ನಮ್ಮ ಕಷ್ಟಗಳಿಗೂ ಮಿಗಿಲಾದ ಕಷ್ಟ ಇತರರಿಗಿದೆ!

0
157
Tap to know MORE!

ಫೋನ್ ಕರೆಯಲ್ಲಿ ಮಗ್ನಳಾದ ದೀಪಾಳ ನಯನಗಳು ಒಂದು ಬಾರಿ ಗಡಿಯಾರದ ಕಡೆ ದೃಷ್ಟಿ ಬೀರಿತು. ಮಧ್ಯಾಹ್ನದ ವೇಳೆ ಅದಾಗಲೇ ಗಂಟೆ ಒಂದುವರೆ ಆಗಿತ್ತು. ಊಟವನ್ನು ಇನ್ನೂ ಮುಗಿಸಿರಲಿಲ್ಲ. ಬಂದಿರುವ ಕರೆ ನಾನು ಕೈಗೊಂಡ ಕೆಲಸವನ್ನು ಹಾಳುಗೆಡವಲು ಬಂದಿರುವಂತೆ ಆಕೆಗೆ ಭಾಸವಾಯಿತು. ತನ್ನ ಗೆಳತಿಗೆ ಸಹಾಯಹಸ್ತ ನೀಡಲು ಒಪ್ಪಿಗೆ ಸೂಚಿಸಿರುವುದು, ಅದರಂತೆ ನಾನು ಆಕೆಯ ಜವಾಬ್ದಾರಿಯನ್ನು ನಿಭಾಯಿಸುವುದು ಆಕೆಯ ಮೊದಲ ಆದ್ಯತೆ ಆಗಿತ್ತು. ತಾನು ಸರಿಯಾಗಿ 4 ರ ವೇಳೆಗೆ ದೇವಸ್ಥಾನ ತಲುಪುತ್ತೇನೆ ಎಂದು ಆಕೆಗೆ ಭರವಸೆಯ ಮಾತುಗಳನ್ನು ನೀಡಿದ್ದರಿಂದ, ದೀಪ ಫೋನ್ ಕರೆಯಲ್ಲಿ ನನಗೆ ಬೇರೆ ಅರ್ಜೆಂಟ್ ಕೆಲಸವಿದೆ ಎಂದು ಹೇಳಿ ತಕ್ಷಣ ಕರೆಯನ್ನು ಕಟ್ ಮಾಡಿ, ಒಂದೆರಡು ಅಗಳನ್ನು ಬೇಗಬೇಗನೆ ಉಂಡು, ತನ್ನ ಅವಶ್ಯ ಬಟ್ಟೆಗಳನ್ನು ಬ್ಯಾಗ್ ಗೆ ಹಾಕುತ್ತಾ ತಾನು ಹೊರಟು ಬಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಳು.

ಅಲ್ಲೇ ಬಸ್ಟಾಂಡ್ ಸಮೀಪ ಹೂವಿನ ಅಂಗಡಿಯಿಂದ ದೇವರಿಗೆ ಕೊಡಲು ಮಲ್ಲಿಗೆ ಸೇವಂತಿಗೆ ಖರೀದಿಸಿ ಬಳಿಕ ಬಸ್ಸನ್ನೇರಿದಳು. ದೇವಸ್ಥಾನಕ್ಕೆ ತಲುಪಲು ಮೂರು ಬಸ್ಸನ್ನು ಹತ್ತಿ ಇಳಿಯಬೇಕಾದ ಸಂದಿಗ್ಧ ಪರಿಸ್ಥಿತಿ ಬಂದೊದಗಿತ್ತು. ತಾನಿರುವ ಬಸ್ ತಲುಪಲು ಇನ್ನೂ 20 ನಿಮಿಷಗಳ ಕಾಲಾವಕಾಶ ಬೇಕಾಗಿತ್ತು. ಅಷ್ಟರಲ್ಲಿ ತನ್ನ ಗೆಳತಿಯ ಫೋನ್ ಕರೆ “ದೀಪ ನಾನು ದೇವಸ್ಥಾನ ತಲುಪಿರುತ್ತೇನೆ. ನೀನು ಎಲ್ಲಿದ್ದಿ?” ಪೂರ್ಣಳ ಪ್ರಶ್ನೆಗೆ ದೀಪ “ನಾನು ಇನ್ನು ದೇವಸ್ಥಾನ ತಲುಪಲು ಇನ್ನೂ ಇಪ್ಪತ್ತು ನಿಮಿಷಗಳು ಬೇಕಾಗುವುದು. ನೀನು ದೇವಸ್ಥಾನದಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕಿಕೊಂಡು, ಪ್ರಾರ್ಥನೆ ಸಲ್ಲಿಸುವ ಕಾರ್ಯವನ್ನು ಮುಂದುವರಿಸು”,ಎಂದಾಗ ಪೂರ್ಣ ಸರಿ ಎಂದು ತನ್ನ ಕೆಲಸದತ್ತ ಗಮನಹರಿಸಿದಳು.

ಇದನ್ನೂ ಓದಿ: ಕೊರೋನಾ ಕಳವಳದ ನಡುವೆಯೂ ಸೇವಾ ಮನೋಭಾವ

ದೇವಸ್ಥಾನ ತಲುಪುತಿದ್ದಂತೆ ದೀಪಳಿಗೆ ಒಂದು ವಿಧದ ಸಂತೋಷ. ಬಸ್ಸಿನಿಂದ ಇಳಿಯುತ್ತಿದ್ದಂತೆ ಪೂರ್ಣ ದೀಪಾಳ ಬಳಿ ಬಂದು “ನಿನ್ನ ಬ್ಯಾಗು ಕೊಡು. ರೂಮಿನಲ್ಲಿ ಇಟ್ಟು ಬರುತ್ತೇನೆ ನೀನು ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈಮುಗಿದು ಬಾ” ಎಂದಾಗ ಆಕೆ ತನ್ನ ಬ್ಯಾಗ್ ನ್ನು ಆಕೆಯ ಕೈಗಿತ್ತಳು.

ದೀಪ ದೇವಾಲಯದ ಒಳಗಡೆ ಪ್ರವೇಶಿಸಿ, ತಾಯಿ ಜಗನ್ಮಾತೆಯ ದಿವ್ಯ ಮುಖವನ್ನು ಒಂದು ಬಾರಿ ದಿಟ್ಟಿಸಿ ನೋಡಿದಳು. ಅಮ್ಮನ ಮುಖದಲ್ಲಿ ಅದೇನೋ ಕಳೆ, ತೇಜಸ್ಸು. ತನ್ನ ಮನದ ಸಂಕಟವನ್ನೆಲ್ಲ ತಾಯಿಯ ಬಳಿ ಹೇಳಿಕೊಂಡಾಗ, ಕಣ್ಣಾಲಿಗಳು ಒದ್ದೆಯಾದವು. ಆಕೆಗೆ ದುಃಖ ಉಕ್ಕಿ ಉಕ್ಕಿ ಬರತೊಡಗಿತು. ದೇವಸ್ಥಾನಕ್ಕೆ ಬರುತ್ತಿರಬೇಕಾದರೆ ಫೋನ್ ಕರೆ ಮುಖಾಂತರ ತನ್ನನ್ನು ನಿಂದಿಸಿ, ಅವ್ಯಾಚ್ಯ ಶಬ್ದಗಳಿಂದ, ಮಾಡದ ತಪ್ಪಿಗೆ ಕೆಟ್ಟದಾಗಿ ಹೀನಾಯವಾಗಿ ಮಾತನಾಡಿರುವುದು, ಇವೆಲ್ಲವೂ ತಾಯಿಗೆ ಸಮರ್ಪಣೆ ಎಂದು ಕಣ್ಣೀರ ಸುರಿಮಳೆಗರೆದಳು. ನಿಶ್ಶಬ್ಧ ವಾತಾವರಣ. ಆಕೆಯ ಪ್ರಾರ್ಥನೆ ಆಲಿಸಿದ ದೇವಿಯ ಮೂರ್ತಿಯಿಂದ ಒಂದು ಹೂವು ಮೆಲ್ಲನೆ ಕೆಳಗೆ ಬೀಳುತ್ತಲ್ಲೆ , ದೇವಿಯು ಈಕೆಯ ಮನೋ ಸಂಕಲ್ಪಗಳಿಗೆ ತಥಾಸ್ತು ಅಂದುಬಿಟ್ಟಿದ್ದಳು. ತೀರ್ಥಪ್ರಸಾದದ ಬಳಿಕ ದೇವಸ್ಥಾನದ ಹೊರಬಂದಾಗ ಗೆಳತಿ ಪೂರ್ಣಳ ಭೇಟಿಯಾದಾಗ “ಪೂರ್ಣ ಇಲ್ಲಿ ಹತ್ತಿರದಲ್ಲೆ ಇನ್ನೊಂದು ದೇವಾಲಯವಿದೆ. ಅಲ್ಲಿಗೆ ಹೋಗೋಣ” ಎಂದಾಗ ಅದಕ್ಕೆ ಆಕೆ ಒಪ್ಪಿಗೆ ಸೂಚಿಸಿದಳು. ಆ ದೇವಾಲಯಕ್ಕೆ ಒಂದೆರಡು ನಿಮಿಷಗಳ ನಡಿಗೆಯ ಹಾದಿ ಹೀಗೆ ಇವರೀರ್ವರ ಸಮೇತ ಪೂರ್ಣಳ ಮಕ್ಕಳು ಸಹ ಗದ್ದೆ ಬಯಲಾಗಿ ನಡೆದು ಹೋಗುತ್ತಿರುವಾಗ, ಪೂರ್ಣ ದೀಪಳಿಗೆ ಬಸ್ಸಿನಲ್ಲಿ ತಾನು ಬರುತ್ತಿರಬೇಕಾದರೆ ನಡೆದ ಒಂದು ಸನ್ನಿವೇಶವನ್ನು ವಿವರಿಸಿದಳು.

ಬಸ್ಸಿನಲ್ಲಿ ಪೂರ್ಣ ಕುಳಿತ ಸೀಟಿನ ಪಕ್ಕದಲ್ಲೇ ಯುವತಿಯೋರ್ವಳು ತನ್ನ ಮೂರು ಮಕ್ಕಳ ಜೊತೆ ಇದ್ದಳು. ಒಂದು ಹೆಣ್ಣು ಮಗು ತುಂಬಾ ಚಿಕ್ಕದು – ಆರು ತಿಂಗಳ ಮಗು ಅವಳ ಕೈಯಲ್ಲಿತ್ತು. ಇನ್ನೆರಡು ಮಕ್ಕಳು ತನ್ನ ಪಕ್ಕದಲ್ಲಿ ನಿಂತಿದ್ದರು. ಯುವತಿ ಫೋನಿನಲ್ಲಿ ತುಂಬಾ ಸಂಕಟದಲ್ಲಿ ದುಃಖದಿಂದ ನೋವಿನಿಂದ ಮಾತನಾಡುತ್ತಿದ್ದಳು. ಇದನ್ನೆಲ್ಲ ಆಲಿಸುತ್ತಿದ್ದ ಪೂರ್ಣಳ ಮನಸು ಒಂದು ಬಾರಿ ಪ್ರಪಂಚದಲ್ಲಿ ತನಗಿಂತಲೂ ಕಷ್ಟದಲ್ಲಿರುವವರು ಎಷ್ಟೋ ಜನ ಇದ್ದಾರಲ್ಲ ಎಂದು ಯೋಚಿಸತೊಡಗಿತು. ಅವಳ ಕಥೆಯನ್ನು ಕೇಳಿದಳು. ಕುಟುಂಬದ ಎಲ್ಲಾ ಸಮಸ್ಯೆಗಳನ್ನು, ಗಂಡ ತನ್ನಲ್ಲಿ ನೋಡಿಕೊಳ್ಳುವುದನ್ನು, ಆತ ಬೇರೊಂದು ಮಹಿಳೆಯ ಜೊತೆ ಸಂಪರ್ಕದಲ್ಲಿರುವುದು, ತಾನು ತನ್ನ ಮೂವರು ಮಕ್ಕಳು ಬೀದಿಪಾಲಾಗಿರುವ ವ್ಯಥೆಯ ಕಥೆಯನ್ನ ಹೇಳಿ ಕಣ್ಣೀರಿಟ್ಟಾಗ, ಪೂರ್ಣ ಆಕೆಗೆ ಸಾಂತ್ವನದ ಮಾತುಗಳನ್ನು ಆಡಿದಳು. ಪೂರ್ಣ ಜೀವನವು ಅದಕ್ಕಿಂತಲೂ ಭೀಕರವಾಗಿತ್ತು. ಆದರೂ ಒಂದು ಬಾರಿ ತನ್ನಲ್ಲೇ ತಾನು ಸಮಾಧಾನಪಟ್ಟಳು. ಈಕೆಗೆ ಮೂರು ಮಕ್ಕಳಲ್ಲಿ ಹೆಣ್ಣುಮಗುವಿದೆ. ತನಗಾದರೆ ಗಂಡು ಮಾತ್ರ ಇರುವುದರಿಂದ ಅದೊಂದು ವಿಷಯದಲ್ಲಿ ತಾನು ಭಾಗ್ಯಶಾಲಿ ಎಂಬ ಒಂದು ಸಣ್ಣ ಸಮಾಧಾನ ಆಗಿದೆ. ಪೂರ್ಣ ಹೇಳಿದ ಕಥೆಯನ್ನೆಲ್ಲ ಆಲಿಸಿದ ದೀಪಳ ಮನಸು ಒಂದು ಬಾರಿ ನೊಂದಿತು.

ಇತ್ತ ದೇವಸ್ಥಾನ ತಲುಪುತ್ತಿದ್ದಂತೆ, ಪೂರ್ಣಳ ಮಾತುಗಳನ್ನಾಲಿಸಿದ ದೀಪ ಹೇಳತೊಡಗಿದಳು. ನೋಡು ಅಲ್ಲಿ ಬೆಂಚಿನ ಮೇಲೆ ಕುಳಿತ ಮಹಿಳೆ ಆಕೆಯ ಗಂಡ ಒಂದು ಉತ್ತಮ, ಉನ್ನತ ನೌಕರಿಯಲ್ಲಿದ್ದು ಸಮಾಜಕ್ಕೆ ನ್ಯಾಯ ಒದಗಿಸಬೇಕಾದ ವ್ಯಕ್ತಿ. ಆತ ಈಗ ನಾಲ್ಕು ಮದುವೆಯಾಗಿ ಈಕೆಯನ್ನು ತ್ಯಜಿಸಿ ಈಕೆ ಹಾಗೂ ಮಕ್ಕಳು ಅನಾಥರಾಗಿದ್ದಾರೆ. ಪ್ರಪಂಚದಲ್ಲಿ ಇದಕ್ಕಿಂತಲೂ ಕಷ್ಟದಲ್ಲಿ ನೋವಿನಲ್ಲಿರುವ ಜನ ಅನೇಕರಿದ್ದಾರೆ .ನಾವು ನಮ್ಮ ಕಷ್ಟವನ್ನು ಕಷ್ಟ ಕಷ್ಟ ಎಂದು ಆ ದೇವರು, ಈ ದೇವರನ್ನು ಬೇಡುತ್ತೇವೆ, ಪ್ರಾರ್ಥಿಸುತ್ತೇವೆ, ಬೈಯುತ್ತೇವೆ. ನಮಗಿಂತಲೂ ಕಷ್ಟದಲ್ಲಿರುವ ಅನೇಕ ಕುಟುಂಬಗಳಿವೆ.

ಪೂರ್ಣಗೆ ಆಗ ಹೌದು ಜೀವನ ನಮ್ಮ ಕೈಯಲ್ಲೇ ಇದೆ ಅದನ್ನು ಯಾವ ರೀತಿ ಹೇಗೆ ನಿಭಾಯಿಸಬೇಕು ಎಂಬುದು ನಮಗೆ ತಿಳಿದಿರಬೇಕು ಎಂದು ಗೊತ್ತಿದ್ದರೂ ಕೆಲವರು ಮೂರು ಲೋಕಗಳ ಒಡೆಯ ನಾನೇ ಎಂಬ ಭ್ರಮೆಲಿ ಮೋಸ, ವಂಚನೆಗಳ ನಡುವೆ ದುರಂಕಾರದಿಂದ ಬದುಕುತ್ತಾರೆ. ಪರಿವರ್ತನೆ ಜಗದ ನಿಯಮ, ಲೋಕಃ ಭಿನ್ನ ರುಚಿ.

ಬರಹ : ಶ್ರೀಮತಿ ರೇಖಾ ಸುದೇಶ್ ರಾವ್

LEAVE A REPLY

Please enter your comment!
Please enter your name here