ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಅದರಲ್ಲೂ ರಾಜ್ಯ ರಾಜಧಾನಿಯಲ್ಲಿ ಪ್ರತಿದಿನವೂ ಸಹಸ್ರಾರು ಸಂಖ್ಯೆಯಲ್ಲಿ ಸೋಂಕಿತರ ವರದಿಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಇಂದು, 2,050 ಹೊಸ ಸೋಂಕಿತರ ವರದಿಯಾಗಿದೆ. ಇದನ್ನೂ ಸೇರಿದಂತೆ, ರಾಜ್ಯದಲ್ಲಿಂದು 4,764 ಸೋಂಕಿತರು ದಾಖಲಾಗಿದ್ದಾರೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 75,833 ಕ್ಕೆ ಏರಿಕೆಯಾಗಿದ್ದು, 47,069 ಪ್ರಕರಣಗಳು ಸಕ್ರಿಯವಾಗಿದೆ.
ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದಿನ 2,050 ಸೇರಿದಂತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 27,969 ಗೆ ಏರಿದೆ. ದಕ್ಷಿಣ ಕನ್ನಡ (2,682) ಮತ್ತು ಧಾರವಾಡ (1,562) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.
ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, 2 ಜಿಲ್ಲೆಗಳಲ್ಲಿ 200ಕ್ಕೂ ಅಧಿಕ ಮತ್ತು 8 ಇತರ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಉಡುಪಿ 281, ಬೆಳಗಾವಿ 219, ಕಲಬುರ್ಗಿ 175, ದಕ್ಷಿಣ ಕನ್ನಡ 162, ಧಾರವಾಡ 158, ಮೈಸೂರು 145, ಬೆಂಗಳೂರು ಗ್ರಾಮಾಂತರ 139, ರಾಯಚೂರು 135, ಬಳ್ಳಾರಿ 134, ಚಿಕ್ಕಬಳ್ಳಾಪುರ 110 ಹೊಸ ಸೋಂಕಿತರ ಪತ್ತೆಯಾಗಿದೆ.
ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು ದಾಖಲೆಯ 1,780 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದುವರೆಗೆ, ಒಟ್ಟು 27,239 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಇಂದು 55 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 1,519 ಗೆ ಏರಿದೆ.