ಕಾಣುವುದು

0
254
Tap to know MORE!

ಈ ಕಾಣುವುದು ಎಂಬ ಪದ ಮೇಲುನೋಟದಲ್ಲಿ ಕ್ರಿಯಾಪದವಾಗಿ ಕಾಣುತ್ತದೆ, ಭಾಷೆಗಿರುವ ವಿಶೇಷ ಲಕ್ಷಣವೆಂದರೆ ಅದಕ್ಕಿರುವ ಬಹು ಆಯಾಮದ ಅರ್ಥ.
ಮೊದಲನೆಯದಾಗಿ
ಇಲ್ಲಿ “ಕಾಣುವುದು” ಪದ ಕಣ್ಣಿಗೆ,ನೋಟಕ್ಕೆ ಸಂಬಂಧಿಸಿದ ಪದವಾದರೂ ಬರೀ ಅಷ್ಟೇ ಆಗಿಲ್ಲ. “ಕಾಣು”ಅಂದಾಗ ಇದು ನೋಡು ಎಂಬ ಆದೇಶವಾಗುತ್ತದೆ. ಕಣ್ಣಿಗೆ ಕಂಡದ್ದನ್ನು ನೋಡಿದ ಎಂಬ ಅರ್ಥ ಬಂದರೆ ಎರಡನೆಯ ಅಯಾಮದಲ್ಲಿ ಕಾಣುವಿಕೆಗಿಂತ ಮಿಗಿಲಾದ ಅಂತಶ್ಚಕ್ಷುವಿಗೆ‌,ಹೃದಯಕ್ಕೆ ಸಂಬಂಧಿಸಿದಂತೆ ಪ್ರಯೋಗವಾಗುವ ಪದವನ್ನು “ಕಾಣ್ಕೆ” ಎನ್ನುತ್ತಾರೆ.
ಕಣ್ಣಿದ್ದವರು ಬರಿದೇ ಕಂಡರೆ, ಜ್ಞಾನಿ”ಕಾಣುತ್ತಾನೆ”
ಇದನ್ನು ಸರಳವಾದ ಉದಾಹರಣೆ ಯೊಂದರ ಮೂಲಕ ವಿವರಿಸುವ ಪ್ರಯತ್ನ‌ಮಾಡೋಣ. ಸಾಮಾನ್ಯ ಜನರಾದ ನಮಗೆ ಜೋಗದ ಜಲಪಾತವು ಬರಿಯ ನಯನಮನೋಹರವಾಗಿ ,ಅದ್ಬುತ ಜಲದಾರೆಯಾಗಿ ಕಂಡರೆ, ಸರ್ ಎಮ್ ವಿಶ್ವೇಶ್ವರಯ್ಯ ನಂತಹ‌ ಮಹಾಮೇಧಾವಿಗಳಿಗೆ ಅದು ಶಕ್ತಿಯ ಮೂಲವಾಗಿ ಕಾಣುತ್ತದೆ.
ಹಾಗಾಗಿ ಕಾಣುವಿಕೆಗೆ ಆಂತರಂಗಿಕ ಮತ್ತು ಬಾಹ್ಯ ಹೀಗೆ ಎರಡೂ ನೆಲೆಯಲ್ಲು ಅರ್ಥಹೊಮ್ಮುತ್ತದೆ. ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಕುವೆಂಪುರವರಿಗಾದ ದರ್ಶನ. ಕ್ರೌಂಚ ಪಕ್ಷಿಗಳ ರೋದನದ ಪರಿಣಾಮವಾಗಿ ವಾಲ್ಮೀಕಿಯ ಶೋಕವು ಶ್ಲೋಕ ವಾದ ಹಾಗೇ ಶ್ರೀಕುವೆಂಪುರವರ ಕಾಣ್ಕೆ,ನೋಟವೂ,ದರ್ಶನವೂ ಕಾವ್ಯವಾಯಿತು.

ಇವಿಷ್ಟೇ ಅಲ್ಲದೆ ಇನ್ನೂ ಹಲವು ಅರ್ಥಗಳನ್ನು ನಾವು ಕಾಣುವಿಕೆಗೆ ದಿನನಿತ್ಯದ ವ್ಯವಹಾರದಲ್ಲಿ ತೊಡಿಸಿದ್ದೇವೆ.
“ಅವನ ಕಣ್ಣು ನೆತ್ತಿ ಮೇಲಿದೆ” ಹಾಗಾಗಿ ಅವನಿಗೆ ನೆಲ ಕಾಣಲ್ಲ.ಇಲ್ಲಿ ಅಹಂಕಾರದ ಪರಿಣಾಮವಾಗಿ ಭ್ರಮಾದೀನನಾದ ವ್ಯಕ್ತಿ ವಾಸ್ತವವನ್ನು ಮರೆತಾಗ ಜನರು ಹೀಗೆ ಮಾತನಾಡಿ ಎಚ್ಚರಿಸುತ್ತಾರೆ.ಆಗಲೂ ನಮಗೆ ಕಾಣುವಿಕೆಯೇ ಮಾನದಂಡ.
ಇದರ ಮುಂದುವರಿಕೆಯ ರೂಪಗಳು ಇನ್ನೂ ಖಚಿತವಾಗಿವೆ “ಮೀಸೆ ಬಂದವನಿಗೆ ದೇಶ ಕಾಣಲ್ಲ:ಮೊಲೆಬಂದವಳಿಗೆ ನೆಲಕಾಣಲ್ಲ”, ಇಲ್ಲಿ ವ್ಯಂಗ್ಯದ ಜೊತೆಗೆ ಪ್ರಾಸವೂ ಸೇರಿ ವಾಕ್ಯವನ್ನು ಹೆಚ್ಚು ಅರ್ಥ ಪೂರ್ಣವಾಗಿಸುತ್ತವೆ‌
ಇಲ್ಲಿನ ಮೀಸೆ ಮತ್ತು ಮೊಲೆಗಳು ಮೂಲದಿಂದ ಬಾರದೇ ನಂತರ ಸೇರಿಕೊಂಡವುಗಳು. ಹಾಗೆಯೇ,ನಂತರ ಬರುವ ಶ್ರೀಮಂತಿಕೆಗಳು, ಸ್ಥಾನಮಾನಗಳು ,ಅಧಿಕಾರಗಳು ನಮ್ಮನ್ನು ನೆಲನೋಡದಂತೆ ಮಾಡಬಾರದು, ಕಾರಣ ಇವು ಶಾಶ್ವತ ವಾದುದಲ್ಲ.

“ಬಂಗಾರ ಬಳೆತೊಟ್ಟು ಬೈಬೇಡ ಬಡವರಿಗೆ,
ಬಂಗಾರನಿನಗೆ ಸ್ಥಿರವಲ್ಲ ಮಗಳೆ!.
ಸಂಜೆಯ ಬಿಸಿಲು ಸ್ಥಿರವಲ್ಲ”
ಇಲ್ಲಿ ಕೂಡಾ ಜನಪದರ ಆಲೋಚನೆ ಮೇಲಿನಂತೆಯೇ ಯಿದೆ. ಅಹಂಕಾರ ನಮ್ಮ ದೃಷ್ಟಿಯನ್ನು ಮಸುಕಾಗಿಸಬಾರದು,ಜನ್ನ ಹೇಳುವ ಹಾಗೆ ” ತುಪ್ಪೇರಿದ ದರ್ಪಣದೊಳ್ ಪಜ್ಜಳಿಸಲಾರ್ಪುದೇ ಪ್ರತಿಬಿಂಬಮ್?”
ನಮ್ಮ ಅಂತರಂಗದ ಅರಿವೆಂಬ ದರ್ಪಣಕ್ಕೆ ಅಹಂಕಾರ, ಅಧಿಕಾರ,ಜಾತಿಗರ್ವಗಳು ಮಸುಕಾಗಬಾರದು.
ಮಸುಕು ಕವಿಯ ಬಾರದೆಂದರೆ ನಾವು ಬಾಹ್ಯಗೋಚರವಾದುದನ್ನು ಅಂತರಂಗದ ಅರಿವಾಗಿಸಿ ಕೊಳ್ಳಬೇಕು .ಕಣ್ಣಿಗೆ ಕಂಡದ್ದು ಮಾತ್ರ ಸತ್ಯವಲ್ಲ,ಸತ್ಯಕ್ಕೆ ಹಲವು ಮುಖಗಳು. ನಾವು ಪರಾಂಬರಿಸಿ ನೋಡಬೇಕು,ಅಥವಾ ಒಂದು ಸಂಗತಿಯ ಮತ್ತೊಂದು ಆಯಾಮವನ್ನು ಹುಡುಕಬೇಕು,ಅದೂ ಆಗದಿದ್ದರೆ, ಕೆಲದಿನಗಳ ನಂತರ ಮತ್ತೆ ನೋಡುವ ಪ್ರಯತ್ನ ಮಾಡಿದರೆ ನಮಗೆ ಬೇರೆಯದೇ ಅರ್ಥ ಹೊಳೆಯುತ್ತದೆ,
ಕಳೆದ ವರ್ಷ ಕೇರಳದಲ್ಲಿ ಆಹಾರವನ್ನು ಕದ್ದನೆಂಬ ಕಾರಣವನ್ನು ನೀಡಿ ಆದಿವಾಸಿಯೊಬ್ಬನನ್ನು ಥಳಿಸಿ ಕೊಂದರು. ಆದರೆ ಆತ ಆಹಾರವನ್ನು ಕದಿಯುವ ಅನಿವಾರ್ಯ ಪರಿಸ್ಥಿತಿಯನ್ನು ನಿರ್ಮಿಸಿದ ಸಮಾಜದ ತಪ್ಪುಒಪ್ಪುಗಳಿಂದ ನೋಡಿದಾಗ ಸತ್ತ ವ್ಯಕ್ತಿಗಾಗಿ ಮರುಗುವಂತಾಗುತ್ತದೆ.
ಇಂದು ಕಾಡುಪ್ರಾಣಿಗಳು ನಾಡಿಗೆ ಧಾಳಿಯಿಡುತ್ತಿರುವುದನ್ನೂ ನಾವು ಈ ದೃಷ್ಟಿಯಿಂದಲೇ ನೋಡಬೇಕು, ಅದಿಲ್ಲದೆ ಸಿಕ್ಕಿದ್ದೇ ಅವಕಾಶ ವೆಂಬಂತೆ ಕೊಲ್ಲುವ,ಓಡಿಸುವ ಮಾತನಾಡುವುದೂ ತಪ್ಪು.

ಪ್ರತಿಕ್ಷಣವೂ ನಾವು ಕಾಣುತ್ತಿರುವ ಸಂಗತಿಗಳ ಅರ್ಥಗಳು ಮೋಡದ ಚಿತ್ರದಂತೆ ಬದಲಾಗುತ್ತಿದೆ, ನಾವು ಬದಲಾದ ಮತ್ತು ಇನ್ನೂ ಬದಲಾಗುತ್ತಿರುವ ಅರ್ಥ ವನ್ನು ಗ್ರಹಿಸಿ ಮನಸ್ಸು ಚಂಚಲವಾಗದಂತೆ, ಬಾಹ್ಯಸಂಗತಿಗಳು ನಮ್ಮ‌ನಿಲುವನ್ನು ದುರ್ಬಲಗೊಳಿಸದಂತೆ ಕಾಣುವುದರಲ್ಲಿ ತನ್ಮಯರಾಗಬೇಕು .ಕಾನೂರು ಹೆಗ್ಗಡತಿಯ ಚಿನ್ನಯ್ಯನ ಮೀನುಶಿಕಾರಿಯನ್ನ ನೆನಪಿಸಿಕೊಳ್ಳಿ. ಒಂದು ಯಕ್ಷ್ಚಿತ್ ಅವುಲು ಮೀನು ಹೊಡೆವ ಕೆಲಸವನ್ನು ಕುವೆಂಪು ಒಂದು ದೀರ್ಘ ತಪಸ್ಸಿನಂತೆ ಚಿತ್ರಿಸುತ್ತಾರೆ.

ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಬಾಹ್ಯಪ್ರಪಂಚ ನಮ್ಮ ದೃಷ್ಟಿ ಕೋನವನ್ನು ದುರ್ಬಲ ಗೊಳಿಸಲು ಪ್ರಯತ್ನಿಸುತ್ತದೆ.ಆದರೆ ನಮ್ಮ ಕಾಣುವಿಕೆ,ನೋಟ,ಕಾಣ್ಕೆ,ದೃಷ್ಟಿ ಕೋನ ಯಾವತ್ತೂ ಬದಲಾಗಬಾರದು.ಚಂಚಲತೆ ಕಾಡಬಾರದು”ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ,ಪದವಿಟ್ಟಳುಪದೊಂದ
ಗ್ಗಳಿಕೆ
ಪರರೊಡ್ಡವದ ರೀತಿಯಕೊಳ್ಳದಗ್ಗಳಿಕೆ|
ಬಳಸಿ ಬರೆಯಲು ಕಂಠಪತ್ರದ ವುಲುಹುಕೆಡದೊಂದಗ್ಗಳಿಕೆ” ಎಂಬ ಬಲುಹು ನಮ್ಮದಾಗಬೇಕು.ಹಾಗಾಗಬೇಕಾದರೆ ನಮ್ಮ ಕಾಣುವಿಕೆ ನಿಖರವಾಗಿರಬೇಕು,ಹೀಗೆ ಸತ್ಯವನ್ನು ಕಾಣಲು ಸಾದ್ಯವಾಗುವವರು ಜಗತ್ತನ್ನು ಗೆದ್ದು ಜಿನಾರಾಗುತ್ತಾರೆ. ಗೆಲ್ಲದಿದ್ದವರು ಬರಿಯ ಜನರಾಗುತ್ತಾರೆ

ಹರೀಶ್ .ಟಿ.ಜಿ

LEAVE A REPLY

Please enter your comment!
Please enter your name here