‘ಕಸ’ ಎಂಬುದೊಂದು ವಿಸ್ತಾರವಾದ ವಿಷಯ..!

0
5509
Tap to know MORE!

ಅದು ತಿಂಗಳ ೫ನೇ ಭಾನುವಾರ. ಯೋಜನೆಯಂತೆ, ಏನಾದರೂ ಸೇವಾ ಕಾರ್ಯಗಳು ನಡೆಯಬೇಕೆಂದು ನಿಶ್ಚಯವಾಯಿತು. ಅದಕ್ಕಾಗಿ ಒಂದು ಕಸದ ರಾಶಿ ಬಿದ್ದಿದ್ದ ಪ್ರದೇಶವನ್ನು ಆಯ್ಕೆ ಮಾಡಿ, ಅಲ್ಲಿ ಕಸ ಹೆಕ್ಕಲು ಶುರು ಮಾಡಿದಂತೆ, ಏನೆಲ್ಲಾ ಸೊತ್ತುಗಳು ಕಸವಾಗುತ್ತದೆ ಎಂಬುವುದು ತಿಳಿಯುತ್ತಾ ಹೋಯಿತು. ತಂಬಾಕು, ಚಾಕಲೇಟಿನ ಪ್ಲಾಸ್ಟಿಕ್‌ನಿಂದ ಹಿಡಿದು, ಗೋಣಿಚೀಲದೊಳಗೆ ಒಂದು ನಾಯಿಯ ಶವವೂ ಅಲ್ಲಿ ಕಸದ ರೂಪದಲ್ಲಿ ಬಿದ್ದಿತ್ತು! ಮನುಷ್ಯ ಎಷ್ಟು ಕೀಳು ಮಟ್ಟಕ್ಕೆ ಇಳಿಯಬಹುದು ಎಂಬುವುದು ಊಹಿಸಲೂ ಅಸಾಧ್ಯ ಎಂಬುವುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ!

ಅಲ್ಲೊಂದು ಸೇತುವೆ. ಅದರ ಬಳಿ ಬಿದ್ದಿದ್ದ (ಬಿಸಾಕಿದ್ದ) ಕಸದ ರಾಶಿಯನ್ನು ಒಂದು ವರ್ಷದ ಹಿಂದೆಯಷ್ಟೇ ಒಂದೆರಡು ಸಂಘ-ಸAಸ್ಥೆಯವರು ಸೇರಿ ಸ್ವಚ್ಛಗೊಳಿಸಿದ್ದರು. ಪರಿಸರದ ಸ್ವಚ್ಛತೆ ಎಂಬುವುದು ಒಂದೆಡೆಯಾದರೆ, ಅವರಿಗೆ ಅದೊಂದು ಸಮಾಜ ಸೇವೆ ಮಾಡಿದ ತೃಪ್ತಿ. ಆದರೆ ಮುಂದಿನ ದಿನಗಳಲ್ಲಿ ಆ ಪ್ರದೇಶದಲ್ಲಿ ಯಾರು ಕಸ ಹಾಕುತ್ತಾರೆ ಎಂದು ನೋಡಿಕೊಂಡು ಕುಳಿತುಕೊಳ್ಳಲು ಅಂತೂ ಸಾಧ್ಯವಿಲ್ಲ. ಸ್ವಚ್ಛತಾ ಕಾರ್ಯ ಕೈಗೊಂಡ ಸಂಸ್ಥೆಯವರಿಗೂ ಅದರಿಂದ ಏನೂ ಲಾಭವಿಲ್ಲ! ಕಸಗಳು ಬಿದ್ದರಷ್ಟೇ ಅಲ್ವೇ ಅವರಿಗೂ ಒಂದು ಸ್ವಚ್ಛತಾ ಕಾರ್ಯ ಕೈಗೊಳ್ಳುವ ಸದಾವಕಾಶ ಸಿಗೋದು! ಅದೇನೇ ಇರಲಿ. ‘ಕಸ’ ಎಂಬುವುದರ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎಂದು ತಿಳಿದುಕೊಂಡು ಅದರಲ್ಲಿ ಪಿ.ಎಚ್‌ಡಿಯನ್ನೂ ಮಾಡಬಹುದು.

ಚಾಕಲೇಟ್ ಬಿಸ್ಕಿಟ್ ಪ್ಲಾಸ್ಟಿಕ್‌ಗಳು, ಮದ್ಯದ ಬಾಟಲಿಗಳು ಸರ್ವೇ ಸಾಮಾನ್ಯ!
ಇದು ಎಲ್ಲರಿಗೂ (ಬಿಸಾಕುವವರಿಗೂ, ಹೆಕ್ಕುವವರಿಗೂ..!) ಗೊತ್ತಿರುವಂತದ್ದೇ. ನಮ್ಮಲ್ಲೇ ಯಾರಾದರೂ ಇರುತ್ತಾರೆ. ಚಾಕಲೇಟು ತಿನ್ನುವುದು. ಅಲ್ಲೇ ಬೀದಿಯಲ್ಲಿ ಪ್ಲಾಸ್ಟಿಕ್ ಬಿಸಾಡುವುದು. ಕೇಳಿದರೆ, ಅದೊಂದು ಸಣ್ಣ ತುಂಡು ಎಂದು ಹೇಳುತ್ತಾರೆ. ಆದರೆ ಅವರಿಗೆಲ್ಲಿ ಅರ್ಥವಾಗಬೇಕು. ಎಲ್ಲರದ್ದೂ ಸಣ್ಣ ಸಣ್ಣ ತುಂಡು ಸೇರಿದಾಗ ಅದು ದೊಡ್ಡ ಆಗುವುದೆಂದು..! ಅದಲ್ಲದೆ, ಮದ್ಯಪಾನ, ಧೂಮಪಾನ ಮಾಡಿ ಅದನ್ನೂ ರಸ್ತೆ ಪಕ್ಕದಲ್ಲೇ ಬಿಸಾಡುವವರಿಗೇನೂ ಕಮ್ಮಿಯಿಲ್ಲ. ನಾವು ಕಸ ಹೆಕ್ಕಿ ಮುಗಿದು ನೋಡಿದಾಗ, ನಾಲ್ಕು ಚೀಲ ಮದ್ಯದ ಬಾಟಲಿಗಳೇ ಇದ್ದವು! ಸಾಮಾನ್ಯವಾಗಿ ಸ್ವಚ್ಛತಾ ಕಾರ್ಯಗಳನ್ನು ಮಾಡುವ ಸಂಘ-ಸAಸ್ಥೆಯವರಿಗೇ ಈ ಕಸಗಳು ಸಿಗುವಂತದ್ದೇ!

ಒAದಷ್ಟು ಮಾತ್ರೆ-ಔಷಧಿಗಳೂ ಸಿಕ್ಕಿದವು..!
ಕಸ ಎಂದರೆ ಮನೆಯಲ್ಲಿ ಬೇಡವಾದ ಪ್ಲಾಸ್ಟಿಕ್ ವೇಸ್ಟ್ಗಳು, ಹರಿದು ಹೋದ ಬಟ್ಟೆಗಳು, ಚೀಲಗಳು ಎಂಬುವುದು ನಿಮ್ಮ ಮನಸ್ಸಿನಲ್ಲಿದ್ದರೆ ಅದನ್ನೂ ಈ ಕೂಡಲೇ ತೆಗೆದು ಹಾಕಿ! ಓಪನ್ ಮಾಡದೇ ಇರುವ ಮಾತ್ರೆಗಳು, ಔಷಧಿಗಳು, ಐ-ಡ್ರಾಪ್‌ಗಳೂ ಕೆಲವರ ಪಾಲಿಗೆ ಕಸವಾಗಿರುತ್ತದೆ ಎಂಬುವುದು ನಮ್ಮ ಅರಿವಿಗೆ ಬಂತು. ಅದರ ಡೇಟ್ ಎಕ್ಸ್ಪೈರ್ ಆಗಿದ್ದಿದ್ದರೆ, ಅದು ಬೇರೆ ಲೆಕ್ಕ. ಆದರೆ, ಎಲ್ಲವೂ ಸರಿಯಾಗಿದ್ದರೂ ಅದನ್ನು ಬಿಸಾಡಿದ್ದಾರೆ ಎಂದರೆ ಏನರ್ಥ!! ಉಚಿತ ಆರೋಗ್ಯ ತಪಾಸಣೆ ನಡೆಸುವವರು, ಒಂದಷ್ಟು ಮಾತ್ರೆ-ಔಷಧಿಗಳನ್ನು ನಾವು ಉಚಿತವಾಗಿ ಜನರಿಗೆ ಕೊಟ್ಟಿದ್ದೇವೆ ಎಂಬ ಲೆಕ್ಕ ಕೊಟ್ಟುಬಿಟ್ಟು, ಆ ಹಣವನ್ನು ಆಯೋಜಕರಿಂದ ವಸೂಲಿ ಮಾಡುವ ತಂತ್ರಗಾರಿಕೆ ಇದಾಗಿರಬಹುದೇನೋ ಎಂದು ನನಗನಿಸಿತು!

ಗೋಣಿಚೀಲದೊಳಗೆ ನಾಯಿಯ ಶವವನ್ನು ಹಾಕಿ ಬಿಸಾಡಿದ್ದಾರೆ ಕಣ್ರೀ..!
ಯಾವುದೋ ಒಂದು ಬೀದಿನಾಯಿ ಎಲ್ಲೋ ರಸ್ತೆ ಮೂಲೆಯಲ್ಲಿ ಸಾವನ್ನಪ್ಪಿದ್ದರೆ ಅದನ್ನು ಅನಾಹುತ ಎಂದು ಒಪ್ಪಬಹುದು. ಆದರೆ ಒಂದು ಗೋಣಿಚೀಲದೊಳಗೆ ಸತ್ತಿರುವ ನಾಯಿಯ ಶವವನ್ನು ಹಾಕಿ, ಚೀಲವನ್ನು ಕಟ್ಟಿಹಾಕಿ ರಸ್ತೆ ಪಕ್ಕ ಬಿಸಾಡಿದ್ದಾರೆ ಎಂದರೆ ಅವರ ಮನಸ್ಥಿತಿ ಎಂತಹದ್ದಾಗಿರಬಹುದು ಅಲ್ವಾ! ತಮ್ಮ ಮನೆಯಲ್ಲಿ ಸಾಕಲು ಆಗುತ್ತೆ. ಆದರೆ, ಅದನ್ನು ತಮ್ಮದೇ ಮನೆಯಲ್ಲಿ ಅಥವಾ ಯಾವುದಾದರು ಒಂದು ಬಯಲು ಪ್ರದೇಶದಲ್ಲಿ ಹೂತು ಹಾಕುವುದಕ್ಕೆ ಆಗುವುದಿಲ್ವಾ ಅವರಿಗೆ!? ಇದನ್ನು ಕಂಡಾಗ, ಕೊರೋನಾ ಸಾಂಕ್ರಾಮಿಕ ರೋಗ ಬಹಳ ವೇಗವಾಗಿ ಹರಡುತ್ತಿದ್ದ ಸಂದರ್ಭ ಮರಣ ಹೊಂದಿದ ಸೋಂಕಿತರ ಮೃತದೇಹವನ್ನು ಕಸದ ರೂಪದಲ್ಲಿ ಬಿಸಾಡುತ್ತಿದ್ದ ಚೆತ್ರಗಳು ನನ್ನ ತಲೆಗೆ ಹೊಳೆದಿರುವುದಂತೂ ಸುಳ್ಳಲ್ಲ..!

ಒಂದುವರೆ ಘಂಟೆಗಳ ಕಾಲ ನಡೆದ ಸ್ವಚ್ಛತಾ ಕಾರ್ಯದಲ್ಲಿ ಒಟ್ಟು ಸುಮಾರು ೪೦ ಗೋಣಿಚೀಲದಷ್ಟು ಕಸಗಳು ಒಟ್ಟುಗೊಂಡವು. ಅವುಗಳನ್ನು ಕಸ ವಿಲೇವಾರಿ ಘಟಕಕ್ಕೆ ತಲುಪಿಸಿ, ಮನೆಗೆ ಬಂದು ರಿಫ್ರೆಶ್ ಆದರೂ, ತಲೆಯಲ್ಲಿ ಮೂಡುತ್ತಿದ್ದ ಒಂದೇ ಒಂದು ಪ್ರಶ್ನೆ…. “ಒಂದು ದಿನ ನಾನೂ ಕಸವಾಗುತ್ತೇನಾ..?” ಎಂದು!

ಇಂದುಧರ್ ಹಳೆಯಂಗಡಿ

LEAVE A REPLY

Please enter your comment!
Please enter your name here