ಕಷ್ಟಗಳು ಅಲೆಗಳಂತೆ; ತಡೆಯಲು ಸಾಧ್ಯವಿಲ್ಲ, ಮೇಲೇರಿ ಹೋಗಬಹುದು: ಡಾ. ಸುಧಾ ಮೂರ್ತಿ

0
466
????????????????????????????????????
Tap to know MORE!

ಮಂಗಳೂರು: ಕಾಲೇಜು ಶಿಕ್ಷಣದ ಅಂತ್ಯ ಜೀವನದ ಆರಂಭವಷ್ಟೆ. ಸ್ಪರ್ಧೆಯಿಂದ ಕೂಡಿರುವ ಜಗತ್ತಿನಲ್ಲಿ ಅಲೆಗಳಂತೆ ಬರುವ ಕಷ್ಟಗಳನ್ನು ತಡೆಯಲು ಸಾಧ್ಯವಿಲ್ಲ, ಆದರೆ ಅವುಗಳ ಮೇಲೇರಿ ಹೋಗಬಹುದು… ಹೀಗೆಂದವರು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಪದ್ಮಶ್ರೀ ಡಾ. ಸುಧಾ ಮೂರ್ತಿ.

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಶನಿವಾರ ನಡೆದ 39ನೇ ಘಟಿಕೋತ್ಸವದಲ್ಲಿ ಮನದ ಮಾತಿಗೆ ಕಾಗದದ ಹಂಗೇಕೆ ಎಂದೇ ತಮ್ಮ ಪ್ರಧಾನ ಭಾಷಣ ಪ್ರಾರಂಭಿಸಿದ ಅವರು, ನಾವು ಜೀವನದಲ್ಲಿ ಶಾರ್ಟ್‌ಕಟ್‌ ನ್ನು ನಂಬಲೇಬಾರದು. ಬದುಕಿನಲ್ಲಿ ಕಷ್ಟಗಳು ಇರಲೇಬೇಕು, ಅವೇ ನಮಗೆ ಪಾಠ ಕಲಿಸುತ್ತವೆ, ಯಶಸ್ಸಿನ ಮೆಟ್ಟಿಲುಗಳಾಗುತ್ತವೆ ಎಂದು ತಮ್ಮ ಬದುಕನ್ನೇ ಉದಾಹರಣೆಯಾಗಿ ವಿವರಿಸಿದರು. ಇದೇ ವೇಳೆ ಕರಾವಳಿಗರು ಕಠಿಣ ಪರಿಶ್ರಮಿಗಳು ಎನ್ನಲು ಅವರು ಮರೆಯಲಿಲ್ಲ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕಠಿಣ ಪರಿಶ್ರಮ ಮತ್ತು ಸಿದ್ಧಾಂತ ಬದುಕನ್ನೇ ಬದಲಿಸಬಲ್ಲವು. ಕ್ರಿಕೆಟ್‌ ಪಂದ್ಯದಂತೆ, ಇಲ್ಲಿ ಹೊಂದಾಣಿಕೆ ಮುಖ್ಯ. ಜ್ಞಾನದ ಹಸಿವು ನಿಂತರೆ ನಾವು ವೃದ್ಧರಾದಂತೆ, ಎಂದ ಅವರು ವಿಶ್ವವಿದ್ಯಾನಿಲಯಗಳು ಮತ್ತು ವಿದ್ಯಾರ್ಥಿಗಳ ನಡುವೆ ಪ್ರೀತಿಯಿರಬೇಕು. ಉದ್ಯೋಗ ಪಡೆದು, ದುಡಿದು ಗಳಿಸಿದ ಹಣದಲ್ಲಿ ಒಂದು ಪಾಲು ನಮ್ಮ ವಿಶ್ವವಿದ್ಯಾನಿಲಯಗಳಿಗಿರಲಿ. ಹಿರಿಯರ ಮೇಲಿನ ಪ್ರೀತಿ, ಸಮಾಜಕ್ಕೆ ನಾವು ನೀಡುವ ಕೊಡುಗೆ ಅಹಂಕಾರ ತೊಲಗಿಸಿ, ಸಂತೋಷ ನೀಡುತ್ತದೆ, ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ (ಪ್ರಭಾರ), ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್‌ ಧರ್ಮ ವಾರ್ಷಿಕ ವರದಿ ಮಂಡಿಸುವುದರ ಜೊತೆಗೆ, ವಿಶ್ವವಿದ್ಯಾನಿಲಯದ ಮುಂದಿನ ಹೆಜ್ಜೆಗಳ ಬಗ್ಗೆ ಬೆಳಕು ಚೆಲ್ಲಿದರು. ಈ ಬಾರಿ ವಿದೇಶಿಗರೂ ಸೇರಿದಂತೆ 117 ಮಂದಿಗೆ ಪಿ.ಹೆಚ್.ಡಿ ಪದವಿ ಪ್ರಧಾನ ಮಾಡಲಾಯಿತು. 10 ಮಂದಿಗೆ ಚಿನ್ನದ ಪದಕ ಮತ್ತು ವಿವಿಧ ಕೋರ್ಸುಗಳ ಒಟ್ಟು 188 ರ‍್ಯಾಂಕ್‌ಗಳÀಲ್ಲಿ ಪ್ರಥಮ ರ‍್ಯಾಂಕ್ ಪಡೆದ 69 ಮಂದಿಗೆ ರ‍್ಯಾಂಕ್ ಪ್ರಮಾಣ ಪತ್ರ ನೀಡಲಾಯಿತು.

ಈ ಬಾರಿಯ ಘಟಿಕೋತ್ಸವದಲ್ಲಿ ಯಾರಿಗೂ ಗೌರವ ಡಾಕ್ಟರೇಟ್‌ ನೀಡಲಾಗಿಲ್ಲ. ಕೊವಿಡ್‌ ನಿಯಮಾವಳಿ ಹಿನ್ನಲೆಯಲ್ಲಿ ಪಿ.ಹೆಚ್.ಡಿ. ಪಡೆದವರು, ಚಿನ್ನದ ಪದಕ ವಿಜೇತರು ಮತ್ತು ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಸ್ವಯಂ ಹಾಜರಾಗಿ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಕಾರ್ಯಕ್ರಮವನ್ನು ಯೂ ಟ್ಯೂಬ್‌, ಫೇಸ್‌ ಬುಕ್‌ ಮುಖಾಂತರ ನೇರ ಪ್ರಸಾರ ಮಾಡಲಾಯಿತು.

ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯರು, ವಿದ್ಯಾವಿಷಯಕ ಪರಿಷತ್‌ ಸದಸ್ಯರು, ವಿವಿಧ ನಿಖಾಯಗಳ ಡೀನ್‌ಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಧನಂಜಯ ಕುಂಬ್ಳೆ ಮತ್ತು ಪ್ರೊ. ರವಿಶಂಕರ್‌ ರಾವ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here