ಕಾಂಗ್ರೆಸ್ ಮಧ್ಯಂತರ ಮುಖ್ಯಸ್ಥೆ ಸೋನಿಯಾ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಮುಖ್ಯಸ್ಥರ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆಯ ಪ್ರಕ್ರಿಯೆ ಹಾಗೂ ಪಕ್ಷವನ್ನು ಮುಂದುವರಿಸಿಕೊಂಡು ಹೋಗಲು ಅನುವು ಮಾಡುವಂತೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕೇಳಿಕೊಂಡಿದ್ದರು. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿಯವರೇ ಪಕ್ಷದ ಮುಖ್ಯಸ್ಥೆಯಾಗಿ ಮುಂದುವರೆಯುವಂತೆ ಮನವೊಲಿಕೆಯ ಪ್ರಯತ್ನವನ್ನು ಮಾಡಿದರು.
ಮಾಜಿ ಮಂತ್ರಿಗಳು ಸೇರಿದಂತೆ ಕೆಲವು ಕಾಂಗ್ರೇಸ್ ನಾಯಕರು ನಾಯಕತ್ವದಲ್ಲಿ ಬದಲಾವಣೆಗಳನ್ನು ಮಾಡಬೇಕೆಂದು ಒತ್ತಾಯಿಸಿ ಪತ್ರ ಬರೆದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ಸಿನ ಉನ್ನತ ನಿರ್ಧಾರವನ್ನು ತೆಗೆದುಕೊಳ್ಳುವ ಕಾರ್ಯಕಾರಿಣಿ ಸಭೆಯಲ್ಲಿ ಹಲವು ಮಂತ್ರಿಗಳು ಗಾಂಧಿ ಕುಟುಂಬವನ್ನು ಹೊರತು ಪಡಿಸಿ ಬೇರೆ ಯಾರೂ ಪಕ್ಷದ ಮುಖ್ಯಸ್ಥರಾಗುವುದು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿದರು. ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ 24 ಅಕ್ಬರ್ ರಸ್ತೆ ಕಚೇರಿಯ ಹೊರಗೆ ಜಮಾಯಿಸಿ ಗಾಂಧಿ ಕುಟುಂಬವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಸದ್ಯಕ್ಕೆ ಸೋನಿಯಾ ಗಾಂಧಿಯವರೇ ಪಕ್ಷದ ಮಧ್ಯಂತರ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದು ಆರು ತಿಂಗಳ ಒಳಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಗಿದೆ.