ದಕ್ಷಿಣ ಭಾರತದ ಗಾಂಧಿ ಎಂದೇ ಹೆಸರು ಪಡೆದ ಹೋರಾಟಗಾರ ಕಾರ್ನಾಡ್ ಸದಾಶಿವ ರಾವ್

0
240
Tap to know MORE!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದೆಷ್ಟೋ ಶ್ರೀಮಂತರ ಮನೆಯ ಮಕ್ಕಳು ತಮ್ಮ ಬದುಕು, ಆಸ್ತಿ ಪಾಸ್ತಿಗಳನ್ನು ದೇಶದ ಸ್ವತಂತ್ರ್ಯಕ್ಕಾಗಿ ಅರ್ಪಿಸಿಕೊಂಡಿದ್ದಾರೆ. ಅಂತಹವರಲ್ಲಿ ಕಾರ್ನಾಡ್ ಸದಾಶಿವ ರಾವ್ ಒಬ್ಬರು.

ಕಾರ್ನಾಡ್‌ ಸದಾಶಿವ ರಾವ್‌ ಅವರನ್ನು ದಕ್ಷಿಣ ಭಾರತದ ಗಾಂಧಿ ಎಂದೇ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ಕೊಟ್ಟ ಮಹಾನ್‌ ದೇಶಪ್ರೇಮಿ. ಇವರು 1881ರಲ್ಲಿ ಮಂಗಳೂರಿನ ಅತ್ಯಂತ ಶ್ರೀಮಂತ ಮನೆತನದಲ್ಲಿ ಹುಟ್ಟಿದರು. ಪ್ರಸಿದ್ಧ ವಕೀಲರಾಗಿದ್ದ ರಾಮಚಂದ್ರರಾಯರು, ತಾಯಿ ರಾಧಾಬಾಯಿ ದಂಪತಿಗಳ ಏಕೈಕ ಪುತ್ರನಾಗಿ ಕಾರ್ನಾಡ್‌ ಸದಾಶಿವ ರಾವ್‌ ಜನಿಸಿದರು. ಇವರ ಬಾಲ್ಯದ ಶಿಕ್ಷಣವನ್ನು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮುಗಿಸಿ, ಮುಂಬೈನಲ್ಲಿ ವಕೀಲ ಶಿಕ್ಷಣ ಪೂರೈಸಿದರು. ಈ ಸಮಯದಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯ ಬಿರುಗಾಳಿ ಬೀಸಲಾರಂಭಿಸಿತ್ತು. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಕರೆಕೊಟ್ಟಿದ್ದರು. ಗಾಂಧೀಜಿಯವರ ಚಳುವಳಿಗೆ ಓಗೊಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿ ಕರ್ನಾಟಕದ ಮೂಲೆಮೂಲೆಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಖ್ಯಾತಿ ಇವರದ್ದು.

ಇದನ್ನೂ ಓದಿ: ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಕ್ರಾಂತಿಕಾರಿ ರಾಮ್‌ಪ್ರಸಾದ್ ಬಿಸ್ಮಿಲ್

ಅಸ್ಪೃಶ್ಯತೆಯ ವಿರುದ್ಧ ತೀವ್ರವಾಗಿ ಹೋರಾಡುವ ಮೂಲಕ ಸಮಾಜದಲ್ಲಿನ ಜಾತಿ ತಾರತಮ್ಯಗಳ ವಿರುದ್ಧ ಧ್ವನಿ ಎತ್ತಿದರು. ಜನರು ಮೂಢನಂಬಿಕೆಗೆ ಬಲಿಯಾಗದಂತೆ ಜಾಗೃತಿ ಮೂಡಿಸುವ ಸಲುವಾಗಿ ಹಗಲು ರಾತ್ರಿ ಶ್ರಮವಹಿಸಿ ಹೋರಾಡಿದರು. ಸಾಮಾಜಿಕ ಕ್ಷೇತ್ರಗಳಲ್ಲಿ ಅನಿಷ್ಠ ಪದ್ಧತಿಗಳ ವಿರುದ್ಧ ಕೊನೆಯವರೆಗೂ ಹೋರಾಟ ನಡೆಸಿದ್ದರು.

ಇವರ ಹೋರಾಟಕ್ಕೆ ಪತ್ನಿ ಶಾಂತಾಭಾಯಿ ಕೂಡ ಬೆಂಬಲ ನೀಡಿದ್ದರು. ಇವರು ವಿಧವೆ ಮಹಿಳೆಯರಿಗೆ ನೆರವು ನೀಡುವ ಸಲುವಾಗಿ ಮಹಿಳಾ ಸಭಾ ಸ್ಥಾಪಿಸಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪಣತೊಟ್ಟಿದ್ದರು. ಹಿಂದುಳಿದ ವರ್ಗದವರು ಕೂಡ ದೇವಾಲಯಕ್ಕೆ ಹೋಗುವಂತಾಗಬೇಕು. ಅವರಿಗೆ ಪ್ರವೇಶ ನೀಡಬೇಕು ಎಂದು ಹೋರಾಟ ನಡೆಸಿದ್ದರು. ಕಾಳಿ ದೇವಾಲಯಗಳಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ವಿರೋಧಿಸಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಇವರ ಹೋರಾಟದ ಫಲವಾಗಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿತು. ಇವರ ಮನೆ ಕಾಂಗ್ರೆಸ್ ಕಾರ್ಯಚಟುವಟಿಕೆಯ ಕೇಂದ್ರ ಬಿಂದುವಾಗಿತ್ತು. ದೇಶದ ಪ್ರಮುಖ ನಾಯಕರಾದ ಮಹತ್ಮಾ ಗಾಂಧಿ, ಜವಹರಲಾಲ್‌ ನೆಹರು, ಸಿ. ಆರ್ ದಾಸ್, ಕಸ್ತೂರ್ಬಾ ಮುಂತಾದ ನಾಯಕರು ಕಾರ್ನಾಡ್ ಮನೆಗೆ ಭೇಟಿ ನೀಡಿದ್ದರು. ಅಹಮದಾಬಾದ್ನಲ್ಲಿ ಗಾಂಧೀಜಿ ಜೊತೆ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕರ್ನಾಟಕದ ಜನರು ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗಿತ್ತು. ಇದನ್ನು ಕೇಳಿ ತನ್ನ ಜನರ ನೆರವಿಗೆ ಧಾವಿಸಿ ಬಂದು ಸಮಾಜ ಸೇವೆಯಲ್ಲಿ ಮತ್ತೆ ತೊಡಗಿಸಿಕೊಂಡರು.

ಹುಟ್ಟಿದಾಗ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಸದಾಶಿವ ರಾವ್‌ ಅವರು ಸಾಯುವಾಗ ಅವರ ಶವ ಸಂಸ್ಕಾರಕ್ಕೂ ಹಣವಿರಲಿಲ್ಲ. ತಮ್ಮ ಸಮಸ್ತ ಹಣವನ್ನು ಬಡವರಿಗಾಗಿ ಖರ್ಚು ಮಾಡಿದ್ದರು. ದಂಡಿ ನಡಿಗೆ, ಉಪಾವಾಸ ಸತ್ಯಾಗ್ರಹದ ಬಳಿಕ ಅವರ ಆರೋಗ್ಯ ಹದಗೆಡಲು ಆರಂಭಿಸಿತ್ತು. 1936ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬೈಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9ರಂದು ಸಾವನ್ನಪ್ಪಿದ್ದರು.

ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಬದುಕು,ಸಂಪತ್ತು ಎಲ್ಲಾ ರೀತಿಯ ವೈಭವದ ಜೀವನವನ್ನು ತ್ಯಜಿಸಿ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ದಕ್ಷಿಣ ಭಾರತದ ಗಾಂಧಿ ಎಂದೇ ಹೆಸರು ಪಡೆದ ಸದಾಶಿವ ರಾವ್ ಅವರು ಒಬ್ಬ ಯುವ ಪೀಳಿಗೆಗೆ ಆದರ್ಶ ವ್ಯಕ್ತಿ.

ಸುರೇಶ್ ರಾಜ್, ಪಕ್ಷಿಕೆರೆ
ವಿವಿ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here