ಬೆಂಗಳೂರು: ದೇಶಾದ್ಯಂತ ಕೋವಿಡ್ 19 ವೈರಸ್ ದಿನೇ ದಿನೇ ಹೆಚ್ಚುತ್ತಿದೆ. ಈಗಾಗಲೇ ತಮಿಳುನಾಡು ಲಾಕ್ ಡೌನ್ ಹೇರಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ನಿರಂತರ ಪ್ರಯತ್ನವನ್ನು ಮಾಡುತ್ತಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಲಾಕ್ ಡೌನ್ ಮಾಡಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.
ಲಾಕ್ ಡೌನ್ ಸಡಿಲಗೊಂಡಿರುವ ಕಾರಣ ಜನರ ಬೇಕಾಬಿಟ್ಟಿ ಓಡಾಟ, ಸಾಮಾಜಿಕ ಅಂತರ ಕಾಪಾಡದೆ ಇರುವ ಕಾರಣ ಸೋಂಕು ವ್ಯಾಪಕವಾಗಿ ಹರಡುತ್ತಿದೆ.
ಮಾರ್ಚ್ 8 ರಂದು ಕೇವಲ ಒಂದು ಕೇಸು ಪತ್ತೆಯಾದ ಬೆಂಗಳೂರಿನಲ್ಲಿ ಜೂನ್22ರ ಹೊತ್ತಿಗೆ 1,279 ಪ್ರಕರಣಗಳು ದಾಖಲಾಗಿದೆ. ಕೇವಲ 420 ಮಂದಿ ಗುಣಮುಖರಾಗಿದ್ದರೆ. ಹೊರ ರಾಜ್ಯದಿಂದ ಬಂದ ಸೋಂಕಿತರಿಂಗಿಂತಲೂ ಜಿಲ್ಲೆಯಲ್ಲೇ ಇರುವ ಸೋಂಕಿತರು ಹೆಚ್ಚಾಗಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕಿತರು ಸದ್ಯಕ್ಕೆ ಬೆಂಗಳೂರಿನಲ್ಲೇ ಇರುವುದು ಆತಂಕ ಸೃಷ್ಟಿ ಮಾಡಿದೆ. ಸದ್ಯದ ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಲಾಗದೆ ಬಿಬಿಎಂಪಿ ಕಂಗಾಲಾಗಿದೆ. ಹಲವು ಅಧಿಕಾರಿಗಳು ಕೂಡ ಲಾಕ್ ಡೌನ್ ಮಾಡುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.