ಪಾವಂಜೆ : ಕೃಷಿಕರ ಅಂಗಳದಲ್ಲಿ ನಡೆಯಿತು ಕೃಷಿ ಮಾಹಿತಿ ಕಾರ್ಯಾಗಾರ

0
115

ಹಳೆಯಂಗಡಿ : ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ) ಇದರ ಸುವರ್ಣ ಮಹೋತ್ಸವದ ಅಂಗವಾಗಿ “ಕೃಷಿಕರ ಅಂಗಳದಲ್ಲಿ ಕೃಷಿ ಮಾಹಿತಿ ಶಿಬಿರ” ಕಾರ್ಯಾಗಾರ ನಡೆಯಿತು.

ಸುವರ್ಣ ಮಹೋತ್ಸವದ ಅಂಗವಾಗಿ ನಡೆಸುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಸಲುವಾಗಿ ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ನಿಯಮಿತ ಹಳೆಯಂಗಡಿ ಇವರ ಸಹಯೋಗದೊಂದಿಗೆ ಕೃಷಿಕರ ಅಂಗಳದಲ್ಲಿ ಕೃಷಿ ಮಾಹಿತಿ ಶಿಬಿರ ಕಾರ್ಯಕ್ರಮವು ನಡೆಯಿತು. ದಿನಾಂಕ 20.09.2020 ಭಾನುವಾರ ಬೆಳಗ್ಗೆ 9.30 ರಿಂದ ಪಾವಂಜೆ ವ್ಯಾಪ್ತಿಯ ಕೃಷಿ ಮನೆತನದಲ್ಲೊಂದಾದ ಬೀರ್ಣಪಡ್ಪು ಮನೆಯ ವಠಾರದಲ್ಲಿ ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್, ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಯುವತಿ ಮತ್ತು ಮಹಿಳಾ ಮಂಡಲದ ಸಹಕಾರದಲ್ಲಿ ಜರುಗಿತು.

ಇದನ್ನೂ ನೋಡಿ : ವಿದ್ಯಾ ವಿನಾಯಕ ಯುವಕ ಮಂಡಲದ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ

ಕಾರ್ಯಕ್ರಮದ ಉದ್ಘಾಟನೆಯನ್ನು ಅತಿಥಿಗಳು ದೀಪ ಬೆಳಗಿಸಿ ಬೀರ್ಣಪಡ್ಪು ಮನೆಯ ಹಿರಿಯ ಕೃಷಿಕರಾದ ಶ್ರೀಮತಿ ನರ್ಸಿ ದೇವಾಡಿಗ ಇವರ ಅಮೃತ ಹಸ್ತದಿಂದ “ಭತ್ತವನ್ನು ಕಲಸಕ್ಕೆ” ತುಂಬಿಸುವ ಮೂಲಕ ಗ್ರಾಮೀಣ ಸೊಗಡಿನ ಕಲ್ಪನೆಯನ್ನು ಮಾಡುತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳುರು ಇವರು ಕೃಷಿಕರ ಮನೆಯ ಅಂಗಳದಲ್ಲಿ ಕೃಷಿ ಮಾಹಿತಿ ಶಿಬಿರ ಒಂದು ಉತ್ತಮ ಯೋಜನೆಯಾಗಿದ್ದು ಯುವಕ ಮಂಡಲವು ಕೃಷಿ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಕೃಷಿಕರ ಮನೆ ಮನೆಗೆ ಮಾಹಿತಿ ತಲುಪುವಂತೆ ಆಗಲು ವಿಶೇಷ ಕಾಳಜಿ ವಹಿಸಿ ನಡೆಸಿದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿರಂತರ ಈ ರೀತಿಯ ಕಾರ್ಯಕ್ರಮದಿಂದ ಎಲ್ಲಾ ಕೃಷಿಕರು ಸೂಕ್ತ ಸಲಹೆ ಪಡೆದು ಆಧುನಿಕ ಕೃಷಿಯಲ್ಲಿ ಯಶಸ್ಸು ಪಡೆಯಲು ಸಹಕಾರ ಆಗುವುದು ಎಂದು ತಿಳಿಸಿದರು.

ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಜೀವನ್ ಪ್ರಕಾಶ್ ಕಾಮೆರೊಟ್ಟು ಮಾತನಾಡುತ್ತಾ ಪಾವಂಜೆ, ಅರಂದು, ಕೊಳುವೈಲು ಹಾಗೂ ಹಳೆಯಂಗಡಿ ಭಾಗದ ಹಿರಿಯ ಕೃಷಿಕರನ್ನು ನೆನಪಿಸುತ್ತಾ ಕೃಷಿ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರ ಕೆಲಸ ಮಾಡುತ್ತಾ ಜೀವನ ಸಾಗಿಸುವವರನ್ನು ಶ್ಲಾಘಿಸಿದರು.

ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ನಿಯಮಿತ ಹಳೆಯಂಗಡಿ ಇದರ ಅಧ್ಯಕ್ಷರಾದ ಶ್ರೀ ಎಸ್.ಎಸ್. ಸತೀಶ್ ಭಟ್ ಕೊಳುವೈಲು ಇವರು ಮಾತನಾಡುತ್ತಾ ಹಿಂದಿನ ದಿನಗಳಲ್ಲಿ ತಮ್ಮ ಕುಟುಂಬದ ಕೃಷಿ ಕಾಳಜಿಯ ಬಗ್ಗೆ ತಿಳಿಸುತ್ತಾ ಸೊಸೈಟಿಯ ಮುಖಾಂತರ ನೀಡಲ್ಪಡುವ ವಿವಿಧ ಸವಲತ್ತುಗಳನ್ನು ಹೆಚ್ಚು ಹೆಚ್ಚು ಕೃಷಿಕರು ಪಡೆದು ಕೊಂಡು ಅದರ ಸದುಪಯೋಗ ಪಡೆಯುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃಷಿ ಕ್ಷೇತ್ರದಲ್ಲಿ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಜೀವನ್ ಪ್ರಕಾಶ್ ಕಾಮೆರೊಟ್ಟು, ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ನಿಯಮಿತ ಹಳೆಯಂಗಡಿ ಇದರ ಅಧ್ಯಕ್ಷರಾದ ಶ್ರೀ ಎಸ್.ಎಸ್. ಸತೀಶ್ ಭಟ್ ಕೊಳುವೈಲು ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮೂಲ್ಕಿ ಹೋಬಳಿ ಇದರ ಕೃಷಿ ಅಧಿಕಾರಿ ಶ್ರೀ ಅಬ್ದುಲ್ ಬಶೀರ್ ಹಾಗೂ ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ನಿಯಮಿತ ಹಳೆಯಂಗಡಿ ಇಲ್ಲಿನ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಹಿಮಕರ ಟಿ ಸುವರ್ಣ ಭಾಗವಹಿಸಿದ್ದರು.

ವೇದಿಕೆಯಲ್ಲಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮೂಲ್ಕಿ ಹೋಬಳಿ ಇದರ ಕೃಷಿ ಅಧಿಕಾರಿ ಶ್ರೀ ಅಬ್ದುಲ್ ಬಶೀರ್ ಇವರು ಕೃಷಿ ಇಲಾಖೆಯಿಂದ ಕೃಷಿಕರಿಗೆ ದೊರಕುವ ವಿವಿಧ ಸವಲತ್ತುಗಳು, ಕೃಷಿ ವಿಮೆ, ಆಧುನಿಕ ಕೃಷಿಯ ಬಗ್ಗೆ ಮಾಹಿತಿ, ವಿವಿಧ ಬಿತ್ತನೆ ಬೀಜಗಳ ಬಗ್ಗೆ ಮಾಹಿತಿ ಹಾಗೂ ನೂತನ ಕೃಷಿ ಸಲಕರಣೆಗಳ ಬಳಕೆ ಮತ್ತು ಅದರ ಸದುಪಯೋಗದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘ ನಿಯಮಿತ ಹಳೆಯಂಗಡಿ ಇಲ್ಲಿನ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಹಿಮಕರ ಟಿ ಸುವರ್ಣ ಇವರು ಬ್ಯಾಂಕಿನಿಂದ ಕೃಷಿಕರಿಗೆ ನೀಡಲ್ಪಡುವ ವಿವಿಧ ಸವಲತ್ತುಗಳು, ಬಡ್ಡಿ ರಹಿತ ಸಾಲ ಸೌಲಭ್ಯಗಳು, ಕೋಳಿ ಸಾಕಣೆ, ದನ ಸಾಕಣೆ, ಅಡಿಕೆ, ತೆಂಗು ಹಾಗೂ ಇನ್ನಿತರ ಉದ್ದಿಮೆಗಳನ್ನು ಮಾಡುವರೇ ಸಹಕಾರ ಹಾಗೂ ಸಾಲ ಸೌಲಭ್ಯಗಳು, ಸಬ್ಸಿಡಿ ದರದಲ್ಲಿ ಕೃಷಿಕರಿಗೆ ದೊರಕುವ ರಸಗೊಬ್ಬರಗಳ ಬಗ್ಗೆ ವಿಶೇಷವಾಗಿ ಸೂಕ್ತ ಸಲಹೆಗಳನ್ನು ನೀಡಿ ಸಹಕರಿಸಿದರು.

ಪಾವಂಜೆ ವ್ಯಾಪ್ತಿಯ ಅನೇಕ ಕೃಷಿಕರು ಈ ಕಾರ್ಯಕ್ರಮದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಂಡರು. ಜಂಟಿ ಸಂಸ್ಥೆಗಳ ಹೆಚ್ಚಿನ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೀರ್ಣ ಪಡ್ಪು ಮನೆಯ ಸದಸ್ಯರಾದ ರಾಕೇಶ್ ಪ್ರಾರ್ಥನೆ ಸಲ್ಲಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್ ಆಗಿಸಿದ ಅತಿಥಿಗಳಿಗೆ ಸ್ವಾಗತ ನೀಡಿದರು. ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here