ನವದೆಹಲಿ ಜ.5: ಭಾರತವನ್ನು ನೈಸರ್ಗಿಕ ಅನಿಲ ಆಧಾರಿತ ಆರ್ಥಿಕತೆಯನ್ನಾಗಿ ಮಾಡುವ ಪ್ರಯತ್ನದ ಭಾಗವಾಗಿ ಇನ್ನೂ 10,000 ಸಿಎನ್ಜಿ (ಸಂಕುಚಿತ ನೈಸರ್ಗಿಕ ಅನಿಲ) ಕೇಂದ್ರಗಳನ್ನು ತೆರೆಯಲಾಗುವುದು ಮತ್ತು ಮುಂಬರುವ ದಿನಗಳಲ್ಲಿ ಹಲವಾರು ಲಕ್ಷ ಪಿಎನ್ಜಿ (ಪೈಪ್ ಮಾಡಿದ ನೈಸರ್ಗಿಕ ಅನಿಲ) ಗೃಹ ಸಂಪರ್ಕಗಳನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 450 ಕಿ.ಮೀ ಉದ್ದದ ಕೊಚ್ಚಿ-ಮಂಗಳೂರು ಎಲ್ಎನ್ಜಿ (ದ್ರವೀಕೃತ ನೈಸರ್ಗಿಕ ಅನಿಲ) ಪೈಪ್ಲೈನ್ ಅನ್ನು ಉದ್ಘಾಟಿಸಿದ ಮೋದಿ, ಈ ಸೌಲಭ್ಯವು ತಮ್ಮ ಸರ್ಕಾರದ “ಒಂದು ರಾಷ್ಟ್ರ-ಒಂದು ಅನಿಲ ಗ್ರಿಡ್” ನೀತಿಯ ಭಾಗವಾಗಿದೆ ಎಂದು ಹೇಳಿದರು. ಅಗ್ಗದ, ಅನುಕೂಲಕರ ಮತ್ತು ಪರಿಸರ ಸ್ನೇಹಿಯಾಗಿರುವ ಅನಿಲ ಆಧಾರಿತ ಆರ್ಥಿಕತೆಯತ್ತ ಸಾಗಲು ಸರ್ಕಾರವು ದೃಢವಾದ ಯೋಜನೆಯನ್ನು ಹೊಂದಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ದೇಶದ ಮೊಟ್ಟಮೊದಲ ಚಾಲಕ ರಹಿತ ಮೆಟ್ರೋ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಕಲ್ಲಿದ್ದಲು ಮತ್ತು ಅನಿಲ ಕ್ಷೇತ್ರಗಳಲ್ಲಿ ಸರ್ಕಾರ ಸಾಕಷ್ಟು ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ಇದೇ ವೇಳೆ ಹೇಳಿದರು. ಇಂಧನ ಅಗತ್ಯತೆಯ ವೈವಿಧ್ಯೀಕರಣದ ಮೂಲಕ ದೇಶವನ್ನು ಇಂಧನ-ಸಮರ್ಪಕವಾಗಿಸಲು ಮತ್ತು ವಿದೇಶಿ ವಿನಿಮಯದ ವೆಚ್ಚವನ್ನು ಕಡಿಮೆ ಮಾಡಲು ಭವಿಷ್ಯಕ್ಕಾಗಿ ಸರ್ಕಾರವು ನಿರ್ದಿಷ್ಟ ಯೋಜನೆಗಳನ್ನು ಹೊಂದಿದೆ ಎಂದರು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಪರಿಚಯಾತ್ಮಕ ಭಾಷಣದಲ್ಲಿ, ಹೊಸ ಪೈಪ್ಲೈನ್ಗೆ ಅಂತರರಾಷ್ಟ್ರೀಯ ಪ್ರಾಮುಖ್ಯತೆ ಇರುತ್ತದೆ. ಇದರಲ್ಲಿ ಇಂಗಾಲದ ಹೆಜ್ಜೆಗುರುತು ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ಫೆಡರಲಿಸಂಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಇದೇ ವೇಳೆ, ಕೇರಳ ಮತ್ತು ಕರ್ನಾಟಕ ಸರ್ಕಾರಗಳ ಬೆಂಬಲಕ್ಕೆ ಅಭಿನಂದಿಸಿದರು.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ವಾಜುಭಾಯ್ ವಾಲಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಲೀಧರನ್ ಮತ್ತಿತರರು ಉಪಸ್ಥಿತರಿದ್ದರು.
ಕೆಜಿಎಫ್ ಪ್ರಚಾರ : ಚಿತ್ರತಂಡದಿಂದ ಬಿಡುಗಡೆ ಆಯ್ತು “ಕೆಜಿಎಫ್ ಟೈಮ್ಸ್” ಪತ್ರಿಕೆ