ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಶೀಘ್ರದಲ್ಲೇ ಯುಜಿಸಿ ನಿಯಮಗಳನ್ನು ಆಧರಿಸಿ ನವೀಕೃತ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಿದ್ದು ವಿದ್ಯಾರ್ಥಿಗಳು, ಪೋಷಕರು ಮತ್ತು ಪ್ರಾಧ್ಯಾಪಕರು ಆತಂಕಿತರಾಗಬೇಕಿಲ್ಲ ಎಂದು ಕುಲಸಚಿವ ಕೆ. ರಾಜು ಮೊಗವೀರ (ಕೆ.ಎ.ಎಸ್) ಹೇಳಿದ್ದಾರೆ.
ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಗರದ ವಿಶ್ವವಿದ್ಯಾನಿಲಯ ಕಾಲೇಜಿಗೆ ಬುಧವಾರ ಮೊದಲ ಬೇಟಿ ನೀಡಿದ ಅವರು, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು. ಪದವಿಯ ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿ ಪಾಠ ಆರಂಭಿಸುವ ಕುರಿತು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳ ಸಭೆಯನ್ನೂ ನಡೆಸಲಾಗಿದೆ. ವಿದ್ಯಾರ್ಥಿಗಳಿಗೂ ಕಾಲೇಜಿಗೆ ಬರುವ ಆತ್ಮವಿಶ್ವಾಸ ಮೂಡುವುದು ಮುಖ್ಯ, ಎಂದರು. ಇದೇ ವೇಳೆ ಅವರು ಅತಿಥಿ ಉಪನ್ಯಾಸಕರುಗಳ ನೇಮಕಾತಿ ಪಟ್ಟಿಯನ್ನು ಇದೇ ವಾರಾಂತ್ಯಕ್ಕೆ ಬಿಡುಗಡೆ ಮಾಡುವ ಭರವಸೆ ನೀಡಿದರು.
ಇದನ್ನೂ ಓದಿ: ಮಂಗಳೂರು : ವಿವಿ ಕಾಲೇಜಿನಲ್ಲಿ ಜಗದೀಶ್ ಚಂದ್ರ ಬೋಸ್ ಜನ್ಮದಿನಾಚರಣೆ
ಭವ್ಯ ಇತಿಹಾಸವಿರುವ ವಿವಿ ಕಾಲೇಜಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿಕೊಂಡ ಅವರು, “ಮಂಗಳೂರು ವಿಶ್ವವಿದ್ಯಾನಿಲಯ ಎಲ್ಲಾ ಅಗತ್ಯ ನೆರವು ನೀಡಲಿದೆ. ಆದರೆ ಕಾಲೇಜುಗಳು ತಮಗಿರುವ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವುದು ಅಗತ್ಯ,” ಎಂದರು. ಕಾಲೇಜಿನ ಸ್ವಚ್ಛತೆ, ಪೀಠೋಪಕರಣಗಳ ನಿರ್ವಹಣೆ, ಪ್ರಥಮ ಚಿಕಿತ್ಸೆ ವ್ಯವಸ್ಥೆ ಮೊದಲಾದ ವಿಷಯಗಳ ಕುರಿತು ಗಮನಹರಿಸುವಂತೆ ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಹರೀಶ್ ಎ, ವಿಶ್ವವಿದ್ಯಾನಿಲಯದ ಎಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ