ಕರಾವಳಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಪ್ರಾರಂಭದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅನಿವಾಸಿ ಭಾರತೀಯರು ಭಾರತಕ್ಕೆ ಮರಳಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿತ್ತು ಎನ್ನಲಾಗುತ್ತಿತ್ತು. ಆದರೆ ಈಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭವಾಗಿದ್ದು, ನಗರ ಪ್ರದೇಶದಿಂದ ಗ್ರಾಮಾಂತರ ಪ್ರದೇಶಕ್ಕೂ ಕೊರೋನಾ ಕಾಲಿಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿದಿನ ಶತಕ ಬಾರಿಸುತ್ತಿದ್ದ ಕೊರೋನಾ, ನಿನ್ನೆಯಿಂದ ಕಡಿಮೆ ಆಗತೊಡಗಿತು. ಇಂದು ಜಿಲ್ಲೆಯಲ್ಲಿ 76 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 2,520 ಗೆ ಏರಿದೆ. ಇದರಲ್ಲಿ 1,566 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿಂದು 21 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದರಿಂದಾಗಿ, ಒಟ್ಟು 907 ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 52 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.
ಉಡುಪಿಯಲ್ಲಿ ಕಳೆದ ತಿಂಗಳು ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿತ್ತು. ಬಳಿಕ ಜಿಲ್ಲೆಯಲ್ಲಿ ಜಾರಿಯಾದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಾಣಲಾರಂಭಿಸಿತು. ಇದೀಗ ಸೋಂಕಿತರ ಸಂಖ್ಯೆ ಮತ್ತೆ ಏರುತ್ತಿದ್ದು, ಇಂದು 53 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1786 ಗೆ ಏರಿದೆ.
ಸದ್ಯ 401 ಸಕ್ರಿಯ ಪ್ರಕರಣಗಳು ಇದ್ದು, ಬಹುತೇಕ ಪ್ರಕರಣಗಳು ಕಳೆದ ಒಂದು ವಾರದಲ್ಲಿ ಬಂದಿರುತ್ತದೆ. ಸೋಂಕಿನ ಹಾವಳಿ ಮುಂದೆ ಇಂದು 22 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಚೇತರಿಸಿಕೊಂಡವರ ಸಂಖ್ಯೆ 1,382ಗೆ ಏರಿದೆ. ಉಡುಪಿಯಲ್ಲಿ ಇದುವರೆಗೆ 3 ಸೋಂಕಿತರು ಸಾವನ್ನಪ್ಪಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ಕೊರೋನಾ ಹಾವಳಿ ಮತ್ತೆ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಸಕ್ರಿಯ ಸೋಂಕಿತರ ಸಂಖ್ಯೆಯ ಏರುಗತಿಯಲ್ಲಿ ಸಾಗುತ್ತಿದೆ. ಇಂದು ಜಿಲ್ಲೆಯಲ್ಲಿ 74 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 768ಕ್ಕೆ ಏರಿದ್ದು, 308 ಪ್ರಕರಣಗಳು ಸಕ್ರಿಯವಾಗಿದೆ. ಸುಮಾರು ಎರಡು ತಿಂಗಳಲ್ಲಿ ಕೇವಲ ಎರಡನೇ ಬಾರಿಗೆ ಜಿಲ್ಲೆಯಲ್ಲಿ 50ಕ್ಕೂ ಅಧಿಕ ಸೋಂಕಿತರ ವರದಿಯಾಗಿರುತ್ತದೆ.
ಕೊರೋನಾ ಹಾವಳಿಯ ಮಧ್ಯೆ, ಜಿಲ್ಲೆಯಲ್ಲಿಂದು 17 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 460 ಸೋಂಕಿತರು ಚೇತರಿಕೆ ಕಂಡಿದ್ದಾರೆ.
ಕೇರಳ ರಾಜ್ಯದಲ್ಲಿ ದಾಖಲೆಯ 623 ಸೋಂಕಿತರ ವರದಿಯಾಗಿದೆ. ಇವುಗಳ ಪೈಕಿ 423 ಸೋಂಕಿತರು ಇತರರ ಸಂಪರ್ಕದ ಮೂಲಕ ಸೋಂಕು ತಗುಲಿಸಿಕೊಂಡಿರುವುದು ಸರ್ಕಾರಕ್ಕೆ ಮತ್ತು ಜನತೆಗೆ ಆತಂಕಕ್ಕೆ ದೂಡಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 9,553ಗೆ ಏರಿದ್ದು, 4,982 ಪ್ರಕರಣಗಳು ಸಕ್ರಿಯವಾಗಿದೆ. ಇಂದು 196 ಸೋಂಕಿತರು ಗುಣಮುಖರಾಗಿದ್ದು, ಓರ್ವ ಸೋಂಕಿತ ಸಾವನ್ನಪ್ಪಿರುತ್ತಾರೆ.