ವರ್ತಮಾನಕ್ಕೆ ಸ್ಪಂದಿಸಿ, ಸಾರ್ವಕಾಲಿಕವಾಗುವ ಕವಿತೆಯೇ ಶ್ರೇಷ್ಠ: ಹೆಚ್‌ ಡುಂಡಿರಾಜ್‌

0
198
Tap to know MORE!

ಮಂಗಳೂರು: ವರ್ತಮಾನಕ್ಕೆ ಸ್ಪಂದಿಸಿ, ಸಾರ್ವಕಾಲಿಕವಾಗುವ ಕವಿತೆಯೇ ಅತ್ಯಂತ ಶ್ರೇಷ್ಠ. ಈ ದುರಿತ ಕಾಲದಲ್ಲೂ ಆಕ್ಸಿಜನ್‌, ಆಸ್ಪತ್ರೆಯ ಜೊತೆಗೆ ಕಾವ್ಯವೆಂಬ ಮಾತ್ರೆಯೂ ಬೇಕು, ಎಂದು ಖ್ಯಾತ ಹನಿಗವಿ ಹೆಚ್‌. ಡುಂಡಿರಾಜ್‌ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕನಕ ಸಂಶೋಧನಾ ಕೇಂದ್ರ ಭಾನುವಾರ ʼತಲ್ಲಣಿಸದಿರು ಕಂಡ್ಯ ತಾಳು ಮನವೇ’ ಎಂಬ ಪರಿಕಲ್ಪನೆಯಡಿ ವರ್ಚುವಲ್‌ ವೇದಿಕೆಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಡುಂಡಿರಾಜ್‌, ಕನಕದಾಸರು ಮತ್ತು ಪುರಂದರದಾಸರು ಅಶ್ವಿನಿ ದೇವತೆಗಳಿದ್ದಂತೆ. ಚೆಲುವಾದ ಸಾಹಿತ್ಯವನ್ನು ಅರ್ಪಿಸಿದ ಕನಕರು ಪಂಡಿತ- ಪಾಮರರಿಗೂ ಇಷ್ಟವಾಗುವವರು, ಎಂದರು.

ಐಪಿಎಲ್ 2021ಗೆ ಪುನರ್ಜನ್ಮ! ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ

ಕವಿಗಳನ್ನು ಮತ್ತು ಕವನವನ್ನು ತಮ್ಮದೇ ಶೈಲಿಯಲ್ಲಿ ಬಣ್ಣಿಸಿದ ಡುಂಡಿರಾಜರು, ಖುಷಿ ಇಲ್ಲದಿದ್ದರೆ ಕಾವ್ಯ ಸಾಧ್ಯವಿಲ್ಲ. ಸಹಜವಾಗಿ ಬರೆದರೆ ಕಾವ್ಯಮಯ, ಇಲ್ಲವಾದರೆ ಕಾವ್ಯʼಮಾಯʼ ಎಂದರು. ಫೋಟೋ ಪ್ರಕಟವಾದರೆ, ಪ್ರಶಸ್ತಿ ಸಿಕ್ಕರೆ ಕಾಡುವ ʼಅನುಮಾನʼ, ‘ಆಯು’ವ ಕವಿ ʼಈಯು’ವ ಕವಿಗಳು, ಹಾಸ್ಯ- ಗಂಭೀರತೆ ಸಮ್ಮಿಳಿತವಾಗಿದ್ದ ಕರ್ಣನ ಕುರಿತ ಐದು ಕವಿತೆಗಳನ್ನು ವಾಚಿಸಿ ಗಮನ ಸೆಳೆದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅಧ್ಯಕ್ಷೀಯ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಸಮಾಜ ಸುಧಾರಣೆಗೆ ಭಕ್ತಿಮಾರ್ಗದಲ್ಲಿ ಶ್ರಮಿಸಿದ, ಮಾನವೀಯತೆಯೇ ಪರಮೋಧರ್ಮ ಎಂದ ಕನಕದಾಸರು ಈಗ ಅತ್ಯಂತ ಪ್ರಸ್ತುತರು. ಶುಭಾಶಂಸನೆಗೈದ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ, ಸಂಕಟಗಳ ನಡುವೆಯೂ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು 500 ವರ್ಷಗಳ ಹಿಂದೆಯೇ ಕನಕರು ನಿರೂಪಿಸಿದ್ದರು, ಎಂದರು.

ಗುಂಪುಗೂಡಿ ಕ್ರಿಕೆಟ್ ಆಡುವವರ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ!

ಚಿತ್ರದುರ್ಗದ ಆರ್. ತಾರಿಣಿ ಶುಭದಾಯಿನಿ, ದಾವಣಗೆರೆಯ ಆನಂದ ಋಗ್ವೇದಿ, ಕಾಸರಗೋಡಿನ ರಾಧಾಕೃಷ್ಣ ಬೆಳ್ಳೂರು, ರಾಯಚೂರಿನ ಚಿದಾನಂದ ಸಾಲಿ ಮತ್ತು ಉಡುಪಿಯ ಕಾತ್ಯಾಯಿನಿ ಕುಂಜಿಬೆಟ್ಟು ಅವರ ಕವನಗಳು ಮನೋಕ್ಷೋಭೆಯನ್ನು ನಿಯಂತ್ರಿಸುವ, ನಮ್ಮನ್ನು ನಾವೇ ಸಂತೈಸಿಕೊಳ್ಳುವ, ಭರವಸೆಗೆ ಪ್ರಕೃತಿಯೆಡೆಗೆ ನೋಡುವ, ಕಬ್ಬಿನಂತಹ ಕನಕನನ್ನು ಅರ್ಥಮಾಡಿಕೊಳ್ಳುವ ಮತ್ತು ಸ್ವಾತಂತ್ರ್ಯದ ಮಿತಿಗಳನ್ನು ಅರಿಯುವ ಅನಿವಾರ್ಯತೆಯನ್ನು ಸಾರಿ ಹೇಳುತ್ತಿದ್ದವು.

ಕನಕ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀವಾಣಿ ಕಕ್ಕುಂಜೆ ಪ್ರಾರ್ಥಿಸಿದರು. ಚಂದನಾ ಕೆ ಎಸ್‌ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here