ಉಡುಪಿ : ಕೃಷ್ಣ ಮಠದಲ್ಲಿ ತುಳು ಹಾಗೂ ಸಂಸ್ಕೃತ ಭಾಷೆಯಲ್ಲಿ ನಾಮಫಲಕ | ಕನ್ನಡಿಗರ ಆಕ್ರೋಶ!

0
187
Tap to know MORE!

ಉಡುಪಿ, ಡಿಸೆಂಬರ್ 01: ಉಡುಪಿಯ ಪ್ರಸಿದ್ಧ ಕೃಷ್ಣ ಮಠದಲ್ಲಿ ಇದುವರೆಗೂ ಇದ್ದ ಕನ್ನಡ ಫಲಕವನ್ನು ತೆಗೆದು ಹಾಕಿ ತುಳು ಮತ್ತು ಸಂಸ್ಕೃತಿ ಭಾಷೆಯಲ್ಲಿ ಬರೆಯಲಾದ ಹೊಸ ಫಲಕವನ್ನು ಹಾಕಲಾಗಿದೆ. ಇದು ಭಾಷೆಗೆ ಸಂಬಂಧಿಸಿದಂತೆ ವಿವಾದವನ್ನು ಹುಟ್ಟುಹಾಕಿದೆ.

ಕರ್ನಾಟಕದಲ್ಲಿ ನೆಲದ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸಬೇಕು, ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂಬ ಕೂಗು ಹಲವು ವರ್ಷಗಳಿಂದಲೂ ಕೇಳಿಬರುತ್ತಲೇ ಇದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಉಡುಪಿಯಲ್ಲಿ ಸಂಗತಿಯೊಂದು ಬೆಳಕಿಗೆ ಬಂದಿದೆ.

ಕನ್ನಡ ಫಲಕ ಮಾಯ!
ಮಠದ ಮಹಾದ್ವಾರದಲ್ಲಿ ಶ್ರೀ ಕೃಷ್ಣ ಮಠ, ರಜತಪೀಠ ಪುರಂ ಎಂದು ಸಂಸ್ಕೃತ, ತುಳುವಿನಲ್ಲಿ ಬರೆದ ಹೊಸ ಫಲಕವನ್ನು ಅಳವಡಿಸಲಾಗಿದೆ. ಈವರೆಗೆ ಕನ್ನಡ ಫಲಕವೇ ಇತ್ತು. ಕೃಷ್ಣಮಠ ಎಂದು ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಬರೆಯಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಫಲಕ ಬದಲಾವಣೆ ಮಾಡಲಾಗಿದೆ. ಇದು ಚರ್ಚೆಗೆ ಕಾರಣವಾಗಿದೆ.

ತುಳುವರಿಂದ ಸಮರ್ಥನೆ
ಉಡುಪಿಯು ಇತಿಹಾಸದಿಂದಲೂ ತುಳುನಾಡಿನ ಒಂದು ಭಾಗ. ಹಾಗಾಗಿ ತುಳು ಭಾಷೆಗೆ ಮೊದಲ ಪ್ರಾಶಸ್ತ್ಯ ಸಿಗಬೇಕು. ಈ ನಿಟ್ಟಿನಲ್ಲಿ ಮಠದ ನಿರ್ಧಾರವು ಸ್ವಾಗತಾರ್ಹ ಎಂದು ತುಳುನಾಡಿನ ಕೆಲವು ಸಂಘಟನೆಗಳು ಸಹಮತ ಸೂಚಿಸಿವೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕನ್ನಡಿಗರ ಆಕ್ರೋಶ
ಈ ಘಟನೆಗೆ ಪ್ರತಿಕ್ರಿಯಿಸಿದ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ತೆಗೆದು ಹಾಕಿದ್ದು ಸರಿಯಾದ ಕ್ರಮವಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ. ನಾಮಫಲಕದಲ್ಲಿ ಮೊದಲು ಕನ್ನಡ ಇರಬೇಕು. ಆನಂತರ ಇತರ ಭಾಷೆ. ಒಂದು ಧಾರ್ಮಿಕ ಸಂಸ್ಥೆ ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ ಎಂದು ಆಪಾದಿಸಿದ್ದಾರೆ.

ನಾಮಫಲಕದ ಈ ಪ್ರಕರಣ ಸರ್ಕಾರದ ಕಾನೂನಿನ ಸ್ವಷ್ಟ ಉಲ್ಲಂಘನೆಯಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದೆ ಇದನ್ನು ಸರಿಪಡಿಸುವವರೆಗೂ ಹೋರಾಟ ಅನಿವಾರ್ಯ. ಸಮಾಜಕ್ಕೆ ಮಾರ್ಗದರ್ಶನ ಮಾಡುವವರೇ ಇಂತಹ ಕುಚೋದ್ಯ ಕೆಲಸಕ್ಕೆ ಕೈ ಹಾಕಿರುವುದು ಕ್ಷಮಿಸಲಾಗದ ಅಪರಾಧ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ. ತುಳು ಸೋದರ ಭಾಷೆ ಹೌದು. ಆದರೆ ಕರ್ನಾಟಕದಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here