಳು, ಕೊಡವ, ಬ್ಯಾರಿ, ಕೊಂಕಣಿ ಭಾಷಿಕರೂ ಇದ್ದರು. ಹಾಗಾಗಿ ಮೈಸೂರು ಎಂದೂ, ಬಳಿಕ ಕರ್ನಾಟಕವೆಂದು ಹೆಸರಿಸಲಾಯಿತು. ಉದಾಹರಣೆಗೆ, ಭಾರತದ ಅಧಿಕೃತ/ಆಡಳಿತ ಭಾಷೆ ಹಿಂದಿ. ಆದರೆ, ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು(ಅಗಸ್ಟ್‌ ೧೫) ಹಾಗೂ ಹಿಂದಿ ದಿವಸ್‌(ಸೆಪ್ಟೆಂಬರ್‌ ೧೪) ಆಚರಣೆಯನ್ನು ಪ್ರತ್ಯೇಕ ದಿನದಂದು ಆಚರಿಸಲಾಗುತ್ತದೆ. ಇದೇ ಮಾದರಿಯಲ್ಲಿ, ಕರ್ನಾಟಕದ ರಾಜ್ಯೋತ್ಸವ ಹಾಗೂ ಕನ್ನಡ ದಿನವನ್ನು ಪ್ರತ್ಯೇಕವಾಗಿ ಆಚರಿಸಿದರೆ ಅರ್ಥಪೂರ್ಣವಾಗುತ್ತದೆ.

ಈ ನಿಟ್ಟಿನಲ್ಲಿ ಹೇಳುವುದಾದರೆ, ನವೆಂಬರ್‌ ೧ನ್ನು ಕರ್ನಾಟಕ ರಾಜ್ಯೋತ್ಸವವನ್ನಾಗಿಯೇ ಆಚರಿಸುವುದು ಬಹಳ ಸೂಕ್ತವಾಗಿರುತ್ತದೆ. ಇದಲ್ಲದೆ, ಕರ್ನಾಟಕದಲ್ಲಿ ನೆಲೆಸಿರುವ ಇತರ ಭಾಷೆಗಳನ್ನು ಪ್ರೋತ್ಸಾಹಿಸಿ, ಅವುಗಳಿಗೂ ಅಧಿಕೃತ ಭಾಷೆಯ ಸ್ಥಾನಮಾನ ನೀಡಿದರೆ, ಏಕೀಕರಣ ಹಾಗೂ ರಾಜ್ಯೋತ್ಸವಕ್ಕೂ ಒಂದು ಅರ್ಥ ಸಿಕ್ಕಂತಾಗುತ್ತದೆ.

ಇಂದುಧರ್‌ ಹಳೆಯಂಗಡಿ
indudhar299@gmail.com

LEAVE A REPLY

Please enter your comment!
Please enter your name here