ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂಪರ್ ಕೊಡುಗೆಗಳನ್ನು ಘೋಷಿಸಿದ ಯಡಿಯೂರಪ್ಪ

0
174
Tap to know MORE!

ಕಲಬುರಗಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಉತ್ಸವವನ್ನು ಉದ್ಘಾಟಿಸಿ, ತ್ರಿವರ್ಣ ಧ್ವಜವನ್ನು ಹಾರಿಸಿದರು.

ಇಂದು ಡಿಎಆರ್ ಪೊಲೀಸ್ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಿತು. ಸೆಪ್ಟೆಂಬರ್ 17ರಂದು ಆಚರಿಸಲಾಗುತ್ತಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವನ್ನು ಮರುಹೆಸರಿಸಲಾಗಿದ್ದು, ಇದನ್ನು ಕಳೆದ ವರ್ಷದಿಂದ ಕಲ್ಯಾಣ ಕರ್ನಾಟಕ ಉತ್ಸವ ಎಂದು ಆಚರಿಸಲಾಗುತ್ತಿದೆ.

ವಿಶೇಷ ವಿಮಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಕಲಬುರಗಿ ನಗರಕ್ಕೆ ಆಗಮಿಸಿದರು.

ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಈ ಭಾಗದ ಅಭಿವೃದ್ಧಿಯ ಶಕೆಗೆ ಹೊಸ ನಾಂದಿ ಹಾಡಲು ನನಗೆ ಸಂತೋಷವಾಗುತ್ತೆ ಎಂದು ಹೇಳಿ ತಮ್ಮ ಭಾಷಣದ ವೇಳೆ ಹಲವಾರು ಕೊಡುಗೆಗಳನ್ನು ಘೋಷಣೆ ಮಾಡಿದರು.

● ಸುಮಾರು 7.15 ಎಕರೆ ಪ್ರದೇಶದಲ್ಲಿ 150 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಶೋಧನಾ ಕಲಬುರಗಿ ಶಾಖೆ ಆಸ್ಪತ್ರೆಗೆ ಇಂದೇ ಶಂಕುಸ್ಥಾಪನೆ
● ಆಧುನಿಕ ಸೌಲಭ್ಯವನ್ನು ಹೊಂದಿರುವ ಈ ಆಸ್ಪತ್ರೆಯಿಂದ ಕಲಬುರಗಿ ಭಾಗದ ಜನತೆಗೆ ಬಹಳಷ್ಟು ಉಪಯೋಗವಾಗಲಿದೆ
● ಅಲ್ಲದೇ 3000 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಬುರಗಿ-ಬೀದರ್ ಜಿಲ್ಲೆಗೆ ಉಪಯೋಗವಾಗುವ ಕೃಷಿ, ಕುಡಿಯುವ ನೀರಿನ ಯೋಜನೆ
● ಕಾಗಿಣಿ ನದಿಗೆ ಹೊಂದಿಕೊಂಡು 10 ನೀರಾವರಿ ಯೋಜನೆಗೆ ಅನುಮೋದನೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಕೃಷಿಕರ ಜಮೀನಿಗೆ ನೀರಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಯನ್ನು ನೀಗಲಿದೆ.
● ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುವ ನಿಟ್ಟಿನಲ್ಲಿ ಸೂಕ್ತ ವಸತಿ ವ್ಯವಸ್ಥೆಯನ್ನು ಕಲ್ಪಿಸಲು 40 ಕೋಟಿ ರೂಪಾಯಿ ಬೆಲೆಬಾಳುವ 1 ಎಕರೆ ಜಮೀನು ಮಂಜೂರು – ಅಲ್ಲದೇ ಕಟ್ಟಡವನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಘೋಷಣೆ
● ಇದೇ ವರ್ಷ ಆರಂಭವಾದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಕೊರೊನಾ ಅವಧಿಯಲ್ಲೂ 300 ಕೋಟಿ ರೂಪಾಯಿ ಅನುಮೋದನೆ – ಈಗಾಗಲೇ 100 ಕೋಟಿ ಬಿಡುಗಡೆ
● ಮುಂಬರುವ ನಾಲ್ಕು ತಿಂಗಳ ಅವಧಿಯಲ್ಲಿ ಬಸವ ಕಲ್ಯಾಣ ಪ್ರಾಧಿಕಾರದ ಆಶ್ರಯದಲ್ಲಿ ಹಿರಿಯರ ಆಶಯದಂತೆ ಅನುಭವ ಮಂಟಪದ ಕಾರ್ಯವನ್ನು ಆರಂಭಗೊಳಿಸುವುದಾಗಿ ಭರವಸೆ
● ಬೆಳಗಾವಿಯ ಸುವರ್ಣ ಸೌಧಕ್ಕೆ ರಾಜ್ಯ ಮಾಹಿತಿ ಆಯೋಗ ಸೇರಿದಂತೆ ಪ್ರಮುಖ ಇಲಾಖೆಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ
● ರಾಯಚೂರು ಜಿಲ್ಲೆಯಲ್ಲಿ ಗೋರಪಳ್ಳಿಯಲ್ಲಿ 10,000 ಕೋಟಿ ರೂಪಾಯಿ ವೆಚ್ಚದ ಜಲವಿದ್ಯುತ್‌ ಯೋಜನೆಯು ಪರಿಶೀಲನೆಯ ಹಂತದಲ್ಲಿದ್ದು ನೆರೆ ರಾಜ್ಯದ ಜೊತೆ ಮಾತುಕತೆಯ ನಂತರ ಸೂಕ್ತ ನಿರ್ಧಾರ

ಎಲ್ಲಾ ಯೋಜನೆಗಳನ್ನು ಘೋಷಿಸಿದ ಬಳಿಕ, ” ಸಮಗ್ರ ಕಲ್ಯಾಣ ಅಭಿವೃದ್ಧಿಗಾಗಿ ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.

ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಲ್ಲಿ ಐತಿಹಾಸಿಕ ತಾಣಗಳನ್ನು ಅಭಿವೃದ್ಧಿಪಡಿಸಲು, ರಾಜ್ಯ ಸರ್ಕಾರವು ಈ ವರ್ಷದಿಂದ ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸುತ್ತಿದೆ

LEAVE A REPLY

Please enter your comment!
Please enter your name here