ಕೃಷಿ ಮಸೂದೆ ಅಂಗಿಕಾರಗೊಂಡಿರುವುದು, ಕೃಷಿ ಕ್ಷೇತ್ರಕ್ಕೆ ಸಿಕ್ಕ ಅಭೂತಪೂರ್ವ ಗೆಲುವು : ಮೋದಿ

0
46

ನವದೆಹಲಿ: ಸಾಕಷ್ಟು ವಿರೋಧ, ರೈತ ಪ್ರತಿಭಟನೆಯ ನಡುವೆ ರಾಜ್ಯಸಭೆಯಲ್ಲೂ ಕೃಷಿ ಮಸೂದೆಗಳಿಗೆ ಅಂಗೀಕಾರ ಸಿಕ್ಕಿದ್ದು, ದೇಶಾದ್ಯಂತ ಪರ ವಿರೋಧದ ಚರ್ಚೆಗೆ ವೇದಿಕೆಯಾಗಿದೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಮಸೂದೆಗಳು ಅಂಗೀಕಾರ ಆಗಿರುವುದು ಭಾರತೀಯ ಕೃಷಿ ಕ್ಷೇತ್ರಕ್ಕೆ ಸಿಕ್ಕ ಅಭೂತಪೂರ್ವ ಗೆಲುವು ಎಂದಿದ್ದಾರೆ.

ಭಾರತದ ಕೃಷಿ ಕ್ಷೇತ್ರದಲ್ಲಿ ಎಂದೂ ಕಂಡರಿಯದ ಬದಲಾವಣೆಗೆ ಈ ಮಸೂದೆ ನಾಂದಿ ಹಾಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಕೋಟ್ಯಂತರ ರೈತರಿಗೆ ಈ ಮಸೂದೆಯಿಂದ ಲಾಭವಾಗಲಿದೆ. ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಆದರೆ ಈ ಮಸೂದೆಯ ಬಗ್ಗೆ ದೇಶಾದ್ಯಂತ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪಂಜಾಬ್​ ಮತ್ತು ಹರಿಯಾಣದಲ್ಲಿ ಪ್ರತಿಭಟನೆ ವಿಕೋಪಕ್ಕೆ ಹೋಗಿದೆ. ಮಸೂದೆಯನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳದ ಸಂಸದೆ ಮತ್ತು ಕೇಂದ್ರ ಸಚಿವೆ ಹರ್ಸಿಮ್ರತ್​ ಕೌರ್​ ಬಾದಲ್​ ಈಗಾಗಲೇ ರಾಜೀನಾಮೆ ನೀಡಿದ್ದಾರೆ.

ಗುರುವಾರ ರಾಜ್ಯಸಭೆಯಲ್ಲಿ ಕೃಷಿ ಮಸೂದೆಯನ್ನು ಮಂಡನೆ ಮಾಡಲಾಗಿತ್ತು. ಮಸೂದೆ ಕುರಿತು ಚರ್ಚೆಗೆ ಇಂದು ಅವಕಾಶ ನೀಡಲಾಗಿತ್ತು. ರಾಜ್ಯಸಭೆಯಲ್ಲಿ ಮಸೂದೆಯನ್ನು ಕಾಂಗ್ರೆಸ್​​, ತೃಣಮೂಲ ಕಾಂಗ್ರೆಸ್​ ಸೇರಿದಂತೆ ಹಲವು ವಿರೋಧ ಪಕ್ಷಗಳು ವಿರೋಧಿಸಿದ್ದವು. ಇಷ್ಟೆಲ್ಲಾ ವಿರೋಧ, ಗದ್ದಲದ ನಡುವೆಯೂ ಕೃಷಿ ಮಸೂದೆಗಳು ರಾಜ್ಯಸಭೆಯಲ್ಲಿ ಅನುಮೋದನೆಯಾಗಿವೆ.

ಪ್ರಜಾಪ್ರಭುತ್ವವವನ್ನು ಗಾಳಿಗೆ ತೂರಿ ಆಡಳಿತಾರೂಢ ಎನ್​ಡಿಎ ಮೈತ್ರಿಕೂಟ ರಾಜ್ಯ ಸಭೆಯಲ್ಲಿ ಮಸೂದೆ ಪಾಸ್​ ಮಾಡಿಕೊಂಡಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದಾರೆ. ರಾಜ್ಯಸಭೆ ನಡೆಯುತ್ತಿರುವ ವೇಳೆ ಇದೇ ಮೊದಲ ಬಾರಿಗೆ ಟಿವಿ ಲೈವ್​ ಕವರೇಜ್​ ಕೂಡ ನಿಲ್ಲಿಸಲಾಗಿತ್ತು. ಈ ವೇಳೆ ಮೋಸದಿಂದ ಬಿಲ್ಲನ್ನು ಪಾಸ್​ ಮಾಡಿಕೊಳ್ಳಲಾಗಿದೆ. ಜನರಿಗೆ ಸತ್ಯವನ್ನು ತಲುಪದಂತೆ ಮಾಡಲು ಬಿಜೆಪಿ ಈ ರೀತಿ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ.

ರೈತರಿಗೆ ಈ ಹಿಂದೆ ನೀಡಲಾಗುತ್ತಿದ್ದ ಕನಿಷ್ಟ ಬೆಂಬಲ ಬೆಲೆ ಮುಂದುವರೆಯಲಿದೆ. ರೈತರು ಈ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here