ಕಲಾ ಸ್ವರೂಪಿ ಅಕ್ಷತಾ ಕುಡ್ಲ

0
162
Tap to know MORE!

“ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾಡ್ರ್ಸ್” ಈವೆಂಟ್‍ನಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು. ಅದರಲ್ಲಿ ಮಿಮಿಕ್ರಿ ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದ 18 ಮಂದಿಗಳಲ್ಲಿ ಇವರು ಏಕೈಕ ಮಹಿಳೆಯಾಗಿದ್ದರು. ಆದರೂ ಎಲ್ಲರನ್ನು ಹಿಮ್ಮೆಟ್ಟಿಸಿ, ಕೇವಲ ಒಂದು ನಿಮಿಷದಲ್ಲಿ 40 ವಿವಿಧ ಸದ್ದುಗಳನ್ನು ಅನುಕರಣೆ ಮಾಡಿ ದಾಖಲೆಯ ಪುಟ ಸೇರಿದ್ದಾರೆ, ನಮ್ಮ ಮಂಗಳೂರಿನ ಅಕ್ಷತಾ ಕುಡ್ಲ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು, ಮರಕಡ ನಿವಾಸಿ ಸಿದ್ದು ಪೂಜಾರಿ ಮತ್ತು ಹರಿಣಾಕ್ಷಿ ದಂಪತಿಯ ಪುತ್ರಿ. ತಮ್ಮ ಶಾಲಾ ಶಿಕ್ಷಣವನ್ನು ಮಂಗಳೂರಿನಲ್ಲಿಯೇ ಪೂರೈಸಿದ ಇವರು, ಬಿಎ ಮತ್ತು ಬಿ.ಎಡ್ ಪದವಿಯನ್ನು ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಪಡೆದರು. ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು, ಪ್ರಸ್ತುತ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಾಲೆಯಲ್ಲಿರುವಾಗಲೇ ಹಾಡುಗಾರಿಕೆ ಮತ್ತು ಮಿಮಿಕ್ರಿಗಳನ್ನು ಮಾಡುತ್ತಿದ್ದ ಇವರು, ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಮಿಮಿಕ್ರಿ ಕಲೆಯನ್ನು ಇನ್ನೂ ಉತ್ತಮವಾಗಿ ಬೆಳೆಸಿಕೊಂಡರು. ಸ್ವರೂಪ ಕೇಂದ್ರದ ನಿರ್ದೇಶಕರಾದ ಗೋಪಾಡ್ಕರ್‍ರವರೇ ಇವರಿಗೆ ಸ್ಪೂರ್ತಿ. ಮಿಮಿಕ್ರಿಯಲ್ಲಿ ದಾಖಲೆ ಮಾಡುವ ಮುನ್ನ, ಅಕ್ಷತಾರವರು ರಾಜ್ಯ ಮಾತ್ರವಲ್ಲದೇ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲೂ ಮಿಂಚು ಹರಿಸಿದ್ದರು.
ಮಹಾರಾಷ್ಟ್ರ, ಕೇರಳ ಇತ್ಯಾದಿ ರಾಜ್ಯಗಳಲ್ಲಿ ಮಿಮಿಕ್ರಿ ಪ್ರದರ್ಶನವನ್ನು ನೀಡಿರುವ ಇವರು, ವಿದೇಶಗಳಲ್ಲೂ ಹತ್ತಾರು ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆ ಗಳಿಸಿದ್ದಾರೆ. ವಿಶ್ವ ತುಳು ಸಾಹಿತ್ಯ ಸಮ್ಮೇಳನ, ವಿಶ್ವ ಆಳ್ವಾಸ್ ನುಡಿಸಿರಿ ವಿರಾಸತ್, ಮಹಾಮಸ್ತಕಾಭಿಶೇಕದ ವೇದಿಕೆಗಳು ಇವರ ಪ್ರತಿಭೆಗೆ ಸಾಕ್ಷಿಯಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ನಡೆದ “ಎಕ್ಸ್‍ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್” ಈವೆಂಟ್‍ನಲ್ಲಿ, ಅಕ್ಷತಾರವರು ಕೇವಲ ಒಂದು ನಿಮಿಷದಲ್ಲಿ 40 ಕ್ಕೂ ಹೆಚ್ಚು ಮಿಮಿಕ್ರಿಗಳನ್ನು ಮಾಡುವ ಮೂಲಕ ಒಂದು ವಿಶಿಷ್ಟ ದಾಖಲೆಯನ್ನು ರಚಿಸಿದರು. ಅಲ್ಲಿ ನೆರೆದಿದ್ದ ಸಭಿಕರಲ್ಲದೆ, ತೀರ್ಪುಗಾರರೇ ಇವರ ವಿಶೇಷ ಕಲೆಯನ್ನು ಕಂಡು ಆಶ್ಚರ್ಯಪಟ್ಟಿದ್ದರು. ಈ ಅಸಾಧಾರಣ ಪ್ರತಿಭೆಯ ಮೂಲಕ ಒಂದು ವಿಶೇಷ ದಾಖಲೆ ಸೃಷ್ಟಿಸಿದ್ದಾರೆ.

ಅಕ್ಷತಾರವರು ಮಿಮಿಕ್ರಿ ಮಾತ್ರವಲ್ಲದೆ, ಹಾಡುಗಾರಿಕೆ ಮತ್ತು ನೃತ್ಯ ಕುಶಲತೆಯನ್ನೂ ಹೊಂದಿದ್ದಾರೆ. ಹಾಡುಗಾರಿಕೆಯಲ್ಲಿ ರಾಜ್ಯಮಟ್ಟದ ಯುವಜನ ಮೇಳಗಳಲ್ಲಿ ಬಹುಮಾನ ಪಡೆದಿರುವ ಇವರು, ಬೆಹ್ರೈನ್, ದುಬೈ ಮುಂತಾದ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ನೃತ್ಯ ಮತ್ತು ಮೈಮ್ ತರಬೇತಿಯನ್ನೂ ನೀಡಿ, ಅದರಲ್ಲೂ ಸೈ ಎನಿಸಿದ್ದಾರೆ. ಅದಲ್ಲದೆ ಯಕ್ಷಗಾನದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದುವರೆಗೆ 950ಕ್ಕೂ ಹೆಚ್ಚು ಮಕ್ಕಳ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಇವರು, ಯುವ ಮನಸ್ಸುಗಳಲ್ಲಿ ಸ್ಪೂರ್ತಿ ತುಂಬುವ ಚೇತನ ಶಕ್ತಿಯಾಗಿದ್ದಾರೆ.

“ವಾಹನಗಳ ಧ್ವನಿ, ಸಂಗೀತ ಉಪಕರಣಗಳು, ಪಕ್ಷಿಗಳ ಶಬ್ದಗಳು ಸೇರಿದಂತೆ ವಿವಿಧ ಶಬ್ದಗಳನ್ನು ನಾನು ಕೇವಲ ಒಂದು ನಿಮಿಷದಲ್ಲಿ ಅನುಕರಿಸಬಲ್ಲೆ. ಈ ಸ್ಪರ್ಧೆಯಲ್ಲಿ ನಾನು 40 ವಿಭಿನ್ನ ಶಬ್ದಗಳನ್ನು ಅನುಕರಿಸಿದೆ. ನಾನು ಗೋಪಡ್ಕರ್ ಶಾಲೆಯಲ್ಲಿ ಅನುಕರಿಸುವ ಕಲೆಯನ್ನು ಕಲಿತಿದ್ದೇನೆ ಮತ್ತು ವಿದ್ಯಾರ್ಥಿಗಳಲ್ಲಿ ಅನುಕರಿಸುವ ಕೌಶಲ್ಯಗಳನ್ನು ಬೆಳೆಸುವಲ್ಲಿ, ಅವರಿಗೆ ಬೆಂಬಲ ನೀಡಲು ಇದು ನನಗೆ ಸಹಾಯ ಮಾಡಿದೆ”

-ಅಕ್ಷತಾ ಕುಡ್ಲ

ಕಣ್ಣಾಮುಚ್ಚೆ ಅದರಾಚೆ ಮಕ್ಕಳ ಶಿಬಿರ

ಮತ್ತೊಂದು ವಿಶೇಷವೆಂದರೆ, ಕಾಡಿನ ನಡುವೆ ತಾವೇ ಸಂಘಟಿಸಿದ 10 ದಿನದ “ಕಣ್ಣಾ ಮುಚ್ಚಾಲೆ ಅದರಾಚೆ” ಮಕ್ಕಳ ಶಿಬಿರದ ಸಮಾರೋಪದಲ್ಲಿ ವಿಶಿಷ್ಟ ರೀತಿಯಲ್ಲಿ ವಿವಾಹವಾದ ಅಕ್ಷತಾರವರ ಪತಿ ಚೇತನ್ ಕೊಪ್ಪ. ಈ ಜೋಡಿ ಕಲರ್ಸ್ ಕನ್ನಡದ ಸೂಪರ್ ಮಿನಿಟ್ ನಲ್ಲಿಯೂ ಜನಮನ ಗೆದ್ದಿದ್ದಾರೆ. ಇವರ ಪತಿಯೂ “ಎಕ್ಸ್‍ಕ್ಲೂಸಿವ್ ವಲ್ರ್ಡ್ ರೆಕಾರ್ಡ್” ಈವೆಂಟ್‍ನಲ್ಲಿ ಒಂದು ದಾಖಲೆ ರಚಿಸಿದ್ದಾರೆ ಎಂಬುವುದು ಉಲ್ಲೇಖನೀಯ. ಅತ್ಯಲ್ಪ ಸಮಯದಲ್ಲಿ 1011 ಅಡಿ ಗಾತ್ರದ ಗಾಂಧೀಜಿಯ ಭಾವಚಿತ್ರವನ್ನು ರಚಿಸುವ ಮೂಲಕ ದಾಖಲೆ ರಚಿಸಿದ್ದಾರೆ. ಮುಂದೊಂದು ದಿನ 5050 ಅಡಿ ಗಾತ್ರದಲ್ಲಿ ಒಂದು ಭಾವಚಿತ್ರ ಪ್ರಕಟಿಸಿ, ತಮ್ಮ ದಾಖಲೆಯನ್ನು ಉತ್ತಮಪಡಿಸುವ ಇರಾದೆಯಲ್ಲಿದ್ದಾರೆ.

ಆಳ್ವಾಸ್ ಕಾಲೇಜಿನ ಕಲಾ ವಿಭಾಗದ ಹಳೇ ವಿದ್ಯಾರ್ಥಿನಿ ಇಂತಹ ಮಹತ್ತರ ಸಾಧನೆ ಮಾಡಿದ್ದಾರೆ ಅಂತ ತಿಳಿದು ಬಹಳ ಹೆಮ್ಮೆ ಎನಿಸುತ್ತಿದೆ. ಅಂದುಕೊಂಡಿರುವಂತಹ ಕೆಲಸಗಳನ್ನು ಮಾಡಿ ಪೂರೈಸುವ ಪ್ರತಿಭಾನ್ವಿತೆ ಮತ್ತು ಛಲಗಾರ್ತಿಯಾಗಿರುವ ಅಕ್ಷತಾ, ಮುಂದೆ ಗಿನ್ನೆಸ್ ರೆಕಾರ್ಡ್ ಮಾಡಬೇಕೆನ್ನುವ ಆಶಯದಲ್ಲಿದ್ದಾರೆ. ಅದನ್ನೂ ಕೂಡ ಸಾಧಿಸಿಯೇ ತೀರುತ್ತಾರೆ ಅನ್ನುವ ನಂಬಿಕೆ, ಆತ್ಮವಿಶ್ವಾಸ ನಮ್ಮಲ್ಲಿದೆ.
ಸಂಧ್ಯಾ ಕೆ.ಎಸ್(ನೆಚ್ಚಿನ ಉಪನ್ಯಾಸಕಿ) ,ಆಳ್ವಾಸ್ ಕಾಲೇಜ್

2017ರ ಜಿಲ್ಲಾ ಯುವ ಪ್ರಶಸ್ತಿ, ಕರಾವಳಿ ಐಡಲ್ 2013, 2009ರಲ್ಲಿ ತುಳು ಸಾಹಿತ್ಯ ಅಕಾಡೆಮಿಯ ರಂಗಿತ ಪ್ರಶಸ್ತಿಯೊಂದಿಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈಗಾಗಲೇ ಕೆಲವು ವಿಶಿಷ್ಟ ದಾಖಲೆ ಮಾಡಿರುವ ಅಕ್ಷತಾರವರು, ಮುಂದೊಂದು ದಿನ 300 ಕ್ಕೂ ಹೆಚ್ಚು ಹಾಡುಗಳನ್ನು 16 ಗಂಟೆಗಳ ಕಾಲ ನಿರಂತರವಾಗಿ ಹಾಡುವ ಮೂಲಕ ಮತ್ತೊಂದು ದಾಖಲೆ ರಚಿಸಲು ಯೋಜಿಸುತ್ತಿದ್ದಾರೆ. ಈ ವಿಶೇಷ ದಂಪತಿ
ಮತ್ತಷ್ಟು ದಾಖಲೆಗಳನ್ನು ರಚಿಸಿ, ನೂರಾರು ಯುವಕರಿಗೆ ಸ್ಪೂರ್ತಿ ಸಿಗಲಿ ಎಂಬ ಆಶಯ ನಮ್ಮದು.

LEAVE A REPLY

Please enter your comment!
Please enter your name here