ಕೊರೋನಾ : ದೆಹಲಿಯನ್ನು ಹಿಂದಿಕ್ಕಿದ ಆಂಧ್ರಪ್ರದೇಶ!

0
138
Tap to know MORE!

ನವದೆಹಲಿ: ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲೂ ಕೊರೋನಾ ತಾಂಡವವಾಡುತ್ತಿದೆ. ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ಆಂಧ್ರಪ್ರದೇಶ ರಾಜ್ಯದಲ್ಲಿ ಬೇರೆಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರ ಪತ್ತೆಯಾಗುತ್ತಿದೆ. ನಿನ್ನೆ ದೆಹಲಿಯನ್ನು ಹಿಂದಿಕ್ಕಿ, ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯಗಳ ಪೈಕಿ 3 ನೇ ಸ್ಥಾನ ತಲುಪಿದಂತಾಗಿದೆ.

ದೇಶಾದ್ಯಂತ ಕೊರೋನಾ ಅಟ್ಟಹಾಸಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ವೇಗ ಪಡೆದಿದೆ. ಸತತ ಮೂರನೇ ದಿನ 50 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ದೇಶದಲ್ಲಿ ನಿನ್ನೆ 57,486 ಹೊಸ ಸೋಂಕಿತರ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 16,97,054 ತಲುಪಿದೆ. ಇದರಲ್ಲಿ, 5,64,430 ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಕೊರೋನಾ ಹಾವಳಿಯ ನಡುವೆ, ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೂ ವೇಗದಲ್ಲಿ ಏರುತ್ತಿದೆ. ನಿನ್ನೆ ಒಟ್ಟು ದಾಖಲೆಯ 36,554 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರಿಂದ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 10,95,647 ಗೆ ಏರಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 764 ಜನ ಬಲಿಯಾಗಿದ್ದು, ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 36,551 ಗೆ ತಲುಪಿದೆ ಎಂದು ವರದಿಯಾಗಿದೆ. ಅದಲ್ಲದೆ, ದೇಶದಲ್ಲಿ ಇದುವರೆಗೆ, 1.88 ಕೋಟಿ ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

ದಿನೇ ದಿನೇ ಸೋಂಕಿನ ಪರೀಕ್ಷೆಗೆ ಒಳಪಡಿಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದರಿಂದ, ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ದಾಖಲೆಯ 6,42,588 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ನಿನ್ನೆ ದೇಶಾದ್ಯಂತ 4 ರಾಜ್ಯಗಳಲ್ಲಿ 5 ಸಾವಿರಕ್ಕೂ ಅಧಿಕ ಮತ್ತು 9 ಇತರ ರಾಜ್ಯಗಳಲ್ಲಿ ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಆಂಧ್ರಪ್ರದೇಶ (10,376), ಮಹಾರಾಷ್ಟ್ರ (10,320), ತಮಿಳುನಾಡು (5,881) ಮತ್ತು ಕರ್ನಾಟಕ (5,483) ರಾಜ್ಯಗಳಲ್ಲಿ ನಿನ್ನೆ ಕ್ರಮವಾಗಿ ಸೋಂಕಿತರ ವರದಿಯಾಗಿದೆ.

ಮಹಾರಾಷ್ಟ್ರವು ಭಾರತದಲ್ಲಿ ಅತೀ ಹೆಚ್ಚು ಸೋಂಕಿತರು ಇರುವ ರಾಜ್ಯವಾಗಿ (4.22 ಲಕ್ಷ) ಮುಂದುವರಿದಿದೆ. ತಮಿಳುನಾಡು (2.45 ಲಕ್ಷ) ಮತ್ತು ಆಂಧ್ರಪ್ರದೇಶ (1.40 ಲಕ್ಷ) ನಂತರದ ಸ್ಥಾನದಲ್ಲಿದೆ. ಸುಮಾರು ಒಂದೆರಡು ತಿಂಗಳ ಬಳಿಕ ಮೂರನೇ ಸ್ಥಾನ ಬದಲಾದಂತಾಗಿದೆ. ದೆಹಲಿ ನಾಲ್ಕನೇ ಸ್ಥಾನದಲ್ಲಿದೆ
ದೇಶದಲ್ಲಿ ( ದೆಹಲಿಯನ್ನು ಜಿಲ್ಲೆಯಾಗಿ ಪರಿಗಣಿಸದಿದ್ದರೆ ) ಮುಂಬೈ(1.14 ಲಕ್ಷ) ನಗರವು ಅತೀ ಹೆಚ್ಚು ಸೋಂಕಿತರು ಇರುವ ನಗರವಾಗಿದೆ. ಚೆನ್ನೈ (99,794) ಮತ್ತು ಥಾಣೆ (93,342) ನಂತರದ ಸ್ಥಾನದಲ್ಲಿದೆ.

ಭಾರತದಲ್ಲಿ ಕೋವಿಡ್-19 ನಿಂದ ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು, ಸದ್ಯ ದೇಶದಲ್ಲಿ ಚೇತರಿಕೆ ಪ್ರಮಾಣವು ಶೇ.64.6 ಗೆ ಏರಿದೆ ಮತ್ತು ಸಾವಿನ ಪ್ರಮಾಣವು ಶೇ. 2.27 ರಷ್ಟಿದೆ.

ವಿಶ್ವದಲ್ಲಿ ಭಾರತವು ಕೊರೋನಾ ಸೋಂಕಿನಿಂದ ಅತಿ ಹೆಚ್ಚು ಹಾನಿಗೊಳಗಾದ ಮೂರನೇ ರಾಷ್ಟ್ರವಾಗಿದ್ದು, ಅಮೇರಿಕಾ (47.05 ಲಕ್ಷ) ಮತ್ತು ಬ್ರೆಜಿಲ್ (26.66 ಲಕ್ಷ) ಮಾತ್ರ ಭಾರತಕ್ಕಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದೆ. ಭಾರತದಲ್ಲಿ ಜನಸಂಖ್ಯೆಯೂ ಹೆಚ್ಚಿರುವುದರಿಂದ, ಪ್ರತಿ 10 ಲಕ್ಷಕ್ಕೆ ದೇಶದಲ್ಲಿ ಕೇವಲ 1,229 ಸೋಂಕಿತರಿರುತ್ತಾರೆ. ಇದು ವಿಶ್ವದ ಟಾಪ್ 20 ಸೋಂಕು ಪೀಡಿತ ರಾಷ್ಟ್ರಗಳಿಗಿಂತ ಉತ್ತಮವಾಗಿದೆ.

ದೇಶದ ಕೊರೋನಾ ಸೋಂಕಿನ ಕುರಿತು ಮತ್ತಷ್ಟು ವಿಸ್ತೃತವಾದ ವಿವರಗಳು ಇಲ್ಲಿದೆ ನೋಡಿ ಮತ್ತು ಜಗತ್ತಿನ ಎಲ್ಲಾ ರಾಷ್ಟ್ರಗಳ ಅಂಕಿ ಅಂಶಗಳನ್ನು ಇಲ್ಲಿ ನೋಡಿ

LEAVE A REPLY

Please enter your comment!
Please enter your name here