ಕ್ಯಾಲಿಕಟ್: ಕೊರೊನಾ ಸೋಂಕು ಹರಡುವ ಭೀತಿಯಿಂದ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹಲವಾರು ಕಡೆ ಮಾಸ್ಕ್ಗಳನ್ನು ಧರಿಸದವರಿಗೆ ದಂಡ ವಿಧಿಸುವ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮಾಸ್ಕ್ ಅನ್ನೇ ಬಂಡವಾಳ ಮಾಡಿರುವ ರಾಜ್ಯದ ಓರ್ವ ವ್ಯಕ್ತಿ, ತಾನು ಧರಿಸಿದ್ದ ಎನ್-95 ಮಾಸ್ಕ್ನೊಳಗೆ ಚಿನ್ನ ಬಚ್ಚಿಟ್ಟುಕೊಂಡು ಕಳ್ಳಸಾಗಣೆ ಮಾಡಲು ಮುಂದಾಗಿ ಸಿಕ್ಕಿಬಿದ್ದಿದ್ದಾನೆ.
ಕರ್ನಾಟಕ ಮೂಲದ ಅಮ್ಮರ್ ಎಂಬಾತ ದುಬೈನಿಂದ ಮಂಗಳವಾರ ಸಂಜೆ ಕ್ಯಾಲಿಕಟ್ಗೆ ಬಂದಿಳಿದಿದ್ದಾನೆ. ಈ ವೇಳೆ 40 ಗ್ರಾಂ ಚಿನ್ನವನ್ನ ಅಕ್ರಮವಾಗಿ ಸಾಗಿಸಲು ಅದನ್ನ ತಾನು ಧರಿಸಿಕೊಂಡಿದ್ದ ಮಾಸ್ಕ್ನೊಳಗೆ ಬಚ್ಚಿಟ್ಟುಕೊಂಡು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆದರೆ ಕಸ್ಟಮ್ಸ್ ಅಧಿಕಾರಿಗಳು ಚಾಣಾಕ್ಷತನದಿಂದ ಆತ ಮಾಸ್ಕ್ನೊಳಗೆ ಅಡಗಿಸಿಟ್ಟುಕೊಂಡಿದ್ದ ಚಿನ್ನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕಸ್ಟಮ್ಸ್ ಅಧಿಕಾರಿಗಳು “ಸ್ಮಗ್ಲರ್ಗಳು ಸಾಧ್ಯವಿರುವ ಎಲ್ಲ ರೀತಿಯಲ್ಲೂ ತಮ್ಮ ಕೈಚಳಕ ತೋರಿಸಲು ಮುಂದಾಗುತ್ತಾರೆ. ಆದರೆ ಮಾಸ್ಕ್ನೊಳಗೆ ಚಿನ್ನ ಬಚ್ಚಿಟ್ಟುಕೊಂಡು ಸ್ಮಗಲ್ ಮಾಡೋಕೆ ಮುಂದಾಗಿರುವುದು ಇದೇ ಮೊದಲು. ಕೊರೊನಾ ಹೆಚ್ಚಾದ ಮೇಲೆ ಇಂಥ ಪ್ರಯೋಗಗಳಿಗೆ ಸ್ಮಗಲ್ಗಳು ಇಳಿದಿದ್ದಾರೆ” ಎಂದಿದ್ದಾರೆ.