ಕಾಸರಗೋಡು: ಜಿಲ್ಲೆಯ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕೇರಳದ ಕಾಸರಗೋಡಿನಲ್ಲಿ ತಲೆಯೆತ್ತಲಿರುವ ಟಾಟಾ ಸಮೂಹದ 540 ಹಾಸಿಗೆಗಳ COVID-19 ಆಸ್ಪತ್ರೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ರಾಜ್ಯ ಸರ್ಕಾರ ಈಗಾಗಲೇ ಆಸ್ಪತ್ರೆಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದೆ. ಮುಂದಿನ ತಿಂಗಳ ವೇಳೆಗೆ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ.
ಈ ಆಸ್ಪತ್ರೆಯು ಕಾಸರಗೋಡಿನ ತೆಕ್ಕಿಲ್ ಗ್ರಾಮದಲ್ಲಿದೆ. ಜುಲೈ 30ರಂದು ರಾಜ್ಯ ಸರ್ಕಾರಕ್ಕೆ ಆಸ್ಪತ್ರೆಯನ್ನು ಹಸ್ತಾಂತರಿಸಲಾಗುವುದು ಎಂದು ಸಮೂಹ ಸಂಸ್ಥೆ ಹೇಳಿಕೊಂಡಿದೆ. ಮೂರು ತಿಂಗಳಲ್ಲಿ, 15 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ವಿುಸಲಾಗಿದ್ದು, 128 ಕೊಠಡಿಗಳನ್ನು ಹೊಂದಿದೆ.
ತೆಕ್ಕಿಲ್ ಗ್ರಾಮದ 5 ಎಕರೆ ಜಾಗ, ಜಲ, ವಿದ್ಯುತ್ ಸಹಿತ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಎಲ್ಲ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಮತ್ತು ಕಾಸರಗೋಡು ಜಿಲ್ಲಾಡಳಿತ ಒದಗಿಸುತ್ತಿದೆ. ಆಸ್ಪತ್ರೆ ಯೂನಿಟ್ ಗಳ ಸಹಿತ ಎಲ್ಲವನ್ನೂ ಟಾಟಾ ಸಮೂಹ ಸಂಸ್ಥೆ ಉಚಿತವಾಗಿ ಒದಗಿಸುತ್ತಿದೆ. ಟಾಟಾ ಸಮೂಹ ಸಂಸ್ಥೆ ಕಾಸರಗೋಡು ಜಿಲ್ಲೆಗೆ ಇದೇ ಮೊದಲ ಬಾರಿಗೆ ಇಂತಹ ಸುಸಜ್ಜಿತ ಆಸ್ಪತ್ರೆಯ ಕೊಡುಗೆ ನೀಡುತ್ತಿದೆ.
ಆಸ್ಪತ್ರೆಯ ವಿಶೇಷತೆಗಳು
- ಆಸ್ಪತ್ರೆಯನ್ನು 3 ವಲಯಗಳನ್ನಾಗಿ ವಿಂಗಡಿಸಲಾಗಿದೆ.
- ಝೋನ್ 1, ಝೋನ್ 2, . ಝೋನ್ 3
- ಝೋನ್ 1 ಮತ್ತು 3ರಲ್ಲಿ ಕ್ವಾರಂಟೈನ್ ಸೌಲಭ್ಯ.
- ಝೋನ್ 2 ರಲ್ಲಿ ವಿಶೇಷ ಐಸೋಲೇಶನ್ ಸೌಲಭ್ಯ
- ಝೋನ್ 1, 3ರ ಪ್ರತಿ ಕಂಟೈನರ್ ಗಳಲ್ಲೂ ತಲಾ 5 ಹಾಸಿಗೆಗಳು, ಒಂದು ಶೌಚಗೃಹ,
- ಝೋನ್ 2ನೇ ಯೂನಿಟ್ ಗಳಲ್ಲಿ ಶೌಚಗೃಹಗಳ ಸಹಿತದ ತಲಾ ಒಂದು ಕೊಠಡಿ
- ಪ್ರತಿ ಯೂನಿಟ್ 40 ಅಡಿ ಉದ್ದ, 10 ಅಡಿ ಅಗಲವಿರಲಿದೆ.
- ರಸ್ತೆ, ಸ್ವಾಗತ ಕೊಠಡಿ ಸೌಲಭ್ಯ, ಕ್ಯಾಂಟೀನ್, ವೈದ್ಯರು ಮತ್ತು ದಾದಿಯರಿಗೆ ಪ್ರತ್ಯೇಕ ಕೊಠಡಿಗಳ ಸಹಿತ ಎಲ್ಲ ಸೌಲಭ್ಯ ಇರಲಿದೆ.
ಈ ಬಗ್ಗೆ ಟಾಟಾ ಸಮೂಹ ಸಂಸ್ಥೆಯ ಯೋಜನೆಯ ಆಡಳಿತಾಧಿಕಾರಿ, ಆಂಟನಿ ಪಿ.ಎಲ್. ಮಾತನಾಡಿ, ಆರಂಭದಲ್ಲಿ ಇದು ಕೋವಿಡ್ ಆಸ್ಪತ್ರೆಯಾಗಿ ಕೆಲಸ ಮಾಡಲಿದೆ. ಸಿಬ್ಬಂದಿ ನೇಮಕಾತಿ, ಚಿಕಿತ್ಸಾ ಸೌಲಭ್ಯ ಇತ್ಯಾದಿಗಳನ್ನು ರಾಜ್ಯ ಸರ್ಕಾರ ನೋಡಿಕೊಳ್ಳಲಿದೆ. ಕೊರೊನಾ ಸಮಸ್ಯೆ ಸಂಪೂರ್ಣ ಬಗೆಹರಿದ ನಂತರ ಯಾವ ರೀತಿ ಈ ಆಸ್ಪತ್ರೆಯನ್ನು ಬಳಸಬೇಕು ಎಂಬುದನ್ನು ರಾಜ್ಯ ಸರ್ಕಾರ ನಿರ್ಧರಿಸಲಿದೆ ಎಂದಿದ್ದಾರೆ.